ಮನೆ ಮನೆಗಳನ್ನು ಬೆಳಗುತ್ತಿರುವ ಎಲ್ ಇಡಿ ದೀಪ

  67
  0

  “ಕತ್ತಲೆಯ ದೂರ ಮಾಡಿ ಬೆಳಕು ನೀಡುವ ದೀಪ ಆಧುನಿಕ ಯುಗದಲ್ಲಿ ವಿದ್ಯುತ್ ಉಳಿಸಿ ಬೆಳಕು ನೀಡುತ್ತಿರುವ ಎಲ್ ಇಡಿ ದೀಪ”.

  ಯುಕೆ ಮೂಲದ ‘ಕಾರ್ಬನ್ ಬ್ರೀಫ್’ ವೆಬ್ ಸೈಟ್ ಪ್ರಪಂಚದ ವಿವಿಧ ದೇಶಗಳ ಇಂಧನಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಮಾಹಿತಿ ಮತ್ತು ಅಧ್ಯಯನ ಮಾಡುವ ಸ್ವತಂತ್ರ ಸಂಸ್ಥೆಯು. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳು ಕಡಿಮೆ ಇಂಗಾಲ ಹೊರಹಾಕುವ ಪರ್ಯಾಯ ಇಂಧನ ತಂತ್ರಜ್ಞಾನ ಅಳವಡಿಸಿಕೊಳ್ಳಲು ದುಬಾರಿ ವೆಚ್ಚದ ಕಾರಣ ಕಷ್ಟಕರ ಹೀಗಾಗಿ ಅಗ್ಗದ ದರದ ಇಂಧನ ಮೂಲಗಳ ಮೇಲೆ ಅವಲಂಬಿತವಾಗುವುದು ಎಂದು ಅಭಿಪ್ರಾಯಪಟ್ಟಿತ್ತು.

  ಬದಲಾಗುತ್ತಿರುವ ಭಾರತದ ಆತ್ಮನಿರ್ಭರ ಶಕ್ತಿಯನ್ನು ಈ ವೆಬ್ ಸೈಟ್ ಬಹಳ ಹಗುರವಾಗಿ ತೆಗೆದುಕೊಂಡಿತ್ತು.ಈ ನಕಾರಾತ್ಮಕ ಚಿಂತಕರ ನಿರೀಕ್ಷೆಯನ್ನು ಸುಳ್ಳಾಗಿಸಿ ಮೋದಿ ಸರ್ಕಾರವು ಕಳೆದ 6 ವರ್ಷದಲ್ಲಿ ಹವಮಾನ ಬದಲಾವಣೆಯ ಸವಾಲನ್ನು ಸ್ವೀಕರಿಸಿ ಪರಿಸರ ಸ್ನೇಹಿ ಪರ್ಯಾಯ ಇಂಧನ ಉತ್ಪಾದನೆ, ಪರಿಸರ ಸ್ನೇಹಿ ಎಲ್ ಇಡಿ ಬಲ್ಬ್ ಗಳ ಬಳಕೆಯಲ್ಲಿ ನೂತನ ದಾಖಲೆಯನ್ನು ಬರೆಯುತ್ತಿದೆ.

  ವಿಶ್ವದಲ್ಲಿ ಶೇಕಡಾ 15ರಷ್ಟು ವಿದ್ಯುತ್ ಉತ್ಪಾದನೆ ಬೀದಿ ದೀಪ, ಗೃಹ ಬಳಕೆ ಬಲ್ಬ್ ಗಳು ಮತ್ತು ಗೃಹೋಪಯೋಗಿ ಉಪಕರಣಗಳಿಗೆ ಬಳಕೆಯಾಗುತ್ತಿದೆ. ಕಳೆದ ದಶಕದಿಂದ ಕಡಿಮೆ ಕಾರ್ಬನ್ ಹೊರಹಾಕುವ ಇಂಧನ ಉಳಿಸುವ ಎಲ್ ಇ ಡಿ ಬಲ್ಬ್ ಗಳನ್ನು ಅನೇಕ ದೇಶಗಳು ಅಳವಡಿಸಿಕೊಳ್ಳುತ್ತಿದೆ. ಇದರಿಂದ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಬಲ್ಬ್ ಗಳಿಗಿಂತ ಶೇಕಡಾ 75ರಷ್ಟು ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಾಗಿದೆ.

  ಭಾರತದಲ್ಲಿ ಇಂಧನ ಉಳಿತಾಯವಾಗುವ ಬಲ್ಬ್ ,ಫ್ಯಾನ್, ಮತ್ತು ಬೀದಿ ದೀಪಗಳನ್ನು ಉತ್ತೇಜಿಸಲು 2010ರಲ್ಲಿ ಇಇಎಸ್ ಎಲ್ (Energy Efficiency Service Ltd) ಸಾರ್ವಜನಿಕ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಕಡಿಮೆ ಇಂಗಾಲ ಹೊರಸೂಸುವ ಪರ್ಯಾಯ ಇಂಧನ ಮತ್ತು ಉಪಕರಣಗಳನ್ನು ಈ ಸಂಸ್ಥೆಯು ಪರಿಚಯಿಸ ತೊಡಗಿತು.

  ಯಥಾಪ್ರಕಾರ 2010 ರಿಂದ 2014 ರ ತನಕ ಈ ಯೋಜನೆಯಲ್ಲಿ ಯಾವುದೆ ಮಹತ್ವದ ಪ್ರಗತಿಯು ಸಾಧನೆಯಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾದ ತರುವಾಯ ದೇಶದ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಮತ್ತು ಇಂಧನ ಉಳಿಸುವ ದೀಪಗಳ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಶಕೆ ಆರಂಭವಾಯಿತು.

  LED lights

  ಪರಿಸರ ಸ್ನೇಹಿ ಇಂಧನ ಉಳಿತಾಯದ ಎಲ್ ಇ ಡಿ ದೀಪಗಳಿಗೆ ಹಳೆಯ ದೀಪದ ಬಲ್ಬ್ ಗಳನ್ನು ಪರಿವರ್ತನೆ ಮಾಡುವ “ಉಜಾಲಾ” ಯೋಜನೆಯು ಕಳೆದ 6 ವರ್ಷದಲ್ಲಿ ದೇಶದ ಗೃಹಬಳಕೆ ವಿದ್ಯುತ್ ದೀಪದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬದಲಾಯಿಸಿ ಎಲ್ ಇ ಡಿ ದೀಪಗಳು ಇಂದು ಬಹುತೇಕ ಮನೆಗಳನ್ನು ಬೆಳಗುತ್ತಿವೆ. ಒಂದು ವರದಿಯ ಪ್ರಕಾರ ದೇಶದ ಶೇಕಡಾ 88ರಷ್ಟು ಮನೆಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಉಪಯೋಗಿಸಲಾಗುತ್ತಿದೆ.

  ಇಂಧನ ಉಳಿತಾಯದ ಎಲ್ ಇಡಿ ದೀಪಗಳನ್ನು ಜನಪ್ರಿಯಗೊಳಿಸಲು 3 ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

  1. ಗೃಹ ಬಳಕೆಯ ಸಾಂಪ್ರದಾಯಿಕ ಬಲ್ಬ್ ಗಳನ್ನು ಬದಲಾಯಿಸುವ “ಉಜಾಲಾ” ಯೋಜನೆ.
  2. 1.34 ಕೋಟಿ ಬೀದಿ ದೀಪಗಳನ್ನು ಎಲ್ ಇಡಿಗೆ ಬದಲಾಯಿಸಲು “ರಾಷ್ಟ್ರೀಯ ಬೀದಿ ದೀಪ ಕಾರ್ಯಕ್ರಮ” (Street lighting National Programme)
  3. ಗ್ರಾಮೀಣ ಭಾಗದಲ್ಲಿ ಎಲ್ ಇಡಿ ಬಲ್ಬ್ ಗಳ ಬಳಕೆಯನ್ನು ಜನಪ್ರಿಯಗೊಳಿಸಲು “ಗ್ರಾಮ ಉಜಾಲಾ” ಯೋಜನೆ.

  ಎಲ್ ಇಡಿ ಬಲ್ಬ್ ಗಳಿಗೆ ಬದಲಾವಣೆಯಾಗುವುದರಿಂದ ಸರ್ಕಾರಕ್ಕೆ ಮತ್ತು ಬಳಕೆದಾರರಿಗೆ ನಾಲ್ಕು ರೀತಿಯ ಲಾಭವಾಗುತ್ತಿದೆ.

  1. ಅತ್ಯಮೂಲ್ಯ ಸಂಪನ್ಮೂಲವಾದ ವಿದ್ಯುತ್ ಬಳಕೆಯಲ್ಲಿ ಅಪಾರ ಉಳಿತಾಯ
  2. ಗ್ರಾಹಕರಿಗೆ ವಿದ್ಯುತ್ ವೆಚ್ಚದಲ್ಲಿ ಮಾಸಿಕ ಕನಿಷ್ಠ ಶೇಕಡಾ 25ರಷ್ಚು ಉಳಿತಾಯ
  3. ಸಾಧಾರಣ ಬಲ್ಬ್ ಗಳಿಗಿಂತ ಎಲ್ ಇಡಿ ಬಲ್ಬ್ ಗಳು ಹತ್ತು ಪಟ್ಟು ಬಾಳಿಕೆ ಬರುವ ಕಾರಣ ಪದೇ ಪದೇ ಬಲ್ಬ್ ಖರೀದಿ ಮಾಡುವ ಅಗತ್ಯವಿಲ್ಲ.
  4. ಅತ್ಯಂತ ಕಡಿಮೆ ಕಾರ್ಬ್ ನ್ ಹೊರಸೂಸುವ ಕಾರಣ ಇದು ಪರಿಸರ ಸ್ನೇಹಿಯಾಗಿದೆ.

  ಭಾರತದಲ್ಲಿ 2014 ರಿಂದ 2019ರೊಳಗೆ ಎಲ್ ಇಡಿ ಮಾರುಕಟ್ಟೆ ಶೇಕಡಾ 130ರಷ್ಟು ಹೆಚ್ಚಳವನ್ನು ಕಂಡಿದೆ. 2014ರಲ್ಲಿ 50ಲಕ್ಷ ಎಲ್ ಇಡಿ ಬಲ್ಬ್ ಮಾರಾಟವಾಗುತ್ತಿತ್ತು. 2019ರಲ್ಲಿ ಅದರ ಸಂಖ್ಯೆಯು ಹೆಚ್ಚಾಗಿ 670ಮಿಲಿಯನ್ ಬಲ್ಬ್ ಗಳು ಮಾರಾಟವಾಯಿತು. ಎಲ್ ಇಡಿ ಬಲ್ಬ್ ಬಳಕೆಯಿಂದ ದೇಶದ 2.2ಕೋಟಿ ಮನೆಗಳಿಗೆ ಅಥವಾ ಡೆನ್ಮಾರ್ಕ್ ದೇಶಕ್ಕೆ ವರ್ಷಪೂರ್ತಿ ವಿದ್ಯುತ್ ಸರಬರಾಜು ಮಾಡುವಷ್ಟು ಉಳಿತಾಯ ಸಾಧ್ಯವಾಗುತ್ತಿದೆ.

  “ಉಜಾಲಾ” ಯೋಜನೆಯಲ್ಲಿ ಎಲ್ ಇಡಿ ಜೊತೆಗೆ ಇಂಧನ ಕಡಿಮೆ ಬಳಸುವ 24ಲಕ್ಷ ಸೀಲಿಂಗ್ ಫ್ಯಾನ್ ಗಳನ್ನು ವಿತರಿಸಲಾಗಿದೆ. ಹಾಗೆಯೇ 1.14ಕೋಟಿ ಬೀದಿಗಳನ್ನು ದೀಪಗಳನ್ನು ಬದಲಾಯಿಸಲಾಗಿದೆ. ಇದರ ಫಲವಾಗಿ 7.67ಬಿಲಿಯನ್ ಕಿಲೋವ್ಯಾಟ್ ವಿದ್ಯುತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ವಿದ್ಯುತ್ ಬಿಲ್ಲಿನಲ್ಲಿ ₹5,210ಕೋಟಿ ಉಳಿತಾಯವಾಗಿದೆ ಹಾಗೂ 46ಲಕ್ಷ ಟನ್ ಕಾರ್ಬನ್ ಪರಿಸರ ಸೇರುವುದು ತಪ್ಪಿರುವುದು.

  ದೇಶದ 21 ರಾಜ್ಯಗಳಲ್ಲಿ ಬೀದಿ ದೀಪ ಅಳವಡಿಕೆಯ ಪ್ರಕ್ರಿಯೆ ಜಾರಿಯಲ್ಲಿದೆ. ಆಂಧ್ರಪ್ರದೇಶ 28.9ಲಕ್ಷ ಎಲ್ ಇಡಿ ದೀಪಗಳನ್ನು ಅಳವಡಿಸಿದೆ ಮತ್ತು ರಾಜ್ಯದ ಎಲ್ಲಾ ಪಂಚಾಯತಿಗಳಲ್ಲಿಯೂ ಬೀದಿ ದೀಪವನ್ನು ಎಲ್ ಇಡಿಗೆ ಬದಲಾಯಿಸಲು ಆರಂಭಿಸಿದೆ.ರಾಜಾಸ್ಥಾನ ಮತ್ತು ಯುಪಿಯಲ್ಲಿ ಈಗಾಗಲೇ 10.3ಲಕ್ಷ ಮತ್ತು 9.3ಲಕ್ಷ ಬೀದಿ ದೀಪಗಳನ್ನು ಅಳವಡಿಸಿವೆ.

  ಸ್ಥಳೀಯ ಸಂಸ್ಥೆಗಳು ಹಳೆಯ ದೀಪಗಳ ಬದಲಿಗೆ ಎಲ್ ಇಡಿ ದೀಪ ಬದಲಾಣೆಯನ್ನು ನಯಾ ಪೈಸೆ ಬಂಡವಾಳ ಹೂಡದೆ ಕೈಗೊಳ್ಳುತ್ತಿರುವುದು ಮತ್ತೊಂದು ವಿಶೇಷ. ಎಲ್ ಇಡಿ ದೀಪ ಸರಬರಾಜು ಮಾಡುವವರು ಉಚಿತವಾಗಿ ದೀಪಗಳನ್ನು ಅಳವಡಿಸುವರು. ಪ್ರತಿ ತಿಂಗಳು ವಿದ್ಯುತ್ ಬಿಲ್ ನಲ್ಲಿ ಉಳಿತಾಯವಾಗುವ ಮೊತ್ತವನ್ನು ಗುತ್ತಿಗೆದಾಾರರಿಗೆ ಕೊಡಲಾಗುತ್ತದೆ.ಈ ಗುತ್ತಿಗೆಯು 7 ವರ್ಷದವರೆಗೂ ಚಾಲ್ತಿಯಲ್ಲಿ ಇರುತ್ತದೆ.

  ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಯೋಜನೆಯಡಿಯಲ್ಲಿ ಈಗಾಗಲೇ ಬೀದಿ ದೀಪಗಳನ್ನು ಅಳವಡಿಸುವುದಕ್ಕೆ ಚಾಲನೆ ದೊರೆತಿದೆ.ಪ್ರಾಯಶ: ಮುಂದಿನ ಆರು ತಿಂಗಳ ಅವಧಿಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಸಂಪೂರ್ಣವಾಗಿ ಎಲ್ ಇಡಿ ದೀಪಗಳನ್ನು ಅಳವಡಿಸುವ ಪ್ರಕ್ರಿಯೆಯು ಮುಗಿಯುವ ನಿರೀಕ್ಷೆ ಇರುವುದು.

  ಗೃಹಬಳಕೆಯ 36ಕೋಟಿ ದೀಪಗಳನ್ನು ಮತ್ತು 72 ಲಕ್ಷ ಟ್ಯೂಬ್ ಲೈಟ್ ಗಳನ್ನು ಎಲ್ ಇಡಿಗೆ ಬದಲಾಯಿಸಿರುವ ಕಾರಣ ಅಂದಾಜು 47.65 ಬಿಲಿಯನ್ ಕಿಲೋವ್ಯಾಟ್ ವಿದ್ಯುತ್ ಮತ್ತು ಕಾರ್ಬನ್ ಹೊರಸೂಸುವಿಕೆ 38.59ಮಿಲಿಯನ್ ಟನ್ ಕಡಿಮೆಯಾಗಿದೆ ಇದಲ್ಲದೆ 19 ಸಾವಿರ ಕೋಟಿ ವಾರ್ಷಿಕ ಉಳಿತಾಯವಾಗುತ್ತಿದೆ. ಪರಿಸರದ ಮೇಲೆಯೂ ಸಕಾರಾತ್ಮಕ ಬದಲಾವಣೆಯಾಗಿ ವಾತಾವರಣ ಕಲುಷಿತವಾಗುವುದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

  ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ಬನ್ ಕ್ರೆಡಿಟ್ ನಲ್ಲಿ ಗಳಿಸಿದ ಆದಾಯವನ್ನು ಉಪಯೋಗಿಸಿಕೊಂಡು ಗ್ರಾಮೀಣ ಭಾಗದಲ್ಲಿ ಹಳೆಯ ಬಲ್ಬ್ ಗಳನ್ನು ಎಲ್ ಇಡಿ ಗೆ ಪರಿವರ್ತನೆ ಮಾಡಲು ಕೇಂದ್ರ ಸರ್ಕಾರ “ಗ್ರಾಮ ಉಜಾಲಾ” ಯೋಜನೆಯನ್ನು ಜಾರಿಗೊಳಿಸಿದೆ.” ಈ ಯೋಜನೆಯನ್ನು ಸರ್ಕಾರದ ಅನುದಾನ ಪಡೆಯದೆ ಜಾರಿಗೊಳಿಸುತ್ತಿರುವುದು ವಿಶೇಷ. ಈ ಯೋಜನೆಯಡಿಯಲ್ಲಿ ಗುಣಮಟ್ಟದ 7 ಮತ್ತು 12 ವ್ಯಾಟ್ 1ಕೋಟಿ 50ಲಕ್ಷ ಎಲ್ ಇಡಿ ಬಲ್ಬ್ ಗಳನ್ನು ಗ್ರಾಮೀಣ ಭಾಗದಲ್ಲಿ ಕೇವಲ ₹10ರೂಪಾಯಿಗೆ ವಿತರಿಸಲಾಗುತ್ತಿದೆ. ಒಂದು ಕುಟುಂಬಕ್ಕೆ ಗರಿಷ್ಠ 5 ದೀಪಗಳನ್ನು ನೀಡುತ್ತಿದ್ದಾರೆ. ಈಗಾಗಲೇ 22,23,851 ದೀಪಗಳನ್ನು ವಿತರಿಸಲಾಗಿದೆ. ಇದರಿಂದ ವರ್ಷಕ್ಕೆ ನೂರು ಕೋಟಿ ರೂ ಉಳಿತಾಯವಾಗುತ್ತಿದೆ.

  ಯುಪಿಎ ಅವಧಿಯಲ್ಲಿ “ಬಚ್ಚತ್ ಲ್ಯಾಂಪ್ ಯೋಜನಾ” ಎಂಬ ಹೆಸರಲ್ಲಿ ಎಲ್ ಇಡಿ ಬಲ್ಬ್ ನೀಡಲು ಆರಂಭಿಸಲಾಗಿತ್ತು. ಆದರೆ ಯುಪಿಎ ಅವಧಿಯಲ್ಲಿ ಯೋಜನೆಗಳ ಘೋಷಣೆಗೆ ಇದ್ದ ಆಸಕ್ತಿ ಯೋಜನೆಯ ಅನುಷ್ಠಾನದಲ್ಲಿ ಕಿಂಚಿತ್ತು ಕಂಡು ಬರುತ್ತಿರಲಿಲ್ಲ ಹೀಗಾಗಿ ಈ ಯೋಜನೆ ಸದ್ದು ಮಾಡಲಿಲ್ಲ.

  ಪ್ರಧಾನಿ ನರೇಂದ್ರ ಮೋದಿಯವರು ಇಲ್ಲೆ ತಮ್ಮ ಜಾಣ್ಮೆ ಮತ್ತು ದೂರದರ್ಶಿತ್ವವನ್ನು ಪ್ರದರ್ಶಿಸಿ ಬಹುಪಯೋಗಿ ಯೋಜನೆಗಳನ್ನು ಜನರಿಗೆ ತಲುಪುವಂತೆ ಮಾಡುವುದಕ್ಕೆ ಆದ್ಯತೆಯನ್ನು ನೀಡಿದರು. ಈ ಬದ್ಧತೆಯ ಕಾರಣವಾಗಿಯೇ ಮೋದಿ ಸರ್ಕಾರದ ಅನೇಕ ಯೋಜನೆಗಳು ಇದೀಗ ಮನೆ ಮನೆ ಮಾತಾಗಿ ಮನೆಗಳಲ್ಲಿ ವಾತಾವರಣವು ಬದಲಾಗಿರುವುದು.

  ಸಾವಿರಾರು ಕೋಟಿ ಯೋಜನೆಗಳು ಕಳೆದ 7 ವರ್ಷದಿಂದ ಒಂದಾದ ಮೇಲೆ ಒಂದು ಜಾರಿಯಾಗುತ್ತಿದ್ದರು ಎಲ್ಲಿಯೂ ಭ್ರಷ್ಟಾಚಾರಕ್ಕೆ ಸುದ್ದಿಯಾಗಿಲ್ಲ. ಹಣ ಪೋಲು ಮಾಡಲು ಆಸ್ಪದವನ್ನು ನೀಡದೆ ಅತ್ಯಂತ ಪಾರದರ್ಶಕವಾಗಿ ಜನರಿಗೆ ತಲುಪಿಸುವ ಕೆಲಸವಾಗುತ್ತಿರುವುದು ಸ್ತುತ್ಯಾರ್ಹ.

  ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಬಹುತೇಕ ಯೋಜನೆಗಳ ಪ್ರಗತಿಯನ್ನು ಜನರಿಗೆ ತಿಳಿಸಲು ಡ್ಯಾಶ್ ಬೋರ್ಡ್ ಲಭ್ಯವಿದೆ ಇದರಲ್ಲಿ ಯೋಜನೆಗಳ ಪ್ರಗತಿಯ ನಿಖರ ಮಾಹಿತಿಯನ್ನು ತಿಳಿದುಕೊಳ್ಳಬಹುದು. “ಉಜಾಲ”, ಬೀದಿ ದೀಪ ಮತ್ತು “ಗ್ರಾಮ ಉಜಾಲ” ಹಾಗೂ ಬೀದಿ ದೀಪ ಬದಲಾಯಿಸಿರುವ ಒಟ್ಟು ಸಂಖ್ಯೆಗಳ ವಿವರಗಳನ್ನು ತಿಳಿಯಲು ಈಈಎಸ್ ಎಲ್ ನ ಡ್ಯಾಶ್ ಬೋರ್ಡ್ ಲಭ್ಯವಿದೆ.

  ಈಈಎಸ್ ಎಲ್ 4 ಸಾರ್ವಜನಿಕ ಉದ್ದಿಮೆಗಳು ಸೇರಿ ರಚಿಸಿರುವ ಸಂಸ್ಥೆ. ಎಲ್ ಇಡಿ ಬಲ್ಬ್ ಗಳ ಬೆಲೆ ಇಳಿಸಲು ಅಂದಿನ ಇಂಧನ ಸಚಿವರಾದ ಪಿಯೊಶ್ ಗೋಯಲ್ ರವರ ಮನವಿಗೆ ಉತ್ತೇಜನಕರವಾದ ಪ್ರತಿಕ್ರಿಯೆ ದೊರೆಯಲ್ಲಿಲ್ಲ. ಆದರೆ ಈಈಎಸ್ ಎಲ್ ದೀಪಗಳ ವಿತರಣೆ ಮುಂದಾದ ತರುವಾಯ ಬೆಲೆಗಳು 360ರಿಂದ ₹60 ಗಳಿಗೆ ಜರ್ರನೇ ಇಳಿಯಿತು.

  ಎಲ್ ಇಡಿ ಉತ್ಪಾದನೆಯಲ್ಲಿ ಪ್ರಮುಖ ಕಚ್ಚಾವಸ್ತುಗಳು ಚೀನಾದಿಂದ ಆಮದು ಮಾಡಿಕೊಳ್ಳುವುದು ಅನಿರ್ವಾಯವಾಗಿದೆ. ದೇಶೀಯವಾಗಿ ಗುಣಮಟ್ಟದ ಬಿಡಿಭಾಗಗಳ ಉತ್ಪಾದನೆಗೆ ಭಾರತೀಯ ಕಂಪನಿಗಳು ಮುಂದಾಗಿ ಆತ್ಮನಿರ್ಭರತೆಯನ್ನು ಸಾಧಿಸಬೇಕಾಗಿದೆ..

  2015ರಲ್ಲಿ ಆರಂಭವಾದ “ಉಜಾಲಾ” ಯೋಜನೆಯ ಯಶಸ್ಸಿನಲ್ಲಿ ಅಂದಿನ ಇಂಧನ ಸಚಿವ ಪಿಯೊಶ್ ಗೋಯಲ್ ರವರ ಕೊಡುಗೆ ಮತ್ತು ಪರಿಶ್ರಮ ಬಹುಮಟ್ಟಿಗೆ ಕಾರಣವಾಗಿದೆ. ಕೇವಲ 6ವರ್ಷಗಳಲ್ಲಿ ಯಶಸ್ವಿಯಾಗಿ ಸದ್ದಿಲ್ಲದೆ ಮನೆ ಮನೆಯಲ್ಲೂ ದೀಪಗಳ ಬಳಕೆಯನ್ನು ಬದಲಾಯಿಸಿದ ಕೀರ್ತಿಯು ಮೋದಿ ಸರ್ಕಾರಕ್ಕೆ ಸಲ್ಲುತ್ತದೆ.

  LEAVE A REPLY

  Please enter your comment!
  Please enter your name here