ಕೊರೋನಾ ಗೆಲ್ಲಲು ಇರುವ ಏಕೈಕ ಅಸ್ತ್ರವು ಕೋವಿಡ್ ಲಸಿಕೆ ಮಾತ್ರ ಅನ್ಯ ಮಾರ್ಗವೇ ಇಲ್ಲ ಎಂಬುದು ಸಿದ್ದವಾಗಿದ್ದರೂ ಸಹಾ ವಿರೋಧ ಪಕ್ಷಗಳು ಲಸಿಕೆ ನೀಡಲು ಆರಂಭಿಸಿದಾಗ ಭೀತಿ ಹುಟ್ಟಿಸಿದರು ತದನಂತರ ಲಸಿಕೆ ಖರೀದಿಸಲು ಸ್ವಾತಂತ್ರಕ್ಕಾಗಿ ದುಂಬಾಲು ಬಿದ್ದರು ಖರೀದಿಸಲು ಕೈಲಾಗದಾಗ ನೀವೆ ಖರೀದಿಸಿ ಎಂದರು ಈಗ ಇವರ ಪರಿಸ್ಥಿತಿಯು ಹೇಗಾಗಿದೆಯೆಂದರೆ ಲಸಿಕೆಯನ್ನು ನಿಶ್ಯಸ್ತ್ರಗೊಳಿಸಲು ಹೋಗಿ ಇವರೆ ಈಗ ವಿವಸ್ತ್ರರಾಗಿ ನಿಂತಿದ್ದಾರೆ.
ಅಮೇರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳು ವ್ಯಾಪಕವಾಗಿ ಲಸಿಕೆಯನ್ನು ನೀಡುವ ಮೂಲಕ ಮಾಸ್ಕ್ ರಹಿತ ಜನಜೀವನದತ್ತ ದಾಪುಗಾಲು ಹಾಕಿದೆ. ಕೆಲವೇ ತಿಂಗಳುಗಳ ಕೆಳಗೆ ಅಮೇರಿಕಾ ಕೊರೋನಾ ಪಿಡುಗಿನಿಂದ ತತ್ತರಿಸಿ ಹೋಗಿತ್ತು. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಲಭ್ಯವಿದ್ದರು 6ಲಕ್ಷ ಜನರ ಸಾವನ್ನು ತಡೆಯಲು ಸಾಧ್ಯವಾಗಲಿಲ್ಲ. ಐರೋಪ್ಯ ರಾಷ್ಟ್ರಗಳಲ್ಲಿ ಕೊರೋನಾ ಸೋಂಕಿನ ಪರಿಸ್ಥಿತಿಯೇನು ಭಿನ್ನವಿರಲಿಲ್ಲಾ. ಆದರೆ ಭಿನ್ನತೆಯು ನಮಗೂ ಮತ್ತು ಅಲ್ಲಿನವರಿಗೂ ಇದ್ದಿದ್ದೂ ಅಲ್ಲಿ ಕೊರೋನಾ ವಿರುದ್ದದ ಹೋರಾಟವು ರಾಜಕೀಯಕರಣವಾಗಲಿಲ್ಲ. ಸೋಂಕಿನ ಸಂಕಟ ಮತ್ತು ಸಾವುಗಳು ರಾಜಕೀಯ ಮೇಲಾಟದ ಕಳಪೆ ಸರಕಾಗಿರಲಿಲ್ಲ.
ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಪ್ರವಾಹ, ಭೂಕಂಪ ಅಥವಾ ಕೊರೋನ ಸಂಕಟವಾಗಲೀ ಎಲ್ಲವನ್ನೂ ಕೇವಲ ರಾಜಕೀಯ ಮಾನದಂಡದಲ್ಲಿ ಮಾತ್ರ ನೋಡುವ ಅಭ್ಯಾಸ ಬೆಳಸಿಕೊಂಡಿದ್ದೇವೆ. ತತ್ಪರಿಣಾಮ ಭಾರತದಲ್ಲಿ ಕೊರೋನಾ ಲಸಿಕೆಯು ಕೂಡಾ ರಾಜಕೀಯ ಕಾಲ್ಚೆಂಡಾಗಿದೆ.
ಭಾರತದ ಲಸಿಕೆಯ ಇತಿಹಾಸವನ್ನು ಕೊಂಚ ಕೆದಕಿದರೆ ದೇಶದಲ್ಲಿ ಇಂದು ನಡೆಯುತ್ತಿರುವ ಲಸಿಕೆಯ ಹಾಹಾಕಾರದ ಪೊಳ್ಳುತನ ಅರ್ಥವಾಗುತ್ತದೆ. ರೋಟಾ ವೈರಸ್ ಲಸಿಕೆ ಪ್ರಪಂಚಕ್ಕೆ ಬಂದಿದ್ದು 1998 ಭಾರತಕ್ಕೆ ದೊರೆತಿದ್ದು 2015 ಹೆಪಟೈಟಿಸ್-ಬಿ ಲಸಿಕೆ ಬಂದಿದ್ದು 1982 ಭಾರತಕ್ಕೆ ದೊರೆತಿದ್ದು 2002 ಪೊಲೀಯೊ 1955ರಲ್ಲಿ ಭಾರತ ತಲುಪಲು 1978 ರವರಗೆ ಕಾಯಬೇಕಾಯಿತು. ಕೋವಿಡ್ ಲಸಿಕೆಯು ಪ್ರಪಂಚಕ್ಕೆ ಬಂದಿದ್ದು ಡಿಸಂಬರ್ 2020 ಭಾರತಕ್ಕೆ ಬಂದಿದ್ದು ಜನವರಿ 2021.
ಈ ಹಿಂದೆ ಆಗದ ಕೆಲಸವನ್ನು ಮೋದಿ ಸರ್ಕಾರವು ಜನರ ಆರೋಗ್ಯದ ಕಾಳಜಿಯಿಂದ ಕೊರೋನಾ ದೇಶದಲ್ಲಿ ಕಾಣಸಿಕೊಂಡ ಕೂಡಲೇ ದೇಶೀಯ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡು ಯಶಸ್ವಿಯಾಯಿತು. ಪ್ರಧಾನಿಯವರು ಹೇಳಿದ ಹಾಗೆ “ಇಂದು ನಮ್ಮ ಬಳಿ ದೇಶೀಯ ಲಸಿಕೆಯು ಲಭ್ಯವಿಲ್ಲದಿದ್ದರೆ ಎಂತಹ ಅನಾಹುತವಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ.”
ದೇಶೀಯ ವಿಜ್ಞಾನಿಗಳ ಸಾಧನೆಯನ್ನು ಗುರುತಿಸಿ ಅದನ್ನು ಪ್ರಶಂಸಿಸುವ ಗುಣವನ್ನು ತೋರದ ಹಲವಾರು ವಿರೋಧ ಪಕ್ಷದ ನಾಯಕರುಗಳು ಮತ್ತು ಇವರ ಪ್ರಾಯೋಜಿತ ಬುದ್ಧಿಜೀವಿಗಳು ಭಾರತದ ಲಸಿಕೆಯ ಕುರಿತು ಜನರಲ್ಲಿ ಭೀತಿ ಹುಟ್ಟಿಸಿ ಲಸಿಕೆಯ ಕಾರ್ಯಕ್ರಮ ವಿಫಲಗೊಳಿಸಲು ನಡೆಸಿದ ಎಲ್ಲ ರೀತಿಯ ಪ್ರಯತ್ನ ಇನ್ನೂ ಹಸಿರಾಗಿಯೇ ಇದೆ
ಚತ್ತೀಸ್‍ಗಢ್ ಆರೋಗ್ಯ ಸಚಿವ ಟಿ.ಎಸ್.ಸಿಂಗ್‍ದೇವ್ ಕೋವ್ಯಾಕ್ಸಿನ್ ಸುರಕ್ಷತೆಯ ಮಾಹಿತಿ ಲಭ್ಯವಿಲ್ಲದ ಕಾರಣ ನಮ್ಮ ರಾಜ್ಯದಲ್ಲಿ ಅದನ್ನು ಉಪಯೋಗಿಸುವುದಿಲ್ಲ ಎಂದು ದೇಶೀಯ ಲಸಿಕೆಯ ವಿರುದ್ದ ಕೂಗಿ ಕೆಲವೇ ದಿನಗಳ ತರುವಾಯ ಅದೇ ಕೋವ್ಯಾಕ್ಸಿನ್ ತೆಗೆದುಕೊಂಡರು. ರ್ಜಾಖಂಡ್ ಆರೋಗ್ಯ ಸಚಿವ ಬನ್ನಾಗುಪ್ತಾ ದೇಶದ ಜನರನ್ನು ಪ್ರಯೋಗಶಾಲೆಯ ಇಲಿಗಳನ್ನಾಗಿ ಮಾಡಬೇಡಿ ಎನ್ನುವುದಾ.ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಮೊದಲು ಪ್ರಧಾನಿ ಮತ್ತು ಕೇಂದ್ರ ಸಚಿವರು ಲಸಿಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡ ರಾಜ್ಯಸಭೆಯ ವಿರೋಧಪಕ್ಷದ ಉಪನಾಯಕ ಆನಂದ ಶರ್ಮಾ ಸಂಸದ ಮನೀಶ್ ತಿವಾರಿ, ಜೈರಾಂ ರಮೇಶ್, ಶಶಿತರೂರ್ ಮತ್ತು ಡಿ.ಕೆ.ಶಿವಕುಮಾರ್‍ರವರು ಲಸಿಕೆಯ ವಿರುದ್ದ ಜನರಲ್ಲಿ ಭೀತಿ ಹುಟ್ಟಿಸಲು ವ್ಯವಸ್ಥಿತವಾದ ಪಿತೂರಿಯನ್ನು ಕೈಗೊಂಡರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‍ರವರು ಕೊರೋನಾ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಕರೆದು ಈಗ ಸದ್ದಿಲ್ಲದೆ ಹೋಗಿ ಲಸಿಕೆ ಪಡೆದು ನಾನು ಭಾರತದ ಲಸಿಕೆ ಪಡೆದೆ ಎಂದು ಪೆದ್ದು ಪೆದ್ದಾದ ಸಮರ್ಥನೆ ಮಾಡಿಕೊಳ್ಳುತ್ತಾರೆ.
ಅನೇಕ ಕಾಂಗ್ರೆಸ್ ಮತ್ತು ಎಡಪಂಥೀಯ ಪ್ರಾಯೋಜಿತ ಅಂಕಣಕಾರರು ಮತ್ತು ಬಜಾಜ್ ಕಂಪನಿಯ ಮಾಲೀಕ ರಾಜೀವ್ ಬಜಾಜ್ ನಂತಹ ವಿದ್ಯಾವಂತರೂ ಸಹಾ ಲಸಿಕೆಯ ಬಗ್ಗೆ ಅನುಮಾನದ ಹುತ್ತವನ್ನು ಕಟ್ಟಿ ಆರಂಭಿಕ ಹಂತದಲ್ಲಿ ಇದರ ಸಂಪೂರ್ಣ ಯಶಸ್ಸಿಗೆ ಅಡ್ಡಗಾಲು ಹಾಕಿದರು.
ದೇಶದಲ್ಲಿ ಕೊರೋನಾ ಸಂಖ್ಯೆಯು ಇಳಿಮುಖವಾಗುತ್ತಿತ್ತು ಇದರ ನಡುವೆ ಲಸಿಕೆಯ ಅಭಿಯಾನವೂ ಯಶಸ್ವಿಯಾದರೆ ಸಂಪೂರ್ಣ ಶ್ರೇಯಸ್ಸು ಮೋದಿ ಸರ್ಕಾರಕ್ಕೆ ಲಭಿಸುತ್ತದೆ ಎಂಬ ದುರಾಲೋಚನೆಯಿಂದ ಮೋದಿ ವಿರೋಧಿಗಳು ಒಂದಾಗಿ ಲಸಿಕೆಯ ವಿರುದ್ದ ಜನರಲ್ಲಿ ಭಯವನ್ನು ಬಿತ್ತುವ ಕುತಂತ್ರ ನಡೆಸಿದರು.
ಲಸಿಕೆ ಪಡೆದ ನಾಗರಿಕರಿಗೆ ಮೋದಿಯವರ ಚಿತ್ರವಿರುವ ಪ್ರಮಾಣ ಪತ್ರ ನೀಡಲು ಆರಂಭಿಸಿದ್ದು ಪಾಪ ವಿರೋಧ ಪಕ್ಷದ ಮುಖಂಡರುಗಳಿಗೆ ಹೊಟ್ಟೆಯಲ್ಲಿ ಹುಣಸೇಹಣ್ಣು ಕಿವಿಚಿದಂತಾಗಿತ್ತು ಅದೂ ಅಲ್ಲದೆ ಲಸಿಕೆ ಖರೀದಿಯಲ್ಲಿ ತಮ್ಮ ಪಾತ್ರವಿಲ್ಲದೆ ಉಂಟಾಗುವ ಆರ್ಥಿಕ ನಷ್ಟದಿಂದ ಚಿಂತಿತರಾಗಿ ರಾಜ್ಯಗಳಿಗೇ ಲಸಿಕೆ ಖರೀದಿಸಲು ಸ್ವಾತಂತ್ರ ನೀಡಬೇಕು ಎಂಬುದು ಇವರ ಒತ್ತಾಯದ ಹಿಂದಿನ ಮರ್ಮವಾಗಿತ್ತು.
ಏಪ್ರಿಲ್ 9 ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ರಾಜ್ಯ ಸರ್ಕಾರಗಳಿಗೆ ಲಸಿಕೆ ಖರೀದಿ ಮತ್ತು ವಿತರಣೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತಾರೆ. ಆನಂದ ಶರ್ಮಾರವರು ಆರೋಗ್ಯ ರಾಜ್ಯದ ಜವಾಬ್ದಾರಿ ರಾಜ್ಯಸರ್ಕಾರದ್ದು ಆದ್ದರಿಂದ ಲಸಿಕೆ ಖರೀದಿಗೆ ಅವರಿಗೇ ಅವಕಾಶ ಕೊಡಬೇಕು ಎನ್ನುತ್ತಾರೆ.
ಫೆಬ್ರವರಿ 24 ಮತ್ತು ಏಪ್ರಿಲ್ 8 ರಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಪತ್ರ ಮುಖೇನ ರಾಜ್ಯದ ಸಂಪನ್ಮೂಲದಲ್ಲಿ ಲಸಿಕೆ ಖರೀದಿಗೆ ಅನುಮತಿ ಕೋರುತ್ತಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‍ರವರು ಮಾರ್ಚ್ 18 ರಂದು ಲಸಿಕೆ ಖರೀದಿಗೆ ರಾಜ್ಯ ಸರ್ಕಾರಕ್ಕೆ ಅನುಮತಿ ಕೊಡಬೇಕು ಎಂದು ಆಗ್ರಹಿಸುತ್ತಾರೆ. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ರವರು ಒಂದು ಡೋಸ್ ಲಸಿಕೆ ಖರೀದಿ ಮಾಡುವ ಮುನ್ನವೇ ರಾಜ್ಯದಲ್ಲಿ
ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ಘೋಷಿಸುತ್ತಾರೆ. ಕೇಜ್ರಿವಾಲ್ ಮತ್ತು ಉದ್ದವ್ ಠಾಕ್ರೆಯವರು ಮೂರು ತಿಂಗಳಿನಲ್ಲಿ ಲಸಿಕೆ ನೀಡುವ ಆಶ್ವಾಸನೆ ನೀಡಿ ಮೇಯಿಂದ ಜೂನ್ ವರೆಗೂ ಕೇವಲ ಲಸಿಕೆ ಕಂಪನಿಗಳೊಂದಿಗೆ ಪತ್ರ ವ್ಯವಹಾರದಲ್ಲಿ ಮುಳುಗಿರುತ್ತಾರೆ.
ರಾಜ್ಯ ಸರ್ಕಾರಗಳು ಲಸಿಕೆ ಖರೀದಿಸಲು ನಮಗೆ ಸ್ವಾತಂತ್ರ ನೀಡಿ ಎಂದು ಕೇಳುವುದು ತಪ್ಪಲ್ಲಾ ಆದರೆ ಕೊರೋನಾ ಇಡಿ ವಿಶ್ವದಲ್ಲಿ ಹರಡಿ ಎಲ್ಲೆಡೆ ಲಸಿಕೆಗಾಗಿ ಬೇಡಿಕೆ ಇರುವ ಸಂದರ್ಭದಲ್ಲಿ ಏಕಾಂಗಿಯಾಗಿ ಅಗತ್ಯವಿರುವ ಲಸಿಕೆ ಖರೀದಿಸಲು ಸಾಧ್ಯವಾ ಎಂಬುದನ್ನು ವಿಚಾರ ಮಾಡದೇ ನಾವೇ ಖರೀದಿಸುತ್ತೇವೆ ಎಂದು ಕೇಳಿದ್ದು ಸರಿಯಲ್ಲ.
ಪ್ರಪಂಚದಲ್ಲಿ ಲಸಿಕೆಯು ಲಭ್ಯವಿರುವುದು ಅಮೇರಿಕಾ ರಷ್ಯ ಇಂಗ್ಲೆಡ್ ಮತ್ತು ಭಾರತದಲ್ಲಿ ಮಾತ್ರ ಇದು ತಿಳಿದೂ ರಾಜ್ಯ ಸರ್ಕಾರಗಳು ಗ್ಲೋಬಲ್ ಟೆಂಡರ್ ಕರೆಯುತ್ತಾರೆ. ಸಾಧಕ ಭಾಧಕಗಳನ್ನು ಅಧ್ಯಯನ ಮಾಡದೆ ನಮ್ಮ ರಾಜ್ಯವೂ ತಾವೇಕೆ ಹಿಂದೆ ಬೀಳಬೇಕು ಎಂದು ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ಘೋಷಿಸುತ್ತಾರೆ.
ಅಮೇರಿಕಾ ಮೂಲದ ಲಸಿಕೆ ಕಂಪನಿಗಳು ತಾವು ಕೇವಲ ಭಾರತ ಸರ್ಕಾರದೊಂದಿಗೆ ಮಾತ್ರ ವ್ಯವಹರಿಸುವುದು ಎಂದು ರಾಜ್ಯ ಸರ್ಕಾರಗಳಿಗೆ ಕಡ್ಡಿ ತುಂಡು ಮಾಡಿದಂತೆ ತಿಳಿಸಿ ತಮ್ಮ ಬಾಗಿಲು ಬಂದ್ ಮಾಡಿ ರಾಜ್ಯಸರ್ಕಾರಗಳ ಇತಿ ಮಿತಿಗೆ ಕನ್ನಡಿ ಹಿಡಿದರು.
ಕೊರೋನಾ ಭಾರತದಲ್ಲಿ ಎರಡನೆಯ ಅಲೆಯ ರೂಪದಲ್ಲಿ ತನ್ನ ರುದ್ರ ನರ್ತನವನ್ನು ಆರಂಭಿಸಿದಾಗ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕಿತ್ತು. ಕೇಂದ್ರ ಸರ್ಕಾರವೂ ಅಗತ್ಯದಷ್ಟು ಲಸಿಕೆಯನ್ನು ಪೂರೈಸಲು ಪರದಾಡುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಜನರ ಹಿತಾಸಕ್ತಿಗೆ ಆದ್ಯತೆ ನೀಡದೇ ಸ್ವಾರ್ಥ ರಾಜಕೀಯವನ್ನು ಮಾಡಲು ಹೋಗಿ ಮುಖಭಂಗಿತರಾಗಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಲಸಿಕೆ ಖರೀದಿಗೆ ಸ್ವಾತಂತ್ರ ನೀಡಿ ಎಂದು ಬೊಬ್ಬೆ ಹೊಡೆಯುತ್ತಿದ್ದವರು ತಮ್ಮ ನಿಲುವಿನಿಂದ ಉಲ್ಟಾ ಹೊಡೆದು ತಮ್ಮ ಗೌರವವನ್ನು ಮಣ್ಣುಪಾಲು ಮಾಡಿಕೊಂಡಿದ್ದಾರೆ.
ಜೂನ್ 7 ರಂದು ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿ ಜೂ 21 ರಿಂದ 18 ರಿಂದ 45 ವಯೋಮಾನದವರಿಗೂ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆಯನ್ನು ನೀಡುತ್ತದೆ ಎಂದು ಘೋಷಿಸಿದರು. ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಜಾಣ್ಮೆಯಿಂದ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಲಸಿಕೆ ಖರೀದಿಯಲ್ಲಿ ವಿಫಲವಾದ ಬಗ್ಗೆ ಸೂಚ್ಯವಾಗಿ ತಿಳಿಸಿ ಇವರ ಅದಕ್ಷತೆ ಮತ್ತು ದೂರದೃಷ್ಟಿಯ ಕೊರತೆಯನ್ನು ಚನ್ನಾಗಿಯೇ ಜನರ ಮುಂದೆ ತೆರದಿಟ್ಟರು.
ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲ್ಲವೇ ಲಸಿಕೆ ಖರೀದಿಯಲ್ಲಿ ಇವರ ವೈಫಲ್ಯ ಬಯಲಾದರೂ ಸುಪ್ರೀಂಕೋರ್ಟ್ ಚಾಟಿ ಬೀಸಿದ ಕಾರಣ ಬದಲಾಗಿದ್ದು ಎಂದು ಒಂದು ವರ್ಗ ಹೇಳಿದರೆ ತಮ್ಮ ಒತ್ತಡಕ್ಕೆ ಕೇಂದ್ರದ ನಿಲುವು ಬದಲಾಯಿತು ಎಂದು ವಿರೋಧಪಕ್ಷಗಳು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.
ಸುಪ್ರಿಂಕೋರ್ಟಿನಲ್ಲಿ ಜಸ್ಟೀಸ್ ಚಂದ್ರಚೂಡ್‍ರವರು ಕೇಂದ್ರ ಸರ್ಕಾರದ ಮೂರು ಹಂತದ ಲಸಿಕೆ ನೀತಿಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಕೇಂದ್ರ ಸರ್ಕಾರದ ನೀತಿಯನ್ನು ನಿರ್ಣಯಿಸುವ ವಿಚಾರ ಕೋರ್ಟ್ ವ್ಯಾಪ್ತಿಗೆ ಬಾರದಿರುವ ಕಾರಣ ಕೇವಲ ಸ್ಪಷ್ಟನೆ ಕೋರಿ 15 ದಿನಗಳ ಕಾಲಾವಕಾಶವನ್ನು ನೀಡಿ ಪ್ರಕರಣವನ್ನು ಮುಂದೆ ಹಾಕಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹಲವಾರು ಪ್ರಶ್ನೆಗಳನ್ನು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವರು ಆದರೆ ಅದ್ಯಾವುದು ತೀರ್ಪಲ್ಲ.
ನರೇಂದ್ರ ಮೋದಿಯವರ ರಾಜಕೀಯ ಚಾಣಕ್ಷತನದ ಮುಂದೆ ತಮ್ಮ ಪಟ್ಟುಗಳು ಕೆಲಸಕ್ಕೆ ಬರುವುದಿಲ್ಲ ಎಂದು ಪದೇ ಪದೇ ಸಾಬೀತಾಗಿದ್ದರು ವಿರೋಧ ಪಕ್ಷಗಳು ಮತ್ತೆ ಮತ್ತೆ ಅವರನ್ನು ಮುಜುಗರಕ್ಕೆ ಸಿಲುಕಿಸಲು ಪ್ರಯತ್ನಿಸಿ ತಮ್ಮ ವರ್ಚಸ್ಸಿಗೇ ಧಕ್ಕೆ ತಂದು ಕೊಳ್ಳುತ್ತಿದ್ದಾರೆ.
ಪ್ರಕಾಶ್ ಶೇಷರಾಘವಾಚಾರ್,
sprakashbjp@gmail.com
Prakash Sesharaghavachar is a Joint Spokesperson of Karnataka BJP
Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.