ಬೆಂಗಳೂರು: ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ವೇಗ ನೀಡಲು, ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ವ್ಯವಸ್ಥೆಯನ್ನು ಅರ್ಜಿ ಸಲ್ಲಿಕೆಯಿಂದ ಪ್ರಮಾಣಪತ್ರ ವಿತರಣೆ ಹಾಗೂ ನಂತರದ ವಹಿವಾಟುಗಳವರೆಗೆ ಸಂಪೂರ್ಣ ಆನ್ಲೈನ್ ಮಾಡುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಬದಲಾವಣೆ ಏಕೆ
ಮೂಲಸೌಕರ್ಯ ಯೋಜನೆಗಳ ಭೂಸ್ವಾಧೀನವನ್ನು ಸುಲಭಗೊಳಿಸುವುದು ಟಿಡಿಆರ್ನ ಉದ್ದೇಶ. ಆದರೆ ಈ ವ್ಯವಸ್ಥೆ ಬಹುತೇಕ ಕಾಗದದ ಕಡತಗಳನ್ನೇ ಅವಲಂಬಿಸಿದ್ದು, ಸಮರ್ಪಕ ನಿಗಾ ಹಾಗೂ ಪಾರದರ್ಶಕತೆಯ ಕೊರತೆ ಇದೆ ಎಂದು ಸಚಿವರು ಹೇಳಿದರು.
“ಬೆಂಗಳೂರಿನ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಸ್ತೆ ಅಗಲೀಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣ ತುರ್ತು ಹಾಗೂ ಅನಿವಾರ್ಯ. ಸಮರ್ಪಕ ನಿಗಾ ಹಾಗೂ ಪಾರದರ್ಶಕತೆಯ ಕೊರತೆಯಿಂದ ಜನರಲ್ಲಿ ಅಸಮಾಧಾನ ಮೂಡಿದ್ದು, ವ್ಯವಸ್ಥೆಯ ಮೇಲಿನ ವಿಶ್ವಾಸ ಕುಗ್ಗಿದೆ” ಎಂದು ಅವರು ಹೇಳಿದರು.
ಯಾವುದೆಲ್ಲ ಆನ್ಲೈನ್ ಆಗಲಿದೆ
- ರಸ್ತೆ ಹಾಗೂ ಆಸ್ತಿ ದಾಖಲೆಗಳ ಪರಿಶೀಲನೆಯಿಂದ ಅಂತಿಮ ಟಿಡಿಆರ್ ಪ್ರಮಾಣಪತ್ರ ವಿತರಣೆವರೆಗಿನ ಪ್ರತಿ ಹಂತ
- ಟಿಡಿಆರ್ ಪ್ರಮಾಣಪತ್ರಗಳ ಖರೀದಿ, ಮಾರಾಟ ಹಾಗೂ ಅಂತಿಮ ಬಳಕೆ
- ಅರ್ಜಿಯ ಸ್ಥಿತಿಯನ್ನು ನಾಗರಿಕರು ಆನ್ಲೈನ್ನಲ್ಲೇ ತಿಳಿಯಲು ಅನುವಾಗುವ ನಿಗಾ ವ್ಯವಸ್ಥೆ
ಜನರು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆಯುವ ಅಥವಾ ಮಧ್ಯವರ್ತಿಗಳನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ; ವಿಳಂಬ ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಪಾರದರ್ಶಕ ವ್ಯವಸ್ಥೆಯಿಂದ ಜನರ ವಿಶ್ವಾಸ ಮರಳಲಿದ್ದು, ಮೂಲಸೌಕರ್ಯ ಯೋಜನೆಗಳ ಭೂಸ್ವಾಧೀನ ಸುಗಮ ಹಾಗೂ ವೇಗವಾಗಲಿದೆ ಎಂದೂ ಅವರು ಹೇಳಿದರು.
ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್. ಹಾಗೂ ಜಿ. ಜಗದೀಶ್ ಮತ್ತು ಬೆಂಗಳೂರು ನಗರ ಸಿಇಒ ಆರ್. ಯತೀಶ್ ಸಭೆಯಲ್ಲಿ ಭಾಗವಹಿಸಿದ್ದರು.
