ಶನಿವಾರ ಬೆಂಗಳೂರಿನಲ್ಲಿ 73ನೇ ಸಹಕಾರ ಸಪ್ತಾಹ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗಣ್ಯರು. ಚಿತ್ರ: ಸಿಎಂಒ ಕರ್ನಾಟಕ
ಬೆಂಗಳೂರು: ಸಹಕಾರ ಕ್ಷೇತ್ರವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ, ರೈತರ ಆರ್ಥಿಕ ಸ್ವಾತಂತ್ರ್ಯದ ಹೆಬ್ಬಾಗಿಲು ಈ ಸಹಕಾರ ಕ್ಷೇತ್ರ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಹೇಳಿದರು. ರೈತರ ಬದುಕಿನ ಬೆನ್ನೆಲುಬಾಗಿರುವ ಸಹಕಾರ ಸಂಸ್ಥೆಗಳಿಗೆ ಸರ್ಕಾರದ ಬೆಂಬಲ ಮುಂದುವರಿಯಲಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರಿನ ಬನಶಂಕರಿ ನಗರದ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ 73ನೇ ಸಹಕಾರ ಸಪ್ತಾಹ – 2026 ಅನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಸಹಕಾರ ಮಹಾಮಂಡಳ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ಮತ್ತು ಕರ್ನಾಟಕ ಸಹಕಾರ ವಸತಿ ಮಹಾಮಂಡಳ ಅಧ್ಯಕ್ಷ, ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಚಳವಳಿಯೇ ಸಹಕಾರ ಚಳವಳಿ. ಸರ್ವರಿಗೂ ಸಮಪಾಲು, ಸಮಪಾಳು ಎಂಬುದೇ ಸಹಕಾರ ತತ್ವದ ಮೂಲಮಂತ್ರ. ರೈತರ ಆರ್ಥಿಕ ಸ್ವಾತಂತ್ರ್ಯದ ಹೆಬ್ಬಾಗಿಲು ಈ ಸಹಕಾರ ಕ್ಷೇತ್ರ” ಎಂದು ಶಿವಕುಮಾರ್ ಹೇಳಿದರು.
“ಒಂದು ಹಳ್ಳಿಯಲ್ಲಿ ಸಹಕಾರಿ ಸಂಘ, ಶಾಲೆ ಹಾಗೂ ಪಂಚಾಯಿತಿ ಇರಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು” ಎಂದರು.
ತಮ್ಮ ಸಾರ್ವಜನಿಕ ಜೀವನದ ಆರಂಭವನ್ನು ನೆನಪಿಸಿಕೊಂಡ ಅವರು, ರಾಮಕೃಷ್ಣ ಹೆಗಡೆ ಅವರು ಕನಕಪುರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ವೇಳೆ ಕನಕಪುರ ತಾಲ್ಲೂಕಿನ ಮುಖಂಡರು ತಮ್ಮನ್ನು ಟಿಎಪಿಸಿಎಂಎಸ್ ಚುನಾವಣೆಗೆ ನಿಲ್ಲಿಸಿದ್ದರು, ವಿದ್ಯಾರ್ಥಿ ಚುನಾವಣೆಯ ನಂತರ ಸಾರ್ವಜನಿಕ ಜೀವನದಲ್ಲಿ ತಾವು ಗೆದ್ದ ಮೊದಲ ಚುನಾವಣೆ ಅದಾಗಿತ್ತು, ಸಹಕಾರ ಸಚಿವನಾಗಿಯೂ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
“ರಾಜ್ಯ ಸರ್ಕಾರ ಬೆಳೆ ಸಾಲ ಮತ್ತು ಬಡ್ಡಿ ಸಹಾಯಧನ ಯೋಜನೆಯಡಿ ರೈತರಿಗೆ ಬಡ್ಡಿರಹಿತ ಸಾಲ ನೀಡುತ್ತಿದೆ. ಇದರಿಂದ ಸುಮಾರು 17 ಲಕ್ಷ ರೈತರಿಗೆ ಅನುಕೂಲವಾಗುತ್ತಿದ್ದು, ಈಗಾಗಲೇ 1,135 ಕೋಟಿ ರೂಪಾಯಿಗಳ ಅನುದಾನವನ್ನು ವಿವಿಧ ರೂಪಗಳಲ್ಲಿ ಸರ್ಕಾರ ಒದಗಿಸಿದೆ” ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 25 ಲಕ್ಷ ರೈತರು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿದ್ದು, ಹಾಲು ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹ ಧನವನ್ನೂ ನೀಡುತ್ತಿದೆ ಎಂದ ಅವರು, ಹಾಲು ಉತ್ಪಾದಕರ ಶ್ರಮಕ್ಕೆ ತಕ್ಕ ಬೆಲೆ ಸಿಗಬೇಕು ಎಂದರು. “ಅಮೂಲ್ ಸಂಸ್ಥೆಯಲ್ಲಿ ಹಾಲಿನ ಬೆಲೆ ಲೀಟರ್‌ಗೆ 61-62 ರೂಪಾಯಿ ಇದ್ದರೆ, ನಮ್ಮಲ್ಲಿ ರೈತರಿಗೆ 54 ರೂಪಾಯಿ ನೀಡಲಾಗುತ್ತಿದೆ. ಪ್ರಧಾನಮಂತ್ರಿಗಳು ಅಮೂಲ್ ಹಾಲಿನ ಬೆಲೆಯನ್ನು ಕಡಿಮೆ ಮಾಡಲಿ, ನಾವೂ ಕಡಿಮೆ ಮಾಡುತ್ತೇವೆ” ಎಂದು ಹೇಳಿದರು.
“ನಾಲ್ಕು ಎಕರೆ 39 ಗುಂಟೆ ವಿಸ್ತೀರ್ಣದ ಜಾಗದಲ್ಲಿ ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಿಡಿಎ ಮೂಲಕ ಈ ಜಾಗವನ್ನು ಮಂಜೂರು ಮಾಡಿಸಿ ಶಾಸಕ ಸೋಮಶೇಖರ್ ಅವರ ಮನವಿಗೆ ಸ್ಪಂದಿಸಲಾಗಿದೆ. ಸುಮಾರು 41 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲೇಜು ನಿರ್ಮಾಣವಾಗಲಿದೆ” ಎಂದ ಅವರು, ಯಶವಂತಪುರ ಕ್ಷೇತ್ರದಲ್ಲಿ ಹಾಗೂ ಉಲ್ಲಾಳದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗಿದೆ, ಇದರಿಂದ ಸುತ್ತಮುತ್ತಲಿನ ಜನರು ಚಿಕಿತ್ಸೆಗಾಗಿ ಬೆಂಗಳೂರು ನಗರದ ಒಳಭಾಗಕ್ಕೆ ತೆರಳುವ ಅನಿವಾರ್ಯತೆ ತಪ್ಪಲಿದೆ ಎಂದರು.
“ಯಾರು ಏನೇ ಸುಳ್ಳು ಹೇಳಲಿ, ರಾಜಕೀಯ ತಂತ್ರಗಳನ್ನು ಮಾಡಲಿ, 2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
