“ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ”: ಚಿಕ್ಕಪೇಟೆಯಿಂದ ಗಾಂಧಿನಗರದವರೆಗೆ ನನ್ನದೇ ಸಂಪರ್ಕಗಳಿವೆ; ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ
ಬೆಂಗಳೂರು, ಜೂ. 26: ರಾಜ್ಯದ ಎಲ್ಲ ಭಾಗಗಳಿಂದಲೂ ತನ್ನ ಬಳಿ ನಿರಂತರ ಮಾಹಿತಿ ಬರುತ್ತಿದ್ದು, ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ನಡೆದರೂ ಅದು ತನ್ನ ಗಮನಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ತೆರಿಗೆ ಸಂಗ್ರಹ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ರಾಜ್ಯದ ಎಲ್ಲ ವಲಯಗಳಿಂದಲೂ ನನಗೆ ನಿರಂತರ ಮಾಹಿತಿ ಬರುತ್ತದೆ. ಚಿಕ್ಕಪೇಟೆಯಿಂದ ಗಾಂಧಿನಗರದವರೆಗೆ, ಗಡಿ ಜಿಲ್ಲೆಗಳಿಂದ ರಾಜ್ಯದ ಎಲ್ಲ ಭಾಗಗಳಲ್ಲೂ ನನ್ನದೇ ಆದ ಸಂಪರ್ಕಗಳಿವೆ. ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಅಥವಾ ನಿರ್ಲಕ್ಷ್ಯ ನಡೆದರೂ ಅದು ನನ್ನ ಗಮನಕ್ಕೆ ಬರುತ್ತದೆ. ಆದ್ದರಿಂದ ನನಗೆ ಬರುತ್ತಿರುವ ಮಾಹಿತಿಯೂ ನಿಮ್ಮ ಕಾರ್ಯಕ್ಷಮತೆಯ ವರದಿಯೂ ಒಂದಕ್ಕೊಂದು ಹೊಂದಿಕೆಯಾಗಬೇಕು” ಎಂದು ಸ್ಪಷ್ಟ ಸಂದೇಶ ನೀಡಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೇ ಸರ್ಕಾರದ ಶಕ್ತಿ ಎಂದು ಬಣ್ಣಿಸಿದ ಮುಖ್ಯಮಂತ್ರಿ, ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯನ್ನು ಇಲಾಖೆ ಮೀರಿಸಿ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರು ನೀಡಿರುವ ಕಾರ್ಯಕ್ಷಮತೆ ಸುಧಾರಣೆಯ ಸಲಹೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜವಾಬ್ದಾರಿ ಈಗ ಅಧಿಕಾರಿಗಳ ಮೇಲಿದೆ ಎಂದು ಅವರು ತಿಳಿಸಿದರು.
ತೆರಿಗೆ ಸೋರಿಕೆಗೆ ಯಾವುದೇ ಅವಕಾಶ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಮುಖ್ಯಮಂತ್ರಿ, ಸೂಕ್ತ ದಾಖಲೆಗಳಿಲ್ಲದೆ ಒಂದೇ ಒಂದು ಸರಕು ಸಾಗಣೆ ವಾಹನ ಕೂಡ ಚೆಕ್ಪೋಸ್ಟ್ ಅಥವಾ ರಾಜ್ಯದ ಗಡಿಯನ್ನು ದಾಟಬಾರದು ಎಂದು ಹೇಳಿದರು.
“ಇದರಲ್ಲಿ ಯಾವುದೇ ರೀತಿಯ ರಾಜಿ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ” ಎಂದು ಅವರು ಎಚ್ಚರಿಸಿದರು.
ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಜಾರಿ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೆ ಮತ್ತು ಜಂಟಿ ಕಾರ್ಯಾಚರಣೆಗಳ ಮೂಲಕ ಉತ್ತಮ ಸಮನ್ವಯ ಸಾಧಿಸಿ ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಸೂಚಿಸಿದರು.
ರಾಜ್ಯದಲ್ಲಿ ಸುಮಾರು 12 ಲಕ್ಷ ತೆರಿಗೆದಾರರ ಮಾಹಿತಿಯಿದ್ದು, ತಂತ್ರಜ್ಞಾನ ಹಾಗೂ ಡೇಟಾ ಅನಾಲಿಟಿಕ್ಸ್ ಬಳಸಿ 360 ಡಿಗ್ರಿ ವಿಶ್ಲೇಷಣೆ ನಡೆಸುವ ಸಾಮರ್ಥ್ಯ ಇಲಾಖೆಗೆ ಇದೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರೆ ಗುರಿ ತಲುಪುವುದಷ್ಟೇ ಅಲ್ಲ, ಅದನ್ನು ಮೀರಿಸುವ ಸಾಮರ್ಥ್ಯವೂ ಇಲಾಖೆಗೆ ಇದೆ ಎಂದು ಹೇಳಿದರು.
ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ, ತೆರಿಗೆ ಪಾವತಿಸುವ ಪ್ರತಿಯೊಬ್ಬ ನಾಗರಿಕನನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಆದರೆ ತೆರಿಗೆ ವಂಚನೆಗೆ ಮಾತ್ರ ಯಾವುದೇ ಅವಕಾಶ ಇರಬಾರದು. ತೆರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಹೇಳಿದರು.
ಮುಂದಿನ ಪರಿಶೀಲನಾ ಸಭೆಯ ವೇಳೆಗೆ ತಾವು ನೀಡಿರುವ ಪ್ರತಿಯೊಂದು ಸೂಚನೆಯೂ ಜಾರಿಯಾಗಿರಬೇಕು. ಮುಂದಿನ ಸಭೆಯಲ್ಲಿ ನೈಜ ಉದಾಹರಣೆಗಳೊಂದಿಗೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಸ್ವತಃ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ಎಲ್ಲಾ ಜಂಟಿ ಆಯುಕ್ತರು ತಮ್ಮ ವಿಭಾಗಗಳಿಗೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯನ್ನು ಸಾಧಿಸಬೇಕು. ತೆರಿಗೆ ರಿಟರ್ನ್ ಸಲ್ಲಿಸದವರನ್ನು ಗುರುತಿಸಿ ನಿಗದಿತ ಅವಧಿಯಲ್ಲಿ ರಿಟರ್ನ್ ಸಲ್ಲಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
“ನಿಮಗೆ ಈಗ ಬರುತ್ತಿರುವ ತೆರಿಗೆಯ ಎರಡರಷ್ಟು ಸಂಗ್ರಹ ಮಾಡುವ ಸಾಮರ್ಥ್ಯ ಇದೆ. ಆದರೆ ಕಾನೂನು ಮೀರಿ ಅಥವಾ ಯಾರನ್ನಾದರೂ ಶೋಷಣೆ ಮಾಡಿ ಎಂದು ನಾನು ಹೇಳುತ್ತಿಲ್ಲ. ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಇಲಾಖೆಯಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದರು.
ಸುಮಾರು 38 ವರ್ಷಗಳ ಸಾರ್ವಜನಿಕ ಜೀವನದ ಅನುಭವವಿರುವ ತಾವು ಹಣಕಾಸು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಕಾರ್ಯವೈಖರಿಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದು, ನಿರಂತರ ಕಲಿಕೆಯೇ ಉತ್ತಮ ಆಡಳಿತದ ಮೂಲ ಎಂದು ನಂಬಿರುವುದಾಗಿ ಹೇಳಿದರು.
ವಿಭಾಗದ ಸಾಧನೆ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಶೇ.9ರಷ್ಟು ಪ್ರಗತಿ ದಾಖಲಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಗುಜರಾತ್, ತಮಿಳುನಾಡು ಹಾಗೂ ಹರಿಯಾಣ ರಾಜ್ಯಗಳಿಗಿಂತ ಉತ್ತಮ ಸಾಧನೆ ದಾಖಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಐಐಟಿ ಹೈದರಾಬಾದ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಜಿಎಸ್ಟಿ ಅನಾಲಿಟಿಕಲ್ ಪೋರ್ಟಲ್ ಮೂಲಕ ಜಿಎಸ್ಟಿ ಸಂಗ್ರಹ, ತೆರಿಗೆ ಸೋರಿಕೆ ಹಾಗೂ ವಂಚನೆ ಮೇಲೆ 360 ಡಿಗ್ರಿ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ನಕಲಿ ರಶೀದಿ ಮತ್ತು ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ದೊಡ್ಡ ಸವಾಲಾಗಿದ್ದು, ಬೋಗಸ್ ಕಂಪನಿಗಳನ್ನು ಪತ್ತೆಹಚ್ಚಿ ₹166 ಕೋಟಿ ವಸೂಲಿ ಮಾಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಬಂಧನದ ಪ್ರಮಾಣವನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.
ಮೈಸೂರು ವಿಭಾಗದಲ್ಲಿ ಕಾರ್ಯಕ್ಷಮತೆ ಕುಸಿದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ, ಕಾರಣಗಳು ಅಥವಾ ನೆಪಗಳನ್ನು ನೀಡುವುದು ಸರಿಯಲ್ಲ, ಫಲಿತಾಂಶವೇ ಮುಖ್ಯ ಎಂದು ಹೇಳಿದರು.
ಬಾಕಿ ಇರುವ ಮೇಲ್ಮನವಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ ಅವರು, ತೆರಿಗೆದಾರ ಸ್ನೇಹಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಅಧಿಕಾರಿಗಳು ನೀಡಿದ ಅಂಕಿಅಂಶಗಳ ಪ್ರಕಾರ, ಮೇ 2026ರವರೆಗೆ ತೆಲಂಗಾಣದಲ್ಲಿ ಶೇ.10ರಷ್ಟು ಜಿಎಸ್ಟಿ ಪ್ರಗತಿ ದಾಖಲಾಗಿದ್ದರೆ, ಕರ್ನಾಟಕದಲ್ಲಿ ಶೇ.9, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ತಲಾ ಶೇ.5, ಉತ್ತರ ಪ್ರದೇಶದಲ್ಲಿ ಶೇ.8ರಷ್ಟು ಪ್ರಗತಿ ದಾಖಲಾಗಿದೆ. ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಮೊದಲ ಸ್ಥಾನಕ್ಕೇರಿಸಲು ಮಾರ್ಗಗಳನ್ನು ಕಂಡುಹಿಡಿಯುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.