ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ಬುಧವಾರ 12.5 ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ ‘ವಾರ್ಡ್ ಒನ್’ ಕಾರ್ಯಾಚರಣೆ ನಡೆಸಿ 17 ರಸ್ತೆ ಗುಂಡಿಗಳನ್ನು ಮುಚ್ಚಿದ್ದು, 103 ಟನ್ ನಿರ್ಮಾಣ ತ್ಯಾಜ್ಯ ತೆರವುಗೊಳಿಸಿದೆ. ನಿಯಮ ಉಲ್ಲಂಘಿಸಿದ ಮಳಿಗೆಗಳಿಗೆ ₹96,800 ದಂಡ ವಿಧಿಸಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರಣ್ಯಪುರ, ಬ್ಯಾಟರಾಯನಪುರ, ಸರ್ವಜ್ಞನಗರ ಮತ್ತು ಪುಲಿಕೇಶಿನಗರ ವಿಭಾಗಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ರಸ್ತೆ, ಕಸ ಮತ್ತು ಪಾದಚಾರಿ ಮಾರ್ಗ
- 12.5 ಕಿ.ಮೀ. ರಸ್ತೆಗಳಲ್ಲಿ 17 ಗುಂಡಿಗಳ ದುರಸ್ತಿ.
- 37 ಕಸದ ಕಪ್ಪು ಚುಕ್ಕೆಗಳ ತೆರವು; 32 ಟನ್ ಕಸ ವಿಲೇವಾರಿ.
- 158 ನಿರ್ಮಾಣ ತ್ಯಾಜ್ಯ ಸಂಗ್ರಹಣಾ ಸ್ಥಳಗಳ ತೆರವು; 103 ಟನ್ ತ್ಯಾಜ್ಯ ತೆರವು.
- 1.5 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ; 32 ಪಾದಚಾರಿ ಮಾರ್ಗದ ಅಡೆತಡೆಗಳ ತೆರವು.
- 2 ಜಂಕ್ಷನ್ಗಳ ಸುಧಾರಣೆ.
- 4 ಉದ್ಯಾನವನಗಳ ಸ್ವಚ್ಛತೆ.
ಚರಂಡಿ, ದೀಪ ಮತ್ತು ಮರಗಳು
- 2.16 ಕಿ.ಮೀ. ರಸ್ತೆ ಬದಿಯ ಚರಂಡಿ ಮತ್ತು 0.25 ಕಿ.ಮೀ. ಮಳೆನೀರು ಚರಂಡಿಗಳ ಹೂಳೆತ್ತುವಿಕೆ.
- 5 ಹೊಸ ಬೀದಿ ದೀಪಗಳ ಅಳವಡಿಕೆ; 36 ದೀಪಗಳ ದುರಸ್ತಿ.
- 52 ಮರದ ಕೊಂಬೆಗಳ ಕಟಾವು; 6.5 ಟನ್ ಮರದ ತ್ಯಾಜ್ಯ ತೆರವು.
- 108 ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಪೋಸ್ಟರ್ಗಳ ತೆರವು.
ದೂರುಗಳು ಮತ್ತು ಇತರ ಇಲಾಖೆಗಳು
- 37 ಸಾರ್ವಜನಿಕ ದೂರುಗಳು ಸ್ಥಳದಲ್ಲೇ ಪರಿಹಾರ; 7 ನಾಗರಿಕ ಸಂಘಟನೆಗಳು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಭಾಗಿ.
- ಬಿಡಬ್ಲ್ಯೂಎಸ್ಎಸ್ಬಿಯಿಂದ 5 ನೀರಿನ ಸೋರಿಕೆ ಪರಿಹಾರ, 6 ಚೇಂಬರ್ ಮಟ್ಟ ಸರಿಪಡಿಕೆ, 3 ನೀರು ಪೂರೈಕೆ ಸಮಸ್ಯೆಗಳ ಪರಿಹಾರ.
- ಬೆಸ್ಕಾಂನಿಂದ 2 ಅಡೆತಡೆಗಳ ತೆರವು.
ಮಳಿಗೆಗಳ ಪರಿಶೀಲನೆ
ಸಾರ್ವಜನಿಕ ಆರೋಗ್ಯ ಇಲಾಖೆ 143 ವ್ಯಾಪಾರ ಮಳಿಗೆಗಳನ್ನು ಪರಿಶೀಲಿಸಿದ್ದು, 58 ಮಳಿಗೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ, ಸ್ವಚ್ಛತೆ ಹಾಗೂ ವ್ಯಾಪಾರ ಪರವಾನಗಿ ನಿಯಮಗಳ ಉಲ್ಲಂಘನೆ ಕಂಡುಬಂದಿದೆ. ತಪ್ಪಿತಸ್ಥ ಮಳಿಗೆಗಳಿಗೆ ಒಟ್ಟು ₹96,800 ದಂಡ ವಿಧಿಸಲಾಗಿದೆ.
ವಾರ್ಡ್ಗಳಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಪರಿಹರಿಸುವ ‘ವಾರ್ಡ್ ಒನ್’ ಅಭಿಯಾನ ಮುಂದುವರಿಯಲಿದೆ ಎಂದು ಪಾಲಿಕೆ ತಿಳಿಸಿದೆ.
