ನವೆಂಬರ್ 26ರಂದು ಬೆಂಗಳೂರಿನ ಸಂವಿಧಾನ ಗೌರವ ದಿನ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸುತ್ತಿರುವ ಬಿಜೆಪಿ ನಾಯಕರು. ಚಿತ್ರ: ಬಿಜೆಪಿ ಕರ್ನಾಟಕ
ಬೆಂಗಳೂರು: ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೆ ನೀಡಿರುವ ಭಗವದ್ಗೀತೆ, ಇದನ್ನು ಬಾಬಾ ಸಾಹೇಬರು ಕೇವಲ ದಲಿತರಿಗೆ ಬರೆದಿಲ್ಲ; ಅರವತ್ತು ವರ್ಷ ದೇಶ ಆಳಿದ ಕಾಂಗ್ರೆಸ್‌ನವರು ಸಂವಿಧಾನ ದಲಿತರಿಗೆ ಮಾತ್ರ ಸೀಮಿತ ಎನ್ನುವ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನವೆಂಬರ್ 26ರಂದು ಆರೋಪಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಭಾರತದ ಸಂವಿಧಾನದ ಆಶಯ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ಸ್ಮರಿಸುವ ಅಂಗವಾಗಿ ಹಮ್ಮಿಕೊಂಡಿದ್ದ ‘ಸಂವಿಧಾನ ಗೌರವ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಎಲ್ಲಿ ಅಂಬೇಡ್ಕರ್ ಇದ್ದಾರೋ ಅಲ್ಲಿ ಸಂವಿಧಾನ ಇದೆ. ಎಲ್ಲಿ ಸಂವಿಧಾನ ಇರುತ್ತದೆಯೋ ಅಲ್ಲಿ ಬಾಬಾ ಸಾಹೇಬರು ಇರುತ್ತಾರೆ” ಎಂದರು.
2015ರವರೆಗೆ ಸಂವಿಧಾನ ದಿನ ಆಚರಿಸುತ್ತಿರಲಿಲ್ಲ, ಇದು ಕಾನೂನು ದಿನವಾಗಿತ್ತು; ಆದರೆ ಮೋದಿ ಅವರಿಂದಾಗಿ ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ, ಕಾಂಗ್ರೆಸ್‌ನವರು ಮೋದಿ ಅವರನ್ನೇ ಸಂವಿಧಾನ ವಿರೋಧಿ ಎಂದು ಕರೆಯುತ್ತಾರೆ ಎಂದು ಹೇಳಿದರು. ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಸಂವಿಧಾನ ದಿನ ಆಚರಿಸುತ್ತದೆ, ಸಂವಿಧಾನದ ಮೇಲಿನ ಗೌರವದಿಂದಲ್ಲ; ಸಂವಿಧಾನ ಪ್ರತಿ ಇಟ್ಟು ರಥದಲ್ಲಿ ಅಂಬೇಡ್ಕರ್ ಕಾಲೊನಿ, ಜಗಜೀವನ್ ರಾಮ್ ಕಾಲೊನಿಗೆ ಮೆರವಣಿಗೆ ಮಾಡುತ್ತಾರೆ, ಅದೂ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣದಲ್ಲಿ ಎಂದು ದೂರಿದರು.
ಸಂವಿಧಾನ ತೊಂದರೆಯಲ್ಲಿದೆ ಎಂದು ವಿರೋಧ ಪಕ್ಷದವರು ಹೇಳುತ್ತಾರೆ; ಆದರೆ ಹಾಗೆ ಹೇಳಿದವರೇ ತುರ್ತು ಪರಿಸ್ಥಿತಿ ಜಾರಿ ಮಾಡಿ ಸಂವಿಧಾನವನ್ನು ಎರಡೂವರೆ ವರ್ಷ ಕತ್ತಲೆಯಲ್ಲಿ ಇಟ್ಟಿದ್ದರು ಎಂದು ಆರೋಪಿಸಿದರು. ಜಮ್ಮು ಕಾಶ್ಮೀರದಲ್ಲಿ 75 ವರ್ಷ ಸಂವಿಧಾನ ಜಾರಿಯಲ್ಲೇ ಇರಲಿಲ್ಲ, ದೇಶದ ಧ್ವಜ ಹಾರಲಿಲ್ಲ, ಪರಿಶಿಷ್ಟ ಜಾತಿ-ವರ್ಗಗಳ ಮೀಸಲಾತಿಯೂ ಇರಲಿಲ್ಲ; ಇದಕ್ಕೆ ಪೂರ್ಣ ವಿರಾಮ ನೀಡಿ ಸಂವಿಧಾನಕ್ಕೆ ಗೌರವ ನೀಡಿದ್ದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದರು. “ಸಂವಿಧಾನ ಇಂದು ದೇಶಕ್ಕೆ ಸಮರ್ಪಣೆಯಾಗಿದೆ” ಎಂದು ಹೇಳಿದರು.
ನಿಜವಾಗಲೂ ತೊಂದರೆಯಲ್ಲಿರುವುದು ಸಂವಿಧಾನ ಮತ್ತು ದೇಶ ಅಲ್ಲ, ಕಾಂಗ್ರೆಸ್ ಪಕ್ಷ; ಇಲ್ಲದ ವಿಚಾರ ಇಟ್ಟುಕೊಂಡು ಅಸಾಂವಿಧಾನಿಕವಾಗಿ ಹೋರಾಟ ರೂಪಿಸಿ ಅರಾಜಕತೆ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದ ಅವರು, ವಿದೇಶದಲ್ಲಿ ಕುಳಿತು ಭಾರತದ ವಿರುದ್ಧ ಷಡ್ಯಂತ್ರ ಮಾಡುವವರ ಜೊತೆಗೂಡಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಅರಾಜಕತೆ ಸೃಷ್ಟಿಸುತ್ತಿವೆ, ದೇಶವಿರೋಧಿಗಳ ಹೆಡೆಮುರಿ ಕಟ್ಟುವ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು ಎಂದರು. ಮೋದಿ ಅವರ ನಾಯಕತ್ವದಲ್ಲಿ ಭಾರತ ಆತ್ಮನಿರ್ಭರವಾಗಿ ಎಲ್ಲಾ ದೇಶಗಳನ್ನು ಹಿಂದಿಕ್ಕಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಪ್ಲಬ್ ಕುಮಾರ್ ದೇಬ್, ಸಂಸದ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ವಕ್ತಾರ ಎಚ್. ವೆಂಕಟೇಶ್ ದೊಡ್ಡೇರಿ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಸಂವಿಧಾನ ಗೌರವ್ ದಿವಸ್ ಅಭಿಯಾನದ ದಕ್ಷಿಣ ರಾಜ್ಯಗಳ ಸಂಚಾಲಕ ವಿಕಾಸ್ ಕುಮಾರ್ ಪಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ:
