ಬೆಂಗಳೂರು/ದಾವಣಗೆರೆ:
ಸರ್ಕಾರ ಘೋಷಣೆಮಾಡಿರುವ ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಜಿಲ್ಲೆಯಾದ್ಯಂತ ಪಾಲಿಸುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಗೆ ಹೊರಭಾಗದಿಂದ ಬಂದವರಿಗೆ ಕೋವಿಡ್-19 ಲಕ್ಷಣವಿದ್ದಲ್ಲಿ, ತಕ್ಷಣವೇ ಪರೀಕ್ಷೆ ಮಾಡಿ ಅವರನ್ನು ಫಲಿತಾಂಶ ಬರುವವರೆಗೆ ಹೋಮ್ ಕ್ವಾರಂಟೈನ್‍ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದು ಆರೋಗ್ಯ ಇಲಾಖೆಯ ಪ್ರಮುಖ ಜವಾಬ್ದಾರಿ ಎಂದು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಬೆಂಗಳೂರಿನ ವಿಕಾಸ ಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ದಾವಣಗೆರೆ ಜಿಲ್ಲಾಡಳಿತ ದೊಂದಿಗೆ ನಡೆಸಿದ ಕೋವಿಡ್-19 ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಸಚಿವರು ಕೋರೋನಾ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಕೋವಿಡ್ ಸೆಂಟರ್ ಹಾಗೂ ಆಸ್ಪತ್ರೆಗಳಿಗೆ ಶಿಫ್ಟ್ ಪ್ರಕಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳಾಗಿ ನೇಮಿಸಿ, ಅವರಿಂದ ಪ್ರತನಿತ್ಯ ವರದಿ ಪಡೆಯಬೇಕು. ಸರ್ಕಾರದಿಂದ ಆದೇಶವಾಗಿರುವ ಬಿಗಿ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೆಲವೊಂದಕ್ಕೆ ಸರ್ಕಾರ ಪರವಾನಿಗೆ ನೀಡಿದ್ದು, ಅಂತಹ ಕಾರ್ಯಗಳಿಗೆ ತೊಂದರೆಯಾಗದಂತೆಯೂ ನೋಡಿಕೊಳ್ಳಬೇಕು.
ಪೊಲೀಸ್ ಇಲಾಖೆಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಗೃಹ ರಕ್ಷಕದಳದ ಸಿಬ್ಬಂದಿಗಳ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇವರನ್ನು ಬಳಸಿಕೊಂಡು ಕಠಿಣ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.
ಬಯಲು ಪ್ರದೇಶದಲ್ಲಿ ಮಾರುಕಟ್ಟೆ ಸ್ಥಳಾವಕಾಶ ಕಲ್ಪಿಸಿ
ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಜನಜಂಗುಳಿಯಾಗುವ ಸಾಧ್ಯತೆ ಇರತ್ತೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ, ಎಲ್ಲಿಯೂ ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. ಒಂದೇ ಕಡೆ ಮಾರುಕಟ್ಟೆ ಇದ್ದರೆ ಜನರು ಅನಿವಾರ್ಯವಾಗಿ ಸೇರಬೇಕಾಗುತ್ತದೆ. ಹಾಗಾಗಿ ದಾವಣಗೆರೆಯ ಹೂರವಲಯದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಒಂದು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್‍ಗಾಗಿ ಮೀಸಲಿರಿಸಿ. ಯಾವುದೇ ಆಸ್ಪತೆ ಅಥವಾ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದಲ್ಲಿ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಿ ಎಂದು ಹೇಳಿದರು.
ಅಗತ್ಯವಿದ್ದಲ್ಲಿ ಆಂಬುಲೆನ್ಸ್ ಬಾಡಿಗೆ ಪಡೆಯಿರಿ
ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಹಾಗೂ ಹೋಬಳಿ ಮಟ್ಟದಲ್ಲಿ ಆಂಬುಲೆನ್ಸ್ ಇರುವಂತೆ ನೋಡಿಕೊಳ್ಳಲು ಹೇಳಿದರು. ಆದಾಗ್ಯೂ ಜಿಲ್ಲೆಯ ಯಾವುದೇ ಹೋಬಳಿ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಅಗತ್ಯವಿದಲ್ಲಿ, ಖಾಸಗಿಯಿಂದ ಆಂಬ್ಯುಲೆನ್ಸ್ ಬಾಡಿಗೆ ಪಡೆದುಕೊಳ್ಳಿ ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ರೆಮಿಡಿಸಿವರ್ ಮತ್ತು ಆಕ್ಸಿಜೆನ್ ಕೊರತೆ ಇಲ್ಲದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. ಅಗತ್ಯವಿದ್ದಲ್ಲಿ ತಕ್ಷಣವೆ ತರಿಸಿಕೊಳ್ಳಲು ಮುಂಚಿತವಾಗಿ ಅಗತ್ಯ ಕ್ರಮ ತೆಗೆದುಕೊಂಡಿರಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಟೆಸ್ಟಿಂಗ್ ಮಾಡಿಸಬೇಕು. ಟೆಸ್ಟಿಂಗ್ ಫಲಿತಾಂಶ ಬರುವವರೆಗೆ ಅವರೆಲ್ಲರನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅಂತವರು ಎಲ್ಲಿಯೂ ಓಡಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಆರೋಗ್ಯ ಇಲಾಖೆಯದ್ದು.
ಕರ್ಫ್ಯು ನಿಂದಾಗಿ ಬೆಂಗಳೂರು ನಗರದಿಂದ ದಾವಣಗೆರೆ ಜಿಲ್ಲೆಯ ನಾನಾ ಭಾಗಗಳಿಗೆ ಬಂದ ಜನರ ಬಗ್ಗೆ ಮಾಹಿತಿ ಪಡೆದ ಕೊರೊನಾ ಸೊಂಕು ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿ ಎಂದು ಎಲ್ಲಾ ತಾಲ್ಲೂಕಿನ ತಹಶಿಲ್ದಾರರಿಗೆ ಸೂಚನೆ ನೀಡಿದರು.
ಕೂವಿಡ್ ಲಸಿಕೆ ಅಭಾವದ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಸೆಳೆದಾಗ,ಮುಖ್ಯಮಂತ್ರಿಗಳು ಮತ್ತು ಅರೋಗ್ಯ ಸಚಿವ ರೊಂದಿಗೆ ಮಾತನಾಡಿ ಕಳಿಸಿಕೂಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಜನರಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಬೇಕು. ಆಟೋದಲ್ಲಿ ತೆರಳಿ ಪಟ್ಟಣ ಪ್ರದೇಶ ಹಾಗೂ ಗ್ರಾಮಗಳಿಗೆ ತೆರಳಿ ಮಾಸ್ಕ್, ಸಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಬೇಕು. ಜೊತೆಗೆ ಕೊರೋನಾ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ತಪಾಸಣೆಗೆ ಒಳಪಡುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಚಿವರಾದ ಶ್ರೀ ಬಸವರಾಜ ನಗರಾಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ದಾವಣಗೆರೆ ಜಿಲ್ಲಾಡಳಿತ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಹನುಮಂತ ರಾಯ, ಜಿಲ್ಲಾ ಅರೋಗ್ಯಧಿಕಾರಿ ಡಾ.ಜಯಪ್ರಕಾಶ್, ದಾವಣಗೆರೆ ಮಹಾನಗರ ಪಾಲಿಕೆ ಅಯುಕ್ತರಾದ ವಿಶ್ವನಾಥ ಮುದ್ನಾಳ್, ದಾವಣಗೆರೆ ವಿಭಾಗಾದಿಕಾರಿ ಮಮತಾ ಮತ್ತಿತರರು ಉಪಸ್ಥಿತರಿದ್ದರು.