“ಸರ್ಕಾರದ ಘನತೆಗೆ ಧಕ್ಕೆ ತಂದರೆ ಕಠಿಣ ಕ್ರಮ”: ಅಗತ್ಯವಿದ್ದರೆ ಕಾನೂನು ತಿದ್ದುಪಡಿ ಮಾಡಿ ವರ್ಗಾವಣೆ; ಅಬಕಾರಿ ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ
ಬೆಂಗಳೂರು, ಜೂ. 26: ಸರ್ಕಾರದ ಘನತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ. ಅಗತ್ಯವಿದ್ದರೆ ಕಾನೂನು ತಿದ್ದುಪಡಿ ಮಾಡಿ ಅಬಕಾರಿ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡುವ ಅವಕಾಶವನ್ನೂ ಸೃಷ್ಟಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ನೀವುಗಳು ಘನತೆ ಉಳಿಸಿಕೊಂಡರೆ ಸರ್ಕಾರದ ಘನತೆ ಹೆಚ್ಚುತ್ತದೆ. ನೀವು ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ನೋಡುತ್ತಾ ಕೂರುವುದಿಲ್ಲ” ಎಂದು ಸ್ಪಷ್ಟ ಸಂದೇಶ ನೀಡಿದರು.
“ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡೋದಕ್ಕೆ ಆಗುವುದಿಲ್ಲ ಎಂದುಕೊಳ್ಳಬೇಡಿ. ಅಗತ್ಯಬಿದ್ದರೆ ವರ್ಗಾವಣೆ ಮಾಡಲು ಬೇಕಾದ ಕಾನೂನು ಬದಲಾವಣೆಯನ್ನೂ ತರಲು ಅವಕಾಶಗಳಿವೆ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ಎನ್ನುವ ಸ್ಪಷ್ಟ ಸೂಚನೆ ಕೊಡುತ್ತಿದ್ದೇನೆ” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾವುದೇ ವ್ಯಕ್ತಿ ಅಥವಾ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ವಿಭಾಗದ ಕಾರ್ಯಕ್ಷಮತೆ ಕುರಿತು ಮಾತನಾಡಿದ ಅವರು, ಇಲಾಖೆಯಲ್ಲಿ ಹೊಸದಾಗಿ ಜಾರಿಗೊಂಡಿರುವ AIB ವ್ಯವಸ್ಥೆ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡುಬಂದಿದೆ ಎಂದು ತಿಳಿಸಿದರು.
ಆದಾಯ ವೃದ್ಧಿಗೆ ಮತ್ತೊಂದು ಕ್ರಮವಾಗಿ 574 ಹೊಸ ಅಬಕಾರಿ ಸನ್ನದುಗಳನ್ನು ಇ-ಹರಾಜು ಮೂಲಕ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಅಬಕಾರಿ ಪರವಾನಗಿ ಹೊಂದಿರುವವರಿಗೆ ಅನುಕೂಲವಾಗುವಂತೆ ಪರವಾನಗಿ ನವೀಕರಣ ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ಕಪಕ್ಕದ ರಾಜ್ಯಗಳ ಅಬಕಾರಿ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸಿರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಕರ್ನಾಟಕಕ್ಕೂ ನಿಗದಿಪಡಿಸಿರುವ ಆದಾಯ ಗುರಿ ಸಾಧಿಸಲು ಅಧಿಕಾರಿಗಳು ಇನ್ನಷ್ಟು ಶ್ರಮಿಸಬೇಕು ಎಂದು ಹೇಳಿದರು.
“ಅಧಿಕಾರಿಗಳು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆಯ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ. ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.