ಬೆಂಗಳೂರು:
ರಾಜಕಾರಣದಲ್ಲಿ ಸೋಲು – ಗೆಲುವು ಸಾಮಾನ್ಯ. ಹಾಗೆಂದು ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಯಾರು ಏನೇ ಮಾಡಿದರೂ ಜೆಡಿಎಸ್ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ. ದೇವೇಗೌಡ, ಕುಮಾರಸ್ವಾಮಿಯ ಹೊರತಾಗಿಯೂ ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ. ಪಕ್ಷ ಯಾರೊಬ್ಬರನ್ನೂ ನೆಚ್ಚಿಕೊಂಡಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಕಿಡಿಕಾರಿದ್ದಾರೆ.
ಜೆ ಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಪಕ್ಷದ ಬಗ್ಗೆ ಹಲವಾರು ರೀತಿ ವ್ಯಾಖ್ಯಾನ ನಡೆಯುತ್ತಿವೆ. ಅದನ್ನು ಮನರಂಜನೆ ಕಾರ್ಯಕ್ರಮ ಎಂದು ಹೇಳಬಹುದು, ವೈಯಕ್ತಿಕವಾಗಿ ಯಾರ ಬಗ್ಗೆಯೂ ತಾವು ಮಾತನಾಡುವುದಿಲ್ಲ. ರಾಜಕಾರಣಿಗಳು ಏನೇನು ಮಾತಾಡುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಎಂದರು.
ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಎಷ್ಟು ಕಷ್ಟ ಎನ್ನುವುದು ಆ ಪಕ್ಷದ ಮುಖ್ಯಸ್ಥರಿಗೆ ಗೊತ್ತಿರುತ್ತದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಮಾತಾಡುವುದನ್ನು ನೋಡಿದ್ದೇನೆ. ಇದಕ್ಕೆ ಕಾರಣ ಕುಮಾರಸ್ವಾಮಿಯಾ, ರೇವಣ್ಣನಾ ? ಯಾರು ಕಾರಣ ? ಎಂದು ದೇವೇಗೌಡ ಪ್ರಶ್ನಿಸಿದರು.
ತಾವು ಮೂಲತಃ ಕಾಂಗ್ರೆಸ್ಸಿಗ. ಈ ಹಿಂದೆ ತಮ್ಮನ್ನು ಎಲ್ಲರೂ ಹೊರಹಾಕಿದಾಗ ಏಕಾಂಕಿಯಾಗಿದ್ದೆ, ಈಗ ಯಾರ ಹೆಸರನ್ನೂ ಹೇಳುವುದಿಲ್ಲ. ಮತ್ತೆ ವಾಪಾಸ್ ಎಲ್ಲಾ ತಮ್ಮ ಬಳಿಯೇ ಬಂದರು. ಯಾರಾದರೂ ತಮಗೆ ಹತ್ತು ರೂಪಾಯಿ ಕೊಟ್ಟಿದ್ದಾರಾ ? ಈಗ ಕೆಲವರು ಬದುಕಿದ್ದಾರೆ, ಒಬ್ಬ ಕನ್ನಡಿಗ ಪ್ರಧಾನಿ ಆಗುವ ಮಟ್ಟವೂ ಬಂತು. ನಾನು ಪ್ರಧಾನಿ ಆಕಾಂಕ್ಷಿಯಾಗಿರಲಿಲ್ಲ, ಅಪೇಕ್ಷೆ ಇರಲಿಲ್ಲ, ಅದು ವಿಧಿ , ನನ್ನ ರಾಜೀನಾಮೆ ನಂತರ ನನ್ನ ಬಿಟ್ಟು ಸರ್ಕಾರ ಕೂಡ ಮಾಡಿದರು ಎಂದು ಹಳೆಯ ಘಟನೆಗಳನ್ನು ನೆನಪಿಸಿದರು.
ಜೆಡಿಎಸ್ ಪಕ್ಷಕ್ಕೆ ಹಾನಿ ಮಾಡಲು ಯಾರಿಗೂ ಸಾಧ್ಯವಿಲ್ಲ. ಜೆಡಿಎಸ್ ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಮಾತ್ರ ಅಲ್ಲ. ಪಕ್ಷ ಮುನ್ನಡೆಸಲು ಇನ್ನು ಅನೇಕ ನಾಯಕರು ಇದ್ದಾರೆ. ಹಾಲು, ಅಕ್ಕಿ ಭಾಗ್ಯದ ಮೇಲೆ ಭಾಗ್ಯ ಕೊಟ್ಟವರು ಏನಾದರು ? 130 ಸೀಟು ಇದ್ದದ್ದು 78ಕ್ಕೆ ಏಕೆ ಬಂತು? ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ ? ಒಂದು ನಗರಸಭೆ ಚುನಾವಣೆ ಗೆಲ್ಲಲು ಆಗಲಿಲ್ಲ, ಇದು ಆನಂದವಾ ನಿಮಗೆ?. ಎಲ್ಲದಕ್ಕೂ ತೆರೆ ಎಳೆಯುತ್ತಿದ್ದೇನೆ ಎಂದು ಗುಡುಗಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಹೋಗಿದ್ದರು. ಆಗ ನಾವು ಕಾಂಗ್ರೆಸ್ ಜೊತೆ ನಿಲ್ಲಲಿಲ್ಲವೇ ಅದಕ್ಕೆ ಕುಮಾರಸ್ವಾಮಿ ಕಾರಣವಲ್ಲ. ಈ ಸಲ ನನ್ನ ಜಾತ್ಯತೀತತೆಯನ್ನು ಪರೀಕ್ಷೆ ಮಾಡಲಿ. ತಮಿಳುನಾಡಲ್ಲಿ ಏನಾಯ್ತು, ಯಾರು ಯಾರ ಮನೆ ಬಾಗಿಲಿಗೆ ಹೋಗಿದ್ದರು, ಬಿಹಾರದಲ್ಲಿ ಏನಾಯಿತು? ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಸರ್ಕಾರ ಮಾಡಿಕೊಂಡಿಲ್ವಾ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಗೋದ್ರಾ ಹತ್ಯಾಕಾಂಡ ವಿಚಾರ ಏನಾಯ್ತು ? ಮುಸ್ಲಿಮರನ್ನು ರಕ್ಷಿಸುವ ಶಕ್ತಿ ಇವರಿಗೆ ಇಲ್ಲ ? ಮುಸ್ಲಿಮರನ್ನು ದಾರಿ ತಪ್ಪಿಸಿದ್ದು ಯಾರು..? ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಸಭಾಪತಿ ರಾಜೀನಾಮೆ ವಿಚಾರದಲ್ಲಿ ತಮ್ಮ ಜಾತ್ಯತೀತತೆಯನ್ನು ಪ್ರಶ್ನೆ ಮಾಡಿದ್ದಾರೆ ಇವರು ಮಾಡುತ್ತಿರುವುದು ಏನು?. ನಾವು 28 ಸೀಟ್ ಕಳೆದುಕೊಂಡರೆ, ಕಾಂಗ್ರೆಸ್ ನವರು 50 ಸೀಟು ಕಳೆದುಕೊಂಡರು ಎಂದು ದೇವೇಗೌಡ ಹೇಳಿದರು.
ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ, ನಮಗೆ ಯಾವ ಹೈಕಮಾಂಡ್ ಕೂಡ ಇಲ್ಲ , ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ, ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೇನೆ ಎಂದರು. UNI