Home Uncategorized IND vs BAN 1st Test: ಕುಲ್ದೀಪ್-ಅಕ್ಷರ್ ಸ್ಪಿನ್ ಮೋಡಿಗೆ ಬಾಂಗ್ಲಾ ತತ್ತರ: ಮೊದಲ ಟೆಸ್ಟ್​ನಲ್ಲಿ...

IND vs BAN 1st Test: ಕುಲ್ದೀಪ್-ಅಕ್ಷರ್ ಸ್ಪಿನ್ ಮೋಡಿಗೆ ಬಾಂಗ್ಲಾ ತತ್ತರ: ಮೊದಲ ಟೆಸ್ಟ್​ನಲ್ಲಿ ಭಾರತಕ್ಕೆ 188 ರನ್​ಗಳ ಭರ್ಜರಿ ಜಯ

7
0

ಛತ್ತೋಗ್ರಾಮ್​ನ ಝಹೂರ್‌ ಅಹ್ಮದ್‌ ಚೌಧುರಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs Bangladesh) ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಅಮೋಘ ಪ್ರದರ್ಶನ ತೋರಿದ ರಾಹುಲ್ ಪಡೆ 188 ರನ್​ಗಳ ಜಯ ಸಾಧಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ 258 ರನ್​ಗೆ ಡಿಕ್ಲೇರ್ ಘೋಷಿಸಿ ಬಾಂಗ್ಲಾಕ್ಕೆ ಗೆಲ್ಲಲು 513 ರನ್​ಗಳ ಬಿಗ್ ಟಾರ್ಗೆಟ್ ನೀಡಿದ್ದ ಟೀಮ್ ಇಂಡಿಯಾ (Team India) ಬೌಲಿಂಗ್​ನಲ್ಲಿ ಮಾರಕ ದಾಳಿ ಸಂಘಟಿಸಿತು. ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ (Kuldeep Yadav) ಸ್ಪಿನ್ ಮ್ಯಾಜಿಕ್​ಗೆ ಪೆವಿಲಿಯನ್ ಸೇರಿದ ಬಾಂಗ್ಲಾ ಬ್ಯಾಟರ್​ಗಳು 324 ರನ್​ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.

ಭಾರತ ಮೊದಲ ಇನ್ನಿಂಗ್ಸ್:

ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 133.5 ಓವರ್​ಗಳಲ್ಲಿ 404 ರನ್ ಕಲೆಹಾಕಿತು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 203 ಎಸೆತಗಳಲ್ಲಿ 90 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 192 ಎಸೆತಗಳಲ್ಲಿ 86, ರವಿಚಂದ್ರನ್ ಅಶ್ವಿನ್ 113 ಎಸೆತಗಳಲ್ಲಿ 58 ರನ್, ಕುಲ್ದೀಪ್ ಯಾದವ್ 40 ಹಾಗೂ ರಿಷಭ್ ಪಂತ್ 46 ರನ್​ಗಳ ಕಾಣಿಕೆ ನೀಡಿದರು. ಅದರಲ್ಲೂ ಅಯ್ಯರ್ ಹಾಗೂ ಪೂಜಾರ ತಂಡಕ್ಕೆ ಆಧಾರವಾಗಿ 149 ರನ್​ಗಳ ಜೊತೆಯಾಟ ಆಡಿದರು. ಕುಲ್ದೀಪ್ ಹಾಗೂ ಆರ್. ಅಶ್ವಿನ್ ಕೂಡ 92 ರನ್​ಗಳ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾದರು. ಬಾಂಗ್ಲಾ ಪರ ತೈಜುಲ್ ಇಸ್ಲಾಂ ಹಾಗೂ ಮೆಹ್ದಿ ಹಸನ್ ತಲಾ 4 ವಿಕೆಟ್ ಪಡೆದರು.

 

WHAT. A. WIN! #TeamIndia put on an impressive show to win the first #BANvIND Test by 188 runs

Scorecard https://t.co/CVZ44N7IRe pic.twitter.com/Xw9jFgtsnm

— BCCI (@BCCI) December 18, 2022

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್:

ಭಾರತವನ್ನು ಆಲೌಟ್ ಮಾಡಿದ ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶಕ್ಕೆ ಮೊದಲ ಓವರ್​ನ ಮೊದಲ ಎಸೆತದಲ್ಲೇ ಮೊಹಮ್ಮದ್ ಸಿರಾಜ್ ಶಾಕ್ ನೀಡಿದರು. ತಂಡದ ಪರ ಮುಷ್ಫೀಕರ್ ರಹೀಂ 28 ರನ್ ಗಳಿಸಿದ್ದೇ ಹೆಚ್ಚು. ಸಿರಾಜ್ ಹಾಗೂ ಕುಲ್ದೀಪ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಬಾಂಗ್ಲಾ ಕೇವಲ 55.5 ಓವರ್​ಗಳಲ್ಲಿ 150 ರನ್​ಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರೆ, ಕುಲ್ದೀಪ್ ಯಾದವ್ 5 ವಿಕೆಟ್ ಪಡೆದರು.

ಬಿಸಿಸಿಐ ವಿರುದ್ಧ ಗುಡುಗಿದ್ದ ರಮೀಜ್ ರಾಜಾಗೆ ಪಿಸಿಬಿ ಮುಖ್ಯಸ್ಥ ಸ್ಥಾನದಿಂದ ಗೇಟ್​ಪಾಸ್..!

ಭಾರತ ಎರಡನೇ ಇನ್ನಿಂಗ್ಸ್:

254 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಬಿರುಸಿನ ಬ್ಯಾಟಿಂಗ್ ನಡೆಸಿ 61.4 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 258 ರನ್‌ ಗಳಿಸಿ ಡಿಕ್ಲೆರ್‌ ಮಾಡಿಕೊಂಡಿತು. ಆ ಮೂಲಕ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 513 ರನ್‌ಗಳ ಬೃಹತ್‌ ಗುರಿ ನೀಡಿತ್ತು. ದ್ವಿತೀಯ ಇನ್ನಿಂಗ್ಸ್​ನಲ್ಲಿ ಶುಭಮನ್‌ ಗಿಲ್‌ 152 ಎಸೆತಗಳಲ್ಲಿ 110 ರನ್‌ ಗಳಿಸಿ ಶತಕ ಸಿಡಿಸಿದರೆ ಚೇತೇಶ್ವರ್‌ ಪೂಜಾರ 130 ಎಸೆತಗಳಲ್ಲಿ ಅಜೇಯ 102 ರನ್‌ ಗಳಿಸಿ ಸೆಂಚುರಿ ಬಾರಿಸಿದ್ದರು. ವಿರಾಟ್ ಕೊಹ್ಲಿ ಅಜೇಯ 19 ರನ್ ಗಳಿಸಿದರು.

ಬಾಂಗ್ಲಾ ದ್ವಿತೀಯ ಇನ್ನಿಂಗ್ಸ್:

513 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿತು. ನಜ್ಮುಲ್‌ ಶಾಂಟೊ(67) ಹಾಗೂ ಝಾಕಿರ್‌ ಹಸನ್‌ (100) ಭರ್ಜರಿ ಆರಂಭ ತಂದುಕೊಟ್ಟಿದ್ದರು. ಆ ಮೂಲಕ ಭಾರತ ತಂಡದ ಬೌಲರ್‌ಗಳಿಗೆ ವಿಶ್ವಾಸವನ್ನು ಕುಗ್ಗಿಸಿದ್ದರು. ಆದರೆ, ಅರ್ಧಶತಕ ಸಿಡಿಸಿದ್ದ ನಜ್ಮುಲ್‌ ಹುಸೇನ್‌ ಶಾಂಟೊ ಅವರನ್ನು ಉಮೇಶ್‌ ಯಾದವ್‌ ಔಟ್‌ ಮಾಡಿದ ಬಳಿಕ ಭಾರತ ತಂಡಕ್ಕೆ ಪಂದ್ಯದಲ್ಲಿ ತಿರುವು ಲಭಿಸಿತು. ಯಾಸಿರ್‌ ಅಲಿ, ಮುಷ್ಫಿಕರ್‌ ರಹೀಮ್‌ ಹಾಗೂ ನುರೂಲ್‌ ಹಸನ್‌ ಅವರನ್ನು ಅಕ್ಷರ್‌ ಪಟೇಲ್‌ ಔಟ್‌ ಮಾಡಿದರು. ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಝಾಕಿರ್‌ ಹಸನ್‌ ಭಾರತ ತಂಡದ ಬೌಲರ್‌ಗಳು ಸಾಕಷ್ಟು ಕಾಡಿದರು. ಎದುರಿಸಿದ 224 ಎಸೆತಗಳಲ್ಲಿ ಅಜೇಯ 100 ರನ್‌ ಗಳಿಸಿದರು.

ಐದನೇ ದಿನ ಬ್ಯಾಟಿಂಗ್​ಗೆ ಇಳಿದ ಶಕಿಬ್ ಅಲ್‌ ಹಸನ್‌ ಅವರನ್ನು 84 ರನ್ ಗಳಿಸಿದ್ದಾಗ ಕುಲ್ದೀಪ್ ಬೌಲ್ಡ್ ಮಾಡಿದರು. ಬಳಿಕ ಬಂದ ಬ್ಯಾಟರ್​ಗಳು ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಬಾಂಗ್ಲಾ 113.2 ಓವರ್​ಗಳಲ್ಲಿ 324 ರನ್​ಗೆ ಆಲೌಟ್ ಆಗುವ ಮೂಲಕ ಸೋಲುಕಂಡಿತು. ಭಾರತ ಪರ ಅಕ್ಷರ್ ಪಟೇಲ್ 4 ಹಾಗೂ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು. 188 ರನ್​ಗಳ ಭರ್ಜರಿ ಜಯದೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಕೊನೆಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ ಢಾಕಾದಲ್ಲಿ ಆಯೋಜಿಸಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here