ಶನಿವಾರ ನೆಹರು ಜನ್ಮದಿನದ ಅಂಗವಾಗಿ ಬೆಂಗಳೂರಿನ ವಿಧಾನಸೌಧ ಆವರಣದ ಜವಾಹರಲಾಲ್ ನೆಹರು ಪ್ರತಿಮೆಗೆ ಪುಷ್ಪನಮನ. ಚಿತ್ರ: ಸಿಎಂಒ ಕರ್ನಾಟಕ
ಬೆಂಗಳೂರು: ವಿವಿಧ ನಿಗಮ ಮಂಡಳಿಗಳಿಗೆ ನೇಮಕದ ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದು, ನಂತರ ಬಾಕಿ ಇರುವ ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ತಿಳಿಸಿದರು. ಮೊದಲ ಪಟ್ಟಿ ಈಗಾಗಲೇ ಪ್ರಕಟವಾಗಿದೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದಕ್ಕೂ ಮೊದಲು ಅವರು ವಿಧಾನಸೌಧದ ಆವರಣದಲ್ಲಿರುವ ನೆಹರೂ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
“ನೀವೆಲ್ಲರೂ ಮುಂದಿನ ದಿನಗಳಲ್ಲಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟಗಳಲ್ಲಿ ಭಾರತ ಜೋಡೋ ಸಂಘಗಳಿಗೆ ಸದಸ್ಯರನ್ನು ಮಾಡಬೇಕು. ಗ್ಯಾರಂಟಿ ಸಮಿತಿಗೆ 40 ಸಾವಿರ ಜನರನ್ನು ನೇಮಿಸಿದ್ದು, 20 ಸಾವಿರ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ಸರ್ಕಾರದ ಐದು ಗ್ಯಾರಂಟಿ ಪ್ರಮುಖವಾಗಿದ್ದು, ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ. ಇಡೀ ದೇಶ ನಮ್ಮ ಗ್ಯಾರಂಟಿ ಯೋಜನೆಗಳನ್ನು ಗಮನಿಸುತ್ತಿದೆ” ಎಂದರು.
“ಎಸ್ಐಆರ್ ವಿಚಾರವಾಗಿ ಪಕ್ಷದ ವತಿಯಿಂದ ಒಂದು ಆಪ್ ಸಿದ್ಧಪಡಿಸಿದ್ದು, ಮತಪಟ್ಟಿಯಿಂದ ಕೈಬಿಡಲಾಗಿರುವ ಅರ್ಹ ಮತದಾರರ ಹೆಸರನ್ನು ಮತ್ತೆ ಸೇರಿಸಲು ನಾವು ಆಲೋಚನೆ ಮಾಡಬೇಕು, ಕೆಲಸ ಮಾಡಬೇಕು. ನಾವು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿದ್ದೇವೆ” ಎಂದು ಹೇಳಿದರು.
ಇದಕ್ಕೂ ಮೊದಲು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವಿದ್ಯುತ್ ಉತ್ಪಾದನೆ ಕ್ಷೇತ್ರಗಳಲ್ಲಿ ನೆಹರೂ ದೂರದೃಷ್ಟಿಯಿಂದ ರೂಪಿಸಿದ ಯೋಜನೆಗಳು ಇಂದಿಗೂ ದೇಶದ ಅಭಿವೃದ್ಧಿಗೆ ನೆರವಾಗುತ್ತಿವೆ ಎಂದರು. ಪಂಚವಾರ್ಷಿಕ ಯೋಜನೆಗಳ ಮೂಲಕ ಉದ್ಯೋಗ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದರು, 1955ರಲ್ಲಿಯೇ ಕಂಪ್ಯೂಟರ್ ಯುಗದ ಬಗ್ಗೆ ಚಿಂತನೆ ನಡೆಸಿದ್ದ ಅವರ ದೂರದೃಷ್ಟಿಯನ್ನು ಮರೆಯಲು ಸಾಧ್ಯವಿಲ್ಲ ಎಂದರು. ಮಹಿಳೆಯರ ರಕ್ಷಣೆಗಾಗಿ ವರದಕ್ಷಿಣೆ ನಿಷೇಧ ಕಾನೂನು ಜಾರಿಗೆ ತಂದ ಕೊಡುಗೆಯನ್ನೂ, ತುಂಗಭದ್ರಾ ಅಣೆಕಟ್ಟು ನಿರ್ಮಾಣಕ್ಕೆ ನೀಡಿದ ಅನುದಾನವನ್ನೂ ಸ್ಮರಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳೇ ದೇಶದ ಸಂಪತ್ತು, ಅವರ ಶಿಕ್ಷಣವೇ ದೇಶಕ್ಕೆ ನಿಜವಾದ ಹೂಡಿಕೆ ಎಂದರು. “ನಾಳೆ ನಿಮ್ಮದು ಎಂದು ಪಂಡಿತ್ ಜವಾಹರ್ ಲಾಲ್ ನೆಹರು ಅವರು ಮಕ್ಕಳಿಗೆ ಸಂದೇಶ ನೀಡಿದರು, ತಮ್ಮ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಿ ಎಂದು ಕರೆ ನೀಡಿದರು” ಎಂದ ಅವರು, ಅಂಬೇಡ್ಕರ್ ಅವರು ಸಂವಿಧಾನ ರಚಿಸುವಂತೆ ಅವರನ್ನು ಕಾನೂನು ಮಂತ್ರಿ ಮಾಡಿದ್ದು ನೆಹರು ಅವರು ಎಂದು ಹೇಳಿದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ನೆಹರು ಅವರು ದೇಶ ಛಿದ್ರವಾಗಬಾರದು ಎಂಬ ಉದ್ದೇಶದಿಂದ 550ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಒಗ್ಗೂಡಿಸಿದರು ಎಂದು ಶಿವಕುಮಾರ್ ತಿಳಿಸಿದರು. ಹೆಚ್ಎಂಟಿ, ಐಟಿಐ, ಇಸ್ರೋ ಸೇರಿದಂತೆ ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ನೆಹರು ಬೆಂಗಳೂರಿನಿಂದಲೇ ಆರಂಭಿಸಿದ್ದನ್ನು ಕರ್ನಾಟಕದ ಜನತೆ ಮರೆಯಲು ಸಾಧ್ಯವಿಲ್ಲ ಎಂದರು.
ನೆಹರು ಅವರು ಅಲಹಾಬಾದ್ ಪಾಲಿಕೆ ಅಧ್ಯಕ್ಷರಾಗಿ ಸ್ಥಳೀಯ ಸಂಸ್ಥೆ ಮೂಲಕ ದೇಶದ ಪ್ರಧಾನಮಂತ್ರಿ ಹುದ್ದೆವರೆಗೆ ಬೆಳೆದರು ಎಂದ ಅವರು, ಕೆಂಗಲ್ ಹನುಮಂತಯ್ಯ, ರಾಜಗೋಪಾಲಚಾರಿ, ಬಿ.ಡಿ. ಜತ್ತಿ ಸೇರಿದಂತೆ ಅನೇಕರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಬೆಳೆದವರು ಎಂದರು. “ಎಲ್ಲರೂ ಶಾಸಕರಾಗಿಯೇ ರಾಜಕೀಯ ಆರಂಭಿಸಬೇಕಿಲ್ಲ. ನಾವೆಲ್ಲರೂ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು. ಸಿದ್ದರಾಮಯ್ಯ ಅವರು ತಾಲ್ಲೂಕು ಬೋರ್ಡ್‌ಗೆ ಸದಸ್ಯರಾಗಿದ್ದರು” ಎಂದು ಹೇಳಿದರು.
