ಬೆಂಗಳೂರು: ಬೈಯಪ್ಪನಹಳ್ಳಿ–ಹೊಸೂರು ನಡುವಿನ 48 ಕಿ.ಮೀ. ರೈಲ್ವೆ ಹಳಿ ದ್ವಿಪಥಗೊಳಿಸುವ ಯೋಜನೆಯಡಿ ಚಂದಾಪುರ ಬಳಿ ಎನ್ಎಚ್–44 ಮೇಲಿನ ರೈಲ್ವೆ ಸೇತುವೆ ಸಂಖ್ಯೆ 470ರಲ್ಲಿ ಕೆ–ರೈಡ್ ಎರಡು 61 ಮೀಟರ್ ಉದ್ದದ ಓಪನ್ ವೆಬ್ ಗರ್ಡರ್ಗಳನ್ನು ಅಳವಡಿಸಿದೆ. ತಲಾ ಗರ್ಡರ್ ಸುಮಾರು 245 ಮೆಟ್ರಿಕ್ ಟನ್ ತೂಕ ಹೊಂದಿದೆ.
ಮೊದಲ ಗರ್ಡರ್ ಅನ್ನು ಅಕ್ಟೋಬರ್ 10ರಂದು ಹಾಗೂ ಎರಡನೆಯದನ್ನು ಅಕ್ಟೋಬರ್ 28ರಂದು ಅಳವಡಿಸಲಾಯಿತು. ಬೆಂಗಳೂರಿನಲ್ಲಿ ರೈಲ್ವೆ ಹಳಿ ದ್ವಿಪಥಗೊಳಿಸುವ ಯೋಜನೆಗಾಗಿ ಕೆ–ರೈಡ್ ಅಳವಡಿಸಿರುವ ಅತಿ ಉದ್ದದ ಗರ್ಡರ್ಗಳು ಇವು ಎಂದು ಸಂಸ್ಥೆ ತಿಳಿಸಿದೆ.

ವಿಂಚ್ ಮೂಲಕ ಎಳೆಯುವ ವ್ಯವಸ್ಥೆ ಹಾಗೂ ಐಎಸ್ಎಂಬಿ 600 ಉಕ್ಕಿನ ಸೆಕ್ಷನ್ಗಳಿಂದ ನಿರ್ಮಿಸಿದ ತಾತ್ಕಾಲಿಕ ಆಧಾರ ವ್ಯವಸ್ಥೆಯನ್ನು ಬಳಸಿ ಗರ್ಡರ್ಗಳನ್ನು ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಆಗುವ ಅಡಚಣೆಯನ್ನು ಕಡಿಮೆ ಮಾಡುವುದರೊಂದಿಗೆ ನಿಖರ ಹೊಂದಾಣಿಕೆ ಮತ್ತು ಸುರಕ್ಷತಾ ಕ್ರಮಗಳಿಗೆ ಗಮನ ನೀಡಲಾಯಿತು.
ಒಂದೇ ಕೆಳರಚನೆಯ ಮೇಲೆ ಎರಡೂ ದಿಕ್ಕಿನ ರೈಲು ಹಳಿಗಳನ್ನು ಹೊರುವಂತೆ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯ ವಿನ್ಯಾಸ ನಕ್ಷೆ, ರಚನಾತ್ಮಕ ವಿನ್ಯಾಸ ಹಾಗೂ ತಾತ್ಕಾಲಿಕ ವ್ಯವಸ್ಥೆಯ ನಕ್ಷೆಗೆ HQ/UBL/SWR ಅನುಮೋದನೆ ದೊರೆತಿದೆ ಎಂದು ಕೆ–ರೈಡ್ ತಿಳಿಸಿದೆ. ವಿನ್ಯಾಸದ ಪ್ರಕಾರ ಹೆದ್ದಾರಿಯ ಮಧ್ಯದಲ್ಲಿ ಕಂಬ ಇರುವುದಿಲ್ಲ.
ಸಂಬಂಧಿತ ರೈಲ್ವೆ ಕಾಮಗಾರಿಗಳು, ಹಾಲಿ ಸೇತುವೆಯ ತೆರವು ಹಾಗೂ ಅಗತ್ಯ ಹೆದ್ದಾರಿ ಸುಧಾರಣೆಗಳ ಬಳಿಕ, ಅನುಮೋದಿತ ವಿನ್ಯಾಸಕ್ಕೆ ಒಳಪಟ್ಟು ಉದ್ದೇಶಿತ 12 ಪಥಗಳ ಹೆದ್ದಾರಿ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ಗುರಿಯಿದೆ.
ರಸ್ತೆ ಮತ್ತು ರೈಲು ಮಾರ್ಗಗಳು ಪ್ರತ್ಯೇಕ ಮಟ್ಟಗಳಲ್ಲಿ ಹಾದುಹೋಗುವ ಈ ವ್ಯವಸ್ಥೆಯಿಂದ ಎರಡೂ ಸಂಚಾರಗಳು ಸ್ವತಂತ್ರವಾಗಿ ಸಾಗಲು ಸಾಧ್ಯವಾಗಲಿದೆ ಎಂದು ಕೆ–ರೈಡ್/ಬಿ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ತಿಳಿಸಿದರು.
ಸಂಬಂಧಿತ ರೈಲ್ವೆ ಹಾಗೂ ಇತರ ಕಾಮಗಾರಿಗಳನ್ನು 2027ರ ಜನವರಿಯೊಳಗೆ ಪೂರ್ಣಗೊಳಿಸುವ ಗುರಿಯಿದೆ ಎಂದು ಸಿಂಗ್ ತಿಳಿಸಿದರು. ಸಂಚಾರ ದಟ್ಟಣೆ ತಗ್ಗಿಸುವುದು, ಸುರಕ್ಷತೆ ಹೆಚ್ಚಿಸುವುದು ಹಾಗೂ ರಸ್ತೆ ಮತ್ತು ರೈಲು ಸಾಮರ್ಥ್ಯ ವೃದ್ಧಿಸುವುದು ಯೋಜನೆಯ ನಿರೀಕ್ಷಿತ ಪ್ರಯೋಜನಗಳಾಗಿವೆ.
