ಉತ್ತರ ಬೆಂಗಳೂರಿನಲ್ಲಿ ಬೀದಿದೀಪಗಳ ನಿರ್ವಹಣೆಗೆ ಹೊಸ ಏಜೆನ್ಸಿಗಳ ನೇಮಕ; ಸಾರ್ವಜನಿಕರಿಗೆ ನೇರ ದೂರು ಸಲ್ಲಿಕೆ ಅವಕಾಶ
ಬೆಂಗಳೂರು, ಮೇ 11: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಬೀದಿದೀಪಗಳನ್ನು ತೆರವುಗೊಳಿಸಿ ಇಂಧನ ದಕ್ಷತೆಯ ಎಲ್ಇಡಿ ಬೀದಿದೀಪಗಳನ್ನು ಅಳವಡಿಸುವ ಯೋಜನೆಯ ಭಾಗವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ವ್ಯಾಪ್ತಿಯಲ್ಲಿ ಹೊಸ ನಿರ್ವಹಣಾ ಏಜೆನ್ಸಿಗಳನ್ನು ನೇಮಕ ಮಾಡಲಾಗಿದೆ.
ಸರ್ಕಾರದ ಅನುಮೋದನೆಯೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 34, 35 ಹಾಗೂ 36 ಅನ್ನು ಹೊರತುಪಡಿಸಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿದ್ದ ಹಳೆಯ ಬೀದಿದೀಪ ನಿರ್ವಹಣಾ ಗುತ್ತಿಗೆಗಳನ್ನು ಏಪ್ರಿಲ್ 30, 2026ರಿಂದ ರದ್ದುಪಡಿಸಲಾಗಿದೆ.
ಇದೀಗ ಎಲ್ಇಡಿ ಬೀದಿದೀಪಗಳನ್ನು ಅಳವಡಿಸಿರುವ ಗುತ್ತಿಗೆದಾರರೇ ನಿರ್ವಹಣಾ ಕಾರ್ಯಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ಸಾರ್ವಜನಿಕರು ಬೀದಿದೀಪಗಳಿಗೆ ಸಂಬಂಧಿಸಿದ ದೂರುಗಳನ್ನು ನೇರವಾಗಿ ಸಂಬಂಧಿತ ಏಜೆನ್ಸಿಗಳಿಗೆ ಸಲ್ಲಿಸಿ ತ್ವರಿತ ಪರಿಹಾರ ಪಡೆಯಬಹುದಾಗಿದೆ.
ವಿಧಾನಸಭಾ ಕ್ಷೇತ್ರವಾರು ನಿರ್ವಹಣಾ ಏಜೆನ್ಸಿಗಳ ವಿವರ
ಬ್ಯಾಟರಾಯನಪುರ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರ
- ಏಜೆನ್ಸಿ: M/s eSmart Energy Solutions Ltd
- ವಾರ್ಡ್ಗಳು: 1 ರಿಂದ 14
ಪುಲಕೇಶಿನಗರ, ಸರ್ವಜ್ಞನಗರ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರ
- ಏಜೆನ್ಸಿ: M/s Schnell Energy Pvt Ltd
- ವಾರ್ಡ್ಗಳು: 61 ರಿಂದ 85
ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
- ಏಜೆನ್ಸಿ: M/s Trans Global Energy Pvt Ltd
- ವಾರ್ಡ್ಗಳು: 15 ರಿಂದ 19
ಬೀದಿದೀಪಗಳ ದುರಸ್ತಿ, ನಿರ್ವಹಣೆ ಅಥವಾ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಹಾಯ ಆ್ಯಪ್ 2.0 ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಸಹಾಯವಾಣಿ ಮೂಲಕ ದೂರು ಸಲ್ಲಿಸಬಹುದಾಗಿದೆ.
ನಗರದ ಬೀದಿದೀಪ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದು ಹಾಗೂ ವಿದ್ಯುತ್ ಉಳಿತಾಯ ಸಾಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀದಿದೀಪ ಸಮಸ್ಯೆಗಳ ಕುರಿತು ನಾಗರಿಕರು ಸಂಬಂಧಿತ ಏಜೆನ್ಸಿಗಳನ್ನು ಸಂಪರ್ಕಿಸಿ ತ್ವರಿತ ಪರಿಹಾರ ಪಡೆಯುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಮನವಿ ಮಾಡಿದೆ.
