ಬೆಂಗಳೂರು ಜಲಮಂಡಳಿ ನೇರ ನೇಮಕಾತಿ: ಜುಲೈ 6ರಿಂದ ದಾಖಲಾತಿ ಪರಿಶೀಲನೆ; ಅರ್ಹ ಅಭ್ಯರ್ಥಿಗಳಿಗೆ ಹಾಜರಾಗುವಂತೆ ಸೂಚನೆ
ಬೆಂಗಳೂರು, ಜೂನ್ 30: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 2025ರ ನೇರ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮಂಡಳಿಯ ಅಧಿಕೃತ ಪ್ರಕಟಣೆಯ ಪ್ರಕಾರ, ನೇರ ನೇಮಕಾತಿ ಅಧಿಸೂಚನೆ ಸಂಖ್ಯೆ: ಇಡಿ/ಕೆಇಎ/ಆಡಳಿತ/ಸಿ.ಆರ್.25/2025 (RPC) ಹಾಗೂ ನೇರ ನೇಮಕಾತಿ ಅಧಿಸೂಚನೆ ಸಂಖ್ಯೆ: ಇಡಿ/ಕೆಇಎ/ಆಡಳಿತ/ಸಿ.ಆರ್.26/2025 (ಕಲ್ಯಾಣ ಕರ್ನಾಟಕ), ದಿನಾಂಕ 15-11-2025ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆಗೆ ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಜುಲೈ 6, 2026ರಿಂದ ಜುಲೈ 24, 2026ರವರೆಗೆ ವಿವಿಧ ದಿನಾಂಕಗಳಲ್ಲಿ ವೃಂದವಾರು ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.
ಅಭ್ಯರ್ಥಿಗಳು ತಮ್ಮಗೆ ನಿಗದಿಪಡಿಸಿರುವ ದಿನಾಂಕದಂದು ಅಗತ್ಯ ಮೂಲ ದಾಖಲಾತಿಗಳು ಹಾಗೂ ಪೂರಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವಂತೆ ಮಂಡಳಿ ಸೂಚಿಸಿದೆ.
ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ, ಪರಿಶೀಲನೆ ನಡೆಯುವ ದಿನಾಂಕ, ಸಮಯ, ಸ್ಥಳ ಹಾಗೂ ಇತರೆ ಅಗತ್ಯ ಮಾಹಿತಿಯನ್ನು ಬೆಂಗಳೂರು ಜಲಮಂಡಳಿಯ ಅಧಿಕೃತ ವೆಬ್ಸೈಟ್ www.bwssb.gov.in ನಲ್ಲಿ ವೀಕ್ಷಿಸಬಹುದಾಗಿದೆ.
ದಾಖಲಾತಿ ಪರಿಶೀಲನೆಗೆ ನಿಗದಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ, ಪ್ರಕಟಿತ ವೇಳಾಪಟ್ಟಿಯಂತೆ ತಪ್ಪದೇ ಹಾಜರಾಗುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.