ಆಧುನಿಕ ಯುದ್ಧ ಸನ್ನಿವೇಶಕ್ಕೆ ಪ್ರಾಥಮಿಕ ಆರೋಗ್ಯ ಸೇವೆ ಆಧುನೀಕರಣ: ಬೆಂಗಳೂರಿನಲ್ಲಿ IAF ವೈದ್ಯಕೀಯ ತರಬೇತಿ ಕೇಂದ್ರದ ತ್ರಿಸೇನಾ ವಿಚಾರ ಸಂಕಿರಣ
ಬೆಂಗಳೂರು, ಆಗಸ್ಟ್ 18: ಆಧುನಿಕ ಯುದ್ಧದ ಸವಾಲುಗಳನ್ನು ಎದುರಿಸಲು ರಕ್ಷಣಾ ಪಡೆಗಳ ಪ್ರಾಥಮಿಕ ಆರೋಗ್ಯ ಸೇವೆಯನ್ನು ಆಧುನೀಕರಿಸುವ ಕುರಿತು ಭಾರತೀಯ ವಾಯುಪಡೆಯ ವೈದ್ಯಕೀಯ ತರಬೇತಿ ಕೇಂದ್ರ (MTC) ಆಗಸ್ಟ್ 17 ಮತ್ತು 18ರಂದು 8ನೇ ಅಲೈಡ್ ಮತ್ತು ಹೆಲ್ತ್ಕೇರ್ ವಿಚಾರ ಸಂಕಿರಣವನ್ನು ನಡೆಸಿತು.
‘Modernization of Primary Healthcare in Defence Forces to meet the Modern War Scenario’ ವಿಷಯದಡಿ ನಡೆದ ವಿಚಾರ ಸಂಕಿರಣವು ಬದಲಾಗುತ್ತಿರುವ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸಲು ಮುಂಚೂಣಿ ವೈದ್ಯಕೀಯ ಸನ್ನದ್ಧತೆಯನ್ನು ಬಲಪಡಿಸುವ ಕ್ರಮಗಳ ಕುರಿತು ವೈದ್ಯಕೀಯ ಸಹಾಯಕರಿಗೆ ಸಮಗ್ರ ಮಾಹಿತಿ ಒದಗಿಸುವ ಉದ್ದೇಶ ಹೊಂದಿತ್ತು.
MTC ಪ್ರಕಾರ, ರಕ್ಷಣಾ ಪಡೆಗಳ ವೈದ್ಯಕೀಯ ಸಹಾಯಕರ ನಿರಂತರ ವೈದ್ಯಕೀಯ ಶಿಕ್ಷಣಕ್ಕಾಗಿ ನಡೆಯುವ ಈ ರೀತಿಯ ಏಕೈಕ ಕಾರ್ಯಕ್ರಮ ಇದಾಗಿದ್ದು, ವೈದ್ಯಕೀಯ ಸಹಾಯಕರಿಗಾಗಿಯೇ ವೈದ್ಯಕೀಯ ಸಹಾಯಕರಿಂದ ಆಯೋಜಿಸಲಾಗುತ್ತದೆ.
ಹೆಡ್ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ನ ಪ್ರಧಾನ ವೈದ್ಯಕೀಯ ಅಧಿಕಾರಿ ಏರ್ ವೈಸ್ ಮಾರ್ಷಲ್ ಎಸ್ಜಿಎಸ್ ದತ್ತ ಅವರು ಆಗಸ್ಟ್ 17ರಂದು ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಭಾರತೀಯ ವಾಯುಪಡೆ, ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆಯ ಸುಮಾರು 200 ಅಲೈಡ್ ಮತ್ತು ಹೆಲ್ತ್ಕೇರ್ ವೃತ್ತಿಪರರು ಹಾಗೂ ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ತ್ರಿಸೇನಾ ಪಡೆಗಳ ಪ್ರಾಥಮಿಕ ಆರೋಗ್ಯ ಮೂಲಸೌಕರ್ಯ ಬಲಪಡಿಸುವುದು, ರಕ್ಷಣಾ ಆರೋಗ್ಯ ಸೇವೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತರಬೇತಿ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಕಾರ್ಯಾಚರಣೆ, ಯುದ್ಧ ಮತ್ತು ವಿಪತ್ತು ಸನ್ನದ್ಧತೆ ಸೇರಿದಂತೆ ಸಮಕಾಲೀನ ವಿಷಯಗಳ ಕುರಿತು ವೈಜ್ಞಾನಿಕ ಅಧಿವೇಶನಗಳು ಮತ್ತು ಚರ್ಚೆಗಳು ನಡೆದವು.
ಆಧುನಿಕ ಯುದ್ಧದ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರೊಂದಿಗೆ ಸಂವಾದ ನಡೆಸಲು, ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ಹಾಗೂ ನವೀನ ಪರಿಹಾರಗಳ ಕುರಿತು ಚರ್ಚಿಸಲು ಈ ವಿಚಾರ ಸಂಕಿರಣ ಅವಕಾಶ ಕಲ್ಪಿಸಿತು.
