ಬೆಂಗಳೂರು ನಗರ ಜಿಲ್ಲೆ ಪೂರ್ತಿ ಜಲಮಂಡಳಿ ವ್ಯಾಪ್ತಿಗೆ ತರುವ ಯೋಜನೆ; 6–6.5 ಲಕ್ಷ ಮನೆಗಳ ಪ್ರಸ್ತಾವ
ಬೆಂಗಳೂರು, ಅ. 5: ಬೆಂಗಳೂರು ನಗರ ಜಿಲ್ಲೆಯ ಎಲ್ಲ ಪ್ರದೇಶಗಳನ್ನು ಜಲಮಂಡಳಿ ವ್ಯಾಪ್ತಿಗೆ ತಂದು, ಹಂತ ಹಂತವಾಗಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸುವ ಯೋಜನೆಗೆ ಸರ್ಕಾರ ಮುಂದಾಗಿದೆ. ಬೆಂಗಳೂರು ಮಹಾನಗರ ಪ್ರದೇಶದ ಮುಂದಿನ 10–15 ವರ್ಷಗಳ ಅಭಿವೃದ್ಧಿ ರೂಪುರೇಷೆಯಲ್ಲಿ ನೀರು, ವಸತಿ ಮತ್ತು ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ಅಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ 6–6.5 ಲಕ್ಷ ಕೈಗೆಟಕುವ ದರದ ಮನೆಗಳ ನಿರ್ಮಾಣ ಯೋಜನೆಯನ್ನೂ ಚರ್ಚಿಸಲಾಯಿತು. ಇದರಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ 40–50 ಸಾವಿರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ.
ಜಿಲ್ಲೆಯಾದ್ಯಂತ ನೀರು, ಒಳಚರಂಡಿ ಜಾಲ
ಹಿಂದಿನ ಸಭೆಯ ತೀರ್ಮಾನದಂತೆ ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯನ್ನು ಜಲಮಂಡಳಿ ವ್ಯಾಪ್ತಿಗೆ ಸೇರಿಸಿ ನೀರು ವಿತರಣೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು. ಜಿಲ್ಲೆಯ ಸಂಪೂರ್ಣ ರಸ್ತೆ ಜಾಲವನ್ನು ಗುರುತಿಸಿ ಅಭಿವೃದ್ಧಿಗೆ ಯೋಜನೆ ರೂಪಿಸುವುದಾಗಿಯೂ ಹೇಳಿದರು.
ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಜಿಲ್ಲೆಯ ಎಲ್ಲ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ತರಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಬೆಂಗಳೂರು ಮಹಾನಗರ ಪ್ರದೇಶದಲ್ಲಿ 2037ರ ವೇಳೆಗೆ ದಿನಕ್ಕೆ 3,600 ಮಿಲಿಯನ್ ಲೀಟರ್ ನೀರಿನ ಅಗತ್ಯವಿರಲಿದೆ ಎಂಬ ಅಂದಾಜಿನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ಹತ್ತು ವರ್ಷಗಳ ಕುಡಿಯುವ ನೀರು ಹಾಗೂ ಕೈಗಾರಿಕಾ ಬೇಡಿಕೆಯನ್ನು ಗಮನಿಸಿ, ಸಂಸ್ಕರಿಸಿದ ನೀರಿನ ಮರುಬಳಕೆ ಮತ್ತು ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸೂಚಿಸಿದರು.
ಮನೆಗಳು, ಕೈಗಾರಿಕಾ ಟೌನ್ಶಿಪ್ಗಳಿಗೆ ಯೋಜನೆ
ಕೈಗೆಟಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ 6–6.5 ಲಕ್ಷ ಮನೆಗಳ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಕೈಗಾರಿಕಾ ಕಾರ್ಮಿಕರಿಗೆ ವಸತಿ ಕಲ್ಪಿಸುವುದೂ ಇದರ ಭಾಗವಾಗಿದೆ.
ಮಹಾನಗರ ಪ್ರದೇಶದಲ್ಲಿ ಒಂಬತ್ತು ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್ಶಿಪ್ಗಳನ್ನು ರೂಪಿಸಬೇಕಾಗಿದೆ ಎಂದು ಶಿವಕುಮಾರ್ ಹೇಳಿದರು. ಈಗಾಗಲೇ 7,900 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇನ್ನೂ 5,600 ಎಕರೆ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದರು.
ಸಿಂಗಾಪುರದ ಪುಂಗಾಲ್ ಮಾದರಿಯಲ್ಲಿ ಎಐ ಸಿಟಿ ನಿರ್ಮಿಸುವ ಅಗತ್ಯವನ್ನು ಪ್ರಸ್ತಾಪಿಸಿದ ಅವರು, ಎಐ ವಿಶ್ವವಿದ್ಯಾಲಯಕ್ಕಾಗಿ ಲಭ್ಯ ಜಾಗಗಳನ್ನು ಗುರುತಿಸಲು ಸೂಚಿಸಿದರು.
2037ಕ್ಕೆ ಮೆಟ್ರೋ, ಉಪನಗರ ರೈಲು ವಿಸ್ತರಣೆಯ ಗುರಿ
2037ರ ವೇಳೆಗೆ ಹೆಚ್ಚುವರಿ 312 ಕಿ.ಮೀ. ಮೆಟ್ರೋ ಸಂಪರ್ಕ, 72 ಕಿ.ಮೀ. ಉಪನಗರ ರೈಲು ಸಂಪರ್ಕ ಮತ್ತು ಹತ್ತು ಕೇಂದ್ರಗಳನ್ನು ಜೋಡಿಸುವ 210 ಕಿ.ಮೀ. ವರ್ತುಲ ರಸ್ತೆ ನಿರ್ಮಾಣದ ಪ್ರಸ್ತಾವನೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಪೆರಿಫೆರಲ್ ರಿಂಗ್ ರೋಡ್ನ ಎರಡನೇ ಹಂತವನ್ನು ನೈಸ್ ರಸ್ತೆಗೆ ಜೋಡಿಸುವ ಪ್ರಸ್ತಾವನೆಯೂ ಚರ್ಚೆಗೆ ಬಂದಿತು.
ಬೆಂಗಳೂರು–ತುಮಕೂರು, ಬೆಂಗಳೂರು–ಮೈಸೂರು ಮತ್ತು ಬೆಂಗಳೂರು–ಕೆಜಿಎಫ್ ಕಾರಿಡಾರ್ಗಳನ್ನು ಸಂಪರ್ಕಿಸುವ 270 ಕಿ.ಮೀ. ಆರ್ಆರ್ಟಿಎಸ್ ಪ್ರಸ್ತಾವನೆ ಹಾಗೂ ಪ್ರಸ್ತಾವಿತ ಮುಂಬೈ–ಬೆಂಗಳೂರು ಹೈಸ್ಪೀಡ್ ರೈಲನ್ನು ಮೈಸೂರಿಗೆ ವಿಸ್ತರಿಸುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾದವು.
2037ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು 400–420 ಬಿಲಿಯನ್ ಡಾಲರ್ಗೆ ಹಾಗೂ 2047ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ಗೆ ಬೆಳೆಸುವ ಗುರಿಗೆ ಪೂರಕವಾಗಿ ಈ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
ಸಚಿವರಾದ ಎಂ.ಬಿ. ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ಸಂಸದ ಹಾಗೂ ಸಿಎಂ ಪ್ರಧಾನ ಸಲಹೆಗಾರ ಡಾ. ಜಿ.ಸಿ. ಚಂದ್ರಶೇಖರ್, ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಜಿಬಿಎ ಮುಖ್ಯ ಆಯುಕ್ತ ಡಾ. ಎಂ. ಮಹೇಶ್ವರ ರಾವ್, ಐಎಸ್ಇಜಿ ನಿರ್ದೇಶಕ ಡಾ. ಸಿರೀಶ್ ಸಂಖೆ, ಉದ್ಯಮಿಗಳಾದ ಟಿ.ಎ. ಮೋಹನದಾಸ್ ಪೈ, ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರರು ಭಾಗವಹಿಸಿದ್ದರು.
