ಹಿಂದಿನ ಮಳೆಯ ವೇಳೆ ಬೆಂಗಳೂರಿನ ರಸ್ತೆಯಲ್ಲಿ ಹರಿಯುತ್ತಿರುವ ಮಳೆನೀರು. ಫೈಲ್ ಚಿತ್ರ: ದಿ ಬೆಂಗಳೂರು ಲೈವ್ ಸಂಗ್ರಹ.
ಬೆಂಗಳೂರು: ತೀವ್ರ ಚಂಡಮಾರುತ ‘ಮುರಸು’ ದಕ್ಷಿಣ ಆಂಧ್ರಪ್ರದೇಶ ಕರಾವಳಿಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ, ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆ ನವೆಂಬರ್ 5ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಸೋಮವಾರ ತಿಳಿಸಿದೆ.
ಇದೇ ಅವಧಿಯಲ್ಲಿ ರಾಜ್ಯದ ಅಲ್ಲಲ್ಲಿ ಗುಡುಗು-ಮಿಂಚು ಸಹಿತ ಮಳೆ ಹಾಗೂ ಒಳನಾಡಿನ ಒಂದೆರಡು ಕಡೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆಯಾದ ದೈನಂದಿನ ವರದಿ ತಿಳಿಸಿದೆ.
ಚಂಡಮಾರುತ ಸಾಗುತ್ತಿರುವ ದಿಕ್ಕು
ಸೋಮವಾರ ಬೆಳಿಗ್ಗೆ 8.30ಕ್ಕೆ ಚಂಡಮಾರುತವು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ, ನೆಲ್ಲೂರಿನಿಂದ ಸುಮಾರು 160 ಕಿ.ಮೀ. ಪೂರ್ವ-ಆಗ್ನೇಯಕ್ಕೆ ಹಾಗೂ ಚೆನ್ನೈನಿಂದ 180 ಕಿ.ಮೀ. ಈಶಾನ್ಯಕ್ಕೆ ಇತ್ತು. ಸೋಮವಾರ ರಾತ್ರಿ 11.30ರಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆಯ ನಡುವೆ ಒಂಗೋಲ್ನ ದಕ್ಷಿಣಕ್ಕೆ, ನೆಲ್ಲೂರು ಮತ್ತು ನರಸಾಪುರದ ನಡುವೆ ದಕ್ಷಿಣ ಆಂಧ್ರಪ್ರದೇಶ ಕರಾವಳಿಯನ್ನು ದಾಟುವ ಸಾಧ್ಯತೆ ಹೆಚ್ಚಿದ್ದು, ಆಗ ಗಾಳಿಯ ವೇಗ ಗಂಟೆಗೆ 100ರಿಂದ 110 ಕಿ.ಮೀ. ಹಾಗೂ ಗರಿಷ್ಠ 120 ಕಿ.ಮೀ. ಇರಲಿದೆ.
ಬೆಂಗಳೂರು ಮುನ್ಸೂಚನೆ
ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಹಾಗೂ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಸುಮಾರು 30°C ಮತ್ತು 20°C ಇರಲಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಬಹುತೇಕ ಕಡೆ ಸೋಮವಾರ ಮತ್ತು ಮಂಗಳವಾರ, ಹಲವು ಕಡೆ ಬುಧವಾರ ಹಾಗೂ ಕೆಲವು ಕಡೆ ಗುರುವಾರ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ ಮುನ್ಸೂಚನೆ ಇದೆ. ಶುಕ್ರವಾರದಿಂದ ಭಾನುವಾರದವರೆಗೆ ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಭಾರಿ ಮಳೆಯ ಮುನ್ನೆಚ್ಚರಿಕೆ ಇರುವ ಜಿಲ್ಲೆಗಳು
- ನವೆಂಬರ್ 2: ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು, ಹಾಸನ ಮತ್ತು ರಾಮನಗರ
- ನವೆಂಬರ್ 3: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು
- ನವೆಂಬರ್ 4: ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ
- ನವೆಂಬರ್ 5: ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು
ಈ ಜಿಲ್ಲೆಗಳ ಒಂದೆರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನವೆಂಬರ್ 6, 7 ಹಾಗೂ 8ರಂದು ಭಾರಿ ಮಳೆಯ ಮುನ್ನೆಚ್ಚರಿಕೆ ಇಲ್ಲ.
