ಮೈಸೂರು:
ಸಂಸ್ಕೃತಿ, ಸಂಸ್ಕಾರಗಳು ಮಾಯವಾಗುತ್ತಿರುವ ಇಂದಿನ ಆಧುನಿಕ ದಿನಗಳಲ್ಲಿ ಜೀವನದ ಮೌಲ್ಯಗಳ ಬಗ್ಗೆ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದವರು ಮಾಡುತ್ತಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಹುಣಸೂರು ರಸ್ತೆಯಲ್ಲಿರುವ ಲಿಂಗದೇವರಕೊಪ್ಪಲುನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ನಿರ್ಮಾಣವಾಗುತ್ತಿರುವ ಮಹಾಶಿವಲಿಂಗ ಸ್ಥಾಪನೆ ಹಾಗೂ ರಾಜಯೋಗ ಮ್ಯೂಸಿಯಂ ನಿರ್ಮಾಣದ ಭೂಮಿ ಪೂಜೆಯನ್ನು ಭಾನುವಾರ ನೇರವೇರಿಸಿದ ಬಳಿಕ ಅವರು ಮಾತನಾಡಿದರು.
ಸಾರ್ವಜನಿಕರಲ್ಲಿ ಆದ್ಮಾತಿಕತೆಯ ವಿಚಾರಧಾರೆಗಳನ್ನು ಬಿತ್ತುವ ಕಾರ್ಯದಲ್ಲಿ ಸದಾ ಮುಂದಿರುವುದರ ಜೊತೆಗೆ ರಕ್ಷಾ ಬಂಧನ್ ದಿನದಂದು ಪ್ರತಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳಿ ರಕ್ಷಾ ಬಂಧನದ ಮಹತ್ವ ಸಾರುವ ಕಾರ್ಯದಲ್ಲಿ ತೊಡಗುವುದರ ಮೂಲಕ ರಕ್ಷಾ ಬಂಧನದ ಮಹತ್ವವನ್ನು ತಿಳಿಸುತ್ತಾರೆ ಎಂದರು.
ಆಧ್ಯಾತ್ಮಿಕ ಚಿಂತನೆಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸರ್ವರ ಹಿತವನ್ನು ಬಯಸಿ ಸದಾ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕಾರ್ಯವನ್ನು ಎಷ್ಟು ಬಣ್ಣಿಸಿದರೂ ಸಾಲದು ಎಂದು ಹೇಳಿದರು.
ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಸರ್ವರನ್ನು ಸಮಾನವಾಗಿ ಕಂಡು ವಿಶ್ವಕ್ಕೆ ಶಾಂತಿಯ ಸಂದೇಶಗಳನ್ನು ಸಾರುವ ಕೆಲಸವನ್ನು ಇವರು ಮಾಡುತ್ತಿದ್ದು, ಸಮಾಜದ ಒಳಿತಿಗಾಗಿ, ಸರ್ವರ ಹಿತವನ್ನೇ ಬಯಸುವ ಇವರ ಕಾರ್ಯ ಇದೇ ರೀತಿ ಮುಂದುವರಿಯಲಿ ಎಂದರು.
ದೇಶ, ವಿದೇಶಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ತುಂಬುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪರೋಕ್ಷವಾಗಿ ನೆರವಾಗುತ್ತಿದ್ದಾರೆ. ಸರ್ವರ ಕಲ್ಯಾಣವನ್ನು ಬಯಸುವ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಇದೀಗ ಮಹಾಶಿವಲಿಂಗ ಮತ್ತು ರಾಜಯೋಗ ಮ್ಯೂಸಿಯಂ ಸ್ಥಾಪನೆ ಮಾಡಲು ಮುಂದಾಗಿದ್ದು ಆದಷ್ಟು ಬೇಗ ಈ ಕೆಲಸ ಮುಕ್ತಾಯಗೊಂಡು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ರಾಜಯೋಗಿ ಬಿಕೆ ಕರುಣಾಜಿ, ಬ್ರಮ್ಮಕುಮಾರಿಸ್ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿಕೆ ಲಕ್ಷ್ಮೀಜಿ, ಬ್ರಹ್ಮಕುಮಾರಿಸ್ ಲೆಕ್ಕಪತ್ರವಿಭಾಗದ ಮುಖ್ಯಸ್ಥರಾದ ರಾಜಯೋಗಿ ಬಿಕೆ ಲಲಿತ್ ಜಿ ಇನಾನಿ, ಕೊಡಗು ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಕೆ.ಆರ್.ನಿರಂಜನ್, ಉದ್ಯಮಿ ಗೋವಿಂದೇಗೌಡ ಸೇರಿದಂತೆ ಇತರರು ಹಾಜರಿದ್ದರು.