ಮಳೆಗಾಲಕ್ಕೂ ಮುನ್ನ ಶಿಥಿಲ ಕಟ್ಟಡ, ಕಾಂಪೌಂಡ್ ಗೋಡೆಗಳ ತೆರವಿಗೆ ಸೂಚನೆ; ಪ್ರವಾಹ ಪ್ರದೇಶಗಳಿಗೆ ಶಾಶ್ವತ ಪರಿಹಾರಕ್ಕೆ ರಾಜೇಂದ್ರ ಚೋಳನ್ ಆದೇಶ
ಬೆಂಗಳೂರು, ಮೇ 11: ಮಳೆಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿಥಿಲಗೊಂಡ ಕಟ್ಟಡಗಳು ಹಾಗೂ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಗುರುತಿಸಿ ತುರ್ತಾಗಿ ತೆರವುಗೊಳಿಸುವಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಇಂಜಿನಿಯರಿಂಗ್ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಸ್ವತ್ತುಗಳ ಶಿಥಿಲಗೊಂಡ ಕಟ್ಟಡಗಳು ಮತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ಕಾಂಪೌಂಡ್ ಗೋಡೆಗಳ ಸಮಗ್ರ ಪಟ್ಟಿ ಸಿದ್ಧಪಡಿಸಿ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರಕ್ಕೆ ಸೂಚನೆ
ಮಳೆಗಾಲದಲ್ಲಿ ನೀರು ನಿಲ್ಲುವ ಹಾಗೂ ಪ್ರವಾಹಕ್ಕೆ ಒಳಗಾಗುವ ತಗ್ಗು ಪ್ರದೇಶಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಆಯುಕ್ತರು, ಅಂತಹ ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ಕೇವಲ ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗದೇ, ಭವಿಷ್ಯದಲ್ಲಿ ನೀರು ನಿಲ್ಲದಂತೆ ಶಾಶ್ವತ ಪರಿಹಾರಗಳನ್ನು ರೂಪಿಸಿ ಜಾರಿಗೆ ತರಬೇಕೆಂದು ಅವರು ಸೂಚಿಸಿದರು.
ಚರಂಡಿ ಹೂಳೆತ್ತುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ
ಪೂರ್ವ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಯ ಚರಂಡಿಗಳಲ್ಲಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚರಂಡಿಗಳಲ್ಲಿ ಮಳೆ ನೀರು ಅಡೆತಡೆಯಿಲ್ಲದೆ ಹರಿಯುವಂತೆ ಕ್ರಮ ಕೈಗೊಂಡು, ಮಳೆಗಾಲದಲ್ಲಿ ಜಲಾವೃತ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ರಸ್ತೆ ಕಾಮಗಾರಿಗಳನ್ನು ವೇಗಗೊಳಿಸಲು ಆದೇಶ
ಪ್ರಗತಿಯಲ್ಲಿರುವ ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಗುಣಮಟ್ಟದ ರಸ್ತೆ ಸೌಲಭ್ಯ ಒದಗಿಸುವಂತೆ ರಾಜೇಂದ್ರ ಚೋಳನ್ ಸೂಚಿಸಿದರು.
ರಸ್ತೆ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಎಲ್ಲ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ, ಹೊಸ ಗುಂಡಿಗಳು ಉಂಟಾಗದಂತೆ ನೋಡಿಕೊಳ್ಳುವ ಜೊತೆಗೆ ಈಗಾಗಲೇ ಉಂಟಾಗಿರುವ ರಸ್ತೆ ಗುಂಡಿಗಳನ್ನು ಕೂಡ ತುರ್ತಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
