ಸೆ.30ರಂದು ಶಿಕಾರಿಪುರದಿಂದ ಭಾರತ ಜೋಡೋ ಯಾತ್ರೆ 2.0; 84 ಕ್ಷೇತ್ರಗಳಲ್ಲಿ 84 ದಿನ ಪಾದಯಾತ್ರೆ
ಬೆಂಗಳೂರು: ಕಾಂಗ್ರೆಸ್ ಪಕ್ಷ ಸೋತಿರುವ 84 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಜೋಡೋ ಯಾತ್ರೆ 2.0 ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 30ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಆರಂಭವಾಗಲಿದೆ ಎಂದು ಬಿ ಕೆ ಹರಿಪ್ರಸಾದ್ ತಿಳಿಸಿದರು. ಇಂದಿರಾ ಗಾಂಧಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿವರ ನೀಡಿದರು.
84 ಕ್ಷೇತ್ರಗಳಲ್ಲಿ 84 ದಿನಗಳ ಕಾಲ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮದ ಭಾಗವಾಗಿ ಮಧ್ಯಾಹ್ನ 1ರಿಂದ ಸಂಜೆಯವರೆಗೆ ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಆರಂಭಿಕ ಪಾದಯಾತ್ರೆಯಲ್ಲಿ ಮಧು ಬಂಗಾರಪ್ಪ, ರುದ್ರಪ್ಪ ಲಮಾಣಿ, ಜಮೀರ್ ಅಹ್ಮದ್ ಖಾನ್, ಬಿ ಎಲ್ ಶಂಕರ್ ಹಾಗೂ ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಳಿಕ ಅಕ್ಟೋಬರ್ 4–5ರಿಂದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹರಿಪ್ರಸಾದ್ ತಿಳಿಸಿದರು.
ರಾಹುಲ್ ಗಾಂಧಿ ಅವರು 2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭಿಸಿದ್ದ ಭಾರತ ಜೋಡೋ ಯಾತ್ರೆಯ ನೆನಪಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ವರ್ಷ ಸೆಪ್ಟೆಂಬರ್ 30ರಂದು ಗುಂಡ್ಲುಪೇಟೆಯಿಂದ ಕರ್ನಾಟಕದಲ್ಲಿ ಯಾತ್ರೆ ಆರಂಭವಾಗಿತ್ತು. ಅಕ್ಟೋಬರ್ 21ರವರೆಗೆ ರಾಜ್ಯದ 11 ಜಿಲ್ಲೆಗಳಲ್ಲಿ ಸುಮಾರು 600 ಕಿ.ಮೀ ಪಾದಯಾತ್ರೆ ನಡೆಸಿ, ಜನರನ್ನು ಸಂಪರ್ಕಿಸಿ ಅವರ ಸಂಕಷ್ಟಗಳನ್ನು ಆಲಿಸಿದ್ದರು ಎಂದು ಅವರು ಹೇಳಿದರು.
ಹೊಸ ಯಾತ್ರೆಯ ಮಾರ್ಗದ ಬಗ್ಗೆ ವಿವರಿಸಿದ ಹರಿಪ್ರಸಾದ್, ರಾಹುಲ್ ಗಾಂಧಿ ಪಾದಯಾತ್ರೆ ನಡೆಸಿದ್ದ 11 ಜಿಲ್ಲೆಗಳನ್ನು ಹೊರತುಪಡಿಸಿ 29 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಶಿಕಾರಿಪುರದಿಂದಲೇ ಯಾತ್ರೆ ಆರಂಭಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ, ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಿಂದಲೇ ಆ ಪಕ್ಷದ ನ್ಯೂನತೆಗಳನ್ನು ಜನರಿಗೆ ತಿಳಿಸುವ ಉದ್ದೇಶವಿದೆ ಎಂದು ಅವರು ಹೇಳಿದರು. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಜನಜಾಗೃತಿ ಮೂಡಿಸುವುದಾಗಿಯೂ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಉಪಸ್ಥಿತರಿದ್ದರು.
