Home ಬೆಂಗಳೂರು ನಗರ ರಾಜ್ಯಾದ್ಯಂತ ನೈರ್ಮಲ್ಯ ಅಭಿಯಾನಕ್ಕೆ ಸೂಚನೆ; ಕಲುಷಿತ ನೀರು ಸೇವನೆಯಿಂದ ಮರಣ ಪ್ರಕರಣ ಮರುಕಳಿಸಿದರೆ ಜಿ.ಪಂ ಸಿಇಒ...

ರಾಜ್ಯಾದ್ಯಂತ ನೈರ್ಮಲ್ಯ ಅಭಿಯಾನಕ್ಕೆ ಸೂಚನೆ; ಕಲುಷಿತ ನೀರು ಸೇವನೆಯಿಂದ ಮರಣ ಪ್ರಕರಣ ಮರುಕಳಿಸಿದರೆ ಜಿ.ಪಂ ಸಿಇಒ ಅಮಾನತು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ

28
0
Chief Minister Siddaramaiah warns suspension of Zilla Panchayat CEO if there is a recurrence of deaths due to consumption of contaminated water
Chief Minister Siddaramaiah warns suspension of Zilla Panchayat CEO if there is a recurrence of deaths due to consumption of contaminated water

ಬೆಂಗಳೂರು:

ಕಲುಷಿತ ನೀರು ಸೇವನೆಯಿಂದ ಮರಣ ಪ್ರಕರಣ ಪ್ರಕರಣಗಳು ಮರುಕಳಿಸಿದರೆ ಜಿ.ಪಂ ಸಿಇಒ ಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು. ಹಾಗೂ ನಗರಸಭೆಗಳ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಭೆಯಲ್ಲಿ ಅವರು ಮಾತನಾಡಿದರು.

15 ದಿನಗಲ್ಲಿ ವರದಿ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಡವರು ವಾಸಿಸುವ ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಚರಂಡಿ ನೀರಿನ ಪೈಪುಗಳು ಪ್ರತ್ಯೇಕವಾಗಿರುವುದನ್ನು ಖಾತ್ರಿಪಡಿಸಬೇಕು. ಪ್ರತ್ಯೇಕ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ ರಾಜ್ಯದಲ್ಲಿ ಈ ಕುರಿತು ನೈರ್ಮಲ್ಯ ಅಭಿಯಾನ ಕೈಗೊಂಡು 15 ದಿನಗಳಲ್ಲಿ ಈ ಕುರಿತು ವರದಿ ಸಲ್ಲಿಸಬೇಕೆಂದು ಮುಖ್ಯ ಮಂತ್ರಿಗಳು ಸೂಚಿಸಿದರು.

ರಾಜ್ಯದಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ 13-14 ಜನ ಸಾವಿಗೀಡಾಗಿದ್ದು, ಚಿತ್ರ ದುರ್ಗದಲ್ಲಿಯೇ 6-7 ಜನ ಅಸುನೀಗಿದ್ದಾರೆ. ಇದನ್ನು ತಪ್ಪಿಸಲು ಸಾಧ್ಯವಿದೆ. ಕೆಲವೆಡೆ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಅವಘಡಗಳು ಸಂಭವಿಸುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಾಲ್ಕು ಇಲಾಖೆಗಳ ನಡುವೆ ಸಮನ್ವಯ: ಕಾವಾಡಿಗರಹಟ್ಟಿಯಲ್ಲಿ ಇತ್ತೀಚೆಗೆ ಒಬ್ಬರು ಮರಣ ಹೊಂದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ಪ್ರಕರಣಗಳು ಸಂಭವಿಸುತ್ತದೆ. ಗ್ರಾಮೀಣಾಭಿವೃದ್ಧಿ, ಆರೋಗ್ಯ, ಪೌರಾಡಳಿತ ಹಾಗೂ ನಗರಾಭಿವೃದ್ಧಿ – ಈ ನಾಲ್ಕು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಹಾಸ್ಟೆಲ್ ಗಳಲ್ಲಿಯೂ ವಿದ್ಯಾರ್ಥಿಗಳು ಕಲುಷಿತ ನೀರು ಕುಡಿದು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಸಮರೋಪಾದಿಯಲ್ಲಿ ಕೆಲಸಗಳಾಗಬೇಕು ಎಂದರು.

ಟ್ಯಾಂಕ್ ಗಳ ಸ್ವಚ್ಛತಾ ಕಾರ್ಯ

  • ಪೈಪ್ ಲೈನ್ ಸರಿಪಡಿಸುವುದು, ಟ್ಯಾಂಕ್ ಸ್ವಚ್ಛತಾ ಕಾರ್ಯ ತುರ್ತಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.
  • ನೈರ್ಮಲ್ಯ ಮತ್ತು ಸ್ವಚ್ಛತೆಗೆ ಪ್ರತ್ಯೇಕವಾಗಿ ಕನಿಷ್ಠ ಮೊತ್ತವನ್ನು ನಿಗದಿ ಮಾಡಬೇಕು ಎಂದು ಆರೋಗ್ಯ ಸಚಿವರು ಅಭಿಪ್ರಾಯ ಪಟ್ಟರು. ಸಾಮಾನ್ಯವಾಗಿ ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಯಡಿ ಆದ್ಯತೆಯನ್ನು ರಸ್ತೆ, ಇನ್ನಿತರ ಕಾಮಗಾರಿಗಳಿಗೆ ವಹಿಸಲಾಗುತ್ತದೆ ಎಂದರು.
  • 39 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. 121 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ 86 ಕೋಟಿ ರೂ.ಗಳ ಅನುದಾನ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಸಭೆಯ ಗಮನಕ್ಕೆ ತಂದರು.

ಸ್ವಚ್ಛತೆಯ ಬಗ್ಗೆ ಜಾಗೃತಿ: ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು. ನೀರಿನ ಸ್ವಚ್ಛತೆ ಬಗ್ಗೆ ಆದ್ಯತೆ ವಹಿಸಿ ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಆರೋಗ್ಯ ಸಚಿವ ಗುಂಡೂ ರಾವ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಹಕಾರ ಸಚಿವ ಕೆ.ಎನ್.ರಾಜಪ್ಪ, ಪೌರಾಡಳಿತ ಸಚಿವ ರಹೀಮ್ ಖಾನ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here