ರಸ್ತೆಯಲ್ಲಿ ಬಿಡಾಡಿ ದನ ಕಂಡರೆ 1533ಕ್ಕೆ ಕರೆ ಮಾಡಿ: ಪೂರ್ವ ಬೆಂಗಳೂರಿನಲ್ಲಿ ಕಾರ್ಯಾಚರಣೆ ಆರಂಭ
ಬೆಂಗಳೂರು, ಅ. 5: ಪೂರ್ವ ಬೆಂಗಳೂರಿನ ರಸ್ತೆಗಳಲ್ಲಿ ಬಿಡಾಡಿ ಜಾನುವಾರುಗಳು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ, ಸಾರ್ವಜನಿಕರು ಸಹಾಯ ಆ್ಯಪ್ ಅಥವಾ 1533 ಸಹಾಯವಾಣಿಯಲ್ಲಿ ದೂರು ನೀಡಬಹುದು. ಜಾನುವಾರುಗಳನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಹೈಡ್ರಾಲಿಕ್ ವಾಹನದೊಂದಿಗೆ ಕಾರ್ಯಾಚರಣೆ ಆರಂಭಿಸಿದೆ.
ಪಾಲಿಕೆಯ ನಿಯಂತ್ರಣ ಕೊಠಡಿ ಸಂಖ್ಯೆ 9480685706ಕ್ಕೂ ಮಾಹಿತಿ ನೀಡಬಹುದು. ದೂರಿನೊಂದಿಗೆ ಜಾನುವಾರು ಇರುವ ನಿಖರ ಸ್ಥಳ ಹಾಗೂ ಸಾಧ್ಯವಾದಲ್ಲಿ ಛಾಯಾಚಿತ್ರ ಒದಗಿಸಿದರೆ ಸಿಬ್ಬಂದಿ ಸ್ಥಳವನ್ನು ಬೇಗ ಗುರುತಿಸಲು ನೆರವಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.
ರಸ್ತೆಗಳ ಮಧ್ಯೆ ನಿಲ್ಲುವ ಅಥವಾ ಮಲಗುವ ಜಾನುವಾರುಗಳು ವಾಹನ ಸವಾರರು, ಪಾದಚಾರಿಗಳು ಹಾಗೂ ಜಾನುವಾರುಗಳ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು. ಇದನ್ನು ತಡೆಯಲು ವಿಶೇಷ ವಾಹನದ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಹೇಳಿದರು.
ಹಿಡಿದ ಜಾನುವಾರುಗಳನ್ನು ಕೆ.ಆರ್. ಮಾರ್ಕೆಟ್ ದನದ ದೊಡ್ಡಿಗೆ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದನದ ದೊಡ್ಡಿ ನಿರ್ಮಾಣವಾಗುವವರೆಗೆ, ವಶಪಡಿಸಿಕೊಂಡ ಜಾನುವಾರುಗಳನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕೆ.ಆರ್. ಮಾರ್ಕೆಟ್ ನಗರ ದನದ ದೊಡ್ಡಿಗೆ ಸ್ಥಳಾಂತರಿಸಲಾಗುವುದು.
ಮಾಲೀಕರಿರುವ ಜಾನುವಾರುಗಳನ್ನು ನಿಯಮಾನುಸಾರ ವಿಧಿಸಿದ ದಂಡ ಪಾವತಿಸಿದ ಬಳಿಕ ಹಸ್ತಾಂತರಿಸಲಾಗುವುದು. ಮಾಲೀಕರಿಲ್ಲದ ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಲಾಗುವುದು. ಪದೇ ಪದೇ ಜಾನುವಾರುಗಳನ್ನು ಸಾರ್ವಜನಿಕ ರಸ್ತೆಗಳಿಗೆ ಬಿಡುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದೆ.
ದನ, ಹಸು, ಎಮ್ಮೆಗಳಿಗೆ ಮೊದಲ ಮೂರು ದಿನಕ್ಕೆ 600 ರೂ.
ಪಾಲಿಕೆ ಪ್ರಕಟಿಸಿದ ದಂಡದ ವಿವರಗಳ ಪ್ರಕಾರ, ದನ, ಎತ್ತು, ಹಸು, ಎಮ್ಮೆ ಹಾಗೂ ಎಮ್ಮೆ ಎತ್ತುಗಳಿಗೆ ಮೊದಲ ಮೂರು ದಿನಗಳಿಗೆ ಅಥವಾ ಅದರ ಭಾಗಕ್ಕೆ ಪ್ರತಿ ಜಾನುವಾರಿಗೆ 600 ರೂ. ವಿಧಿಸಲಾಗುತ್ತದೆ. ಮೂರು ದಿನಗಳ ನಂತರ ಪ್ರತಿ ದಿನಕ್ಕೆ 300 ರೂ. ವಿಧಿಸಲಾಗುತ್ತದೆ.
ಕರುಗಳಿಗೆ ಮೊದಲ ಮೂರು ದಿನಗಳಿಗೆ ಅಥವಾ ಅದರ ಭಾಗಕ್ಕೆ 300 ರೂ. ಹಾಗೂ ನಂತರ ದಿನಕ್ಕೆ 200 ರೂ. ವಿಧಿಸಲಾಗುತ್ತದೆ. ಕುದುರೆ ವರ್ಗದ ಜಾನುವಾರುಗಳು ಹಾಗೂ ಹೇಸರಗತ್ತೆಗಳಿಗೆ ಮೊದಲ ಮೂರು ದಿನಗಳಿಗೆ 100 ರೂ., ನಂತರ ದಿನಕ್ಕೆ 50 ರೂ. ವಿಧಿಸಲಾಗುತ್ತದೆ.
ಕತ್ತೆ ಅಥವಾ ಹಂದಿಗೆ ಮೊದಲ ಮೂರು ದಿನಗಳಿಗೆ 50 ರೂ., ನಂತರ ದಿನಕ್ಕೆ 25 ರೂ. ದಂಡವಿದೆ. ಕುರಿ, ಮೇಕೆ ಹಾಗೂ ಅವುಗಳ ಮರಿಗಳಿಗೆ ಮೊದಲ ಮೂರು ದಿನಗಳಿಗೆ ಪ್ರತಿ ಜಾನುವಾರಿಗೆ 25 ರೂ. ವಿಧಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸೋಮವಾರದಿಂದ ಶನಿವಾರದವರೆಗೆ ಕಾರ್ಯಾಚರಣೆ
ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯಾಚರಣೆ ನಡೆಯಲಿದೆ. ದೂರು ಆಧರಿಸಿ ಸಿಬ್ಬಂದಿ ಹೈಡ್ರಾಲಿಕ್ ವಾಹನದೊಂದಿಗೆ ಸ್ಥಳಕ್ಕೆ ತೆರಳಿ ಜಾನುವಾರುಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಜಾನುವಾರು ಮಾಲೀಕರು ತಮ್ಮ ಪ್ರಾಣಿಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಿಡದೆ ಸುರಕ್ಷಿತವಾಗಿ ಸಾಕಬೇಕು ಎಂದು ಲೋಖಂಡೆ ಸ್ನೇಹಲ್ ಸುಧಾಕರ್ ಮನವಿ ಮಾಡಿದ್ದಾರೆ.
