ಬೆಂಗಳೂರು: ಜನಗಣತಿ ಕಾರ್ಯ ರಾಷ್ಟ್ರ ನಿರ್ಮಾಣದ ಮಹತ್ವದ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರದ್ಧೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಬುಧವಾರ ಹೇಳಿದರು.
ಜನಗಣತಿ-2027ರ ಎರಡನೇ ಹಂತವಾದ ಜನಸಂಖ್ಯಾ ಗಣತಿ ಕಾರ್ಯಾಚರಣೆಯನ್ನು ಕೇಂದ್ರ ನಗರ ಪಾಲಿಕೆಯ ಆರು ವಿಧಾನಸಭಾ ಕ್ಷೇತ್ರಗಳ 63 ವಾರ್ಡ್ಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಇದರ ಅಂಗವಾಗಿ ಎಂ.ಜಿ. ರಸ್ತೆಯ ಪಿ.ಯು. ಕಟ್ಟಡದ 2ನೇ ಮಹಡಿಯ ಕೆನೋಪಿ ಹಾಲ್ನಲ್ಲಿ ಪ್ರಭಾರ ಮಟ್ಟದ ಅಧಿಕಾರಿಗಳು, ಚಾರ್ಜ್ ಆಫೀಸರ್ಗಳು, ತಾಂತ್ರಿಕ ಸಹಾಯಕರು ಮತ್ತು ಜನಗಣತಿ ಗುಮಾಸ್ತರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಜಗದೀಶ್ ಜಿ. ಅವರು ಜ್ಯೋತಿ ಬೆಳಗಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಜನಗಣತಿಯ ಮೂಲಕ ಸಂಗ್ರಹವಾಗುವ ನಿಖರ ಮಾಹಿತಿ ಮುಂದಿನ ಹತ್ತು ವರ್ಷಗಳ ದೇಶದ ಅಭಿವೃದ್ಧಿ ಯೋಜನೆಗಳು ಮತ್ತು ನೀತಿ ನಿರೂಪಣೆಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು. ಚಾರ್ಜ್ ಆಫೀಸರ್ಗಳು ಮೊದಲ ದಿನದಿಂದಲೇ ಕಾರ್ಯಯೋಜನೆ ಸಿದ್ಧಪಡಿಸಿ, ಕಾರ್ಯಾಚರಣೆ ಆರಂಭವಾಗುವ ದಿನವೇ ತಮ್ಮ ಅಧೀನದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣ ನೀಡಿ ಗೈರುಹಾಜರಾಗುವುದು ಅಥವಾ ಕರ್ತವ್ಯಲೋಪ ಎಸಗುವುದನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ತರಬೇತಿಯನ್ನು ಸಂಪೂರ್ಣವಾಗಿ ಪಡೆದು ಗೊಂದಲ ಅಥವಾ ಅನುಮಾನಗಳನ್ನು ಮುಕ್ತವಾಗಿ ಪ್ರಶ್ನಿಸಿ ಪರಿಹರಿಸಿಕೊಳ್ಳಬೇಕು ಹಾಗೂ ಯಾವುದೇ ಲೋಪವಿಲ್ಲದೆ ಜನಗಣತಿ ಪೂರ್ಣಗೊಳಿಸಲು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಜಂಟಿ ಆಯುಕ್ತ ಹೇಮಂತ್ ಶರಣ್ ಮಾತನಾಡಿ, ಕಾರ್ಯಾಚರಣೆಯ ಮೊದಲ ದಿನವೇ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಹಾಜರಾತಿ ಖಚಿತಪಡಿಸಿಕೊಂಡು, ಗೈರುಹಾಜರಿಯಿಂದ ಕೆಲಸಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಅನುಮಾನಗಳಿದ್ದಲ್ಲಿ ಸಹಾಯ ಒದಗಿಸಲು ಅಂಕಿಅಂಶ ವಿಭಾಗದ ತಂಡ, ಅಗತ್ಯ ಲಾಜಿಸ್ಟಿಕ್ಸ್ ಬೆಂಬಲ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಲಭ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಂಡವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
