ಹೊರವರ್ತುಲ ರಸ್ತೆ ಸಮಗ್ರ ಮರುಅಭಿವೃದ್ಧಿಗೆ ₹450 ಕೋಟಿ: ಸಂಚಾರ, ಪಾದಚಾರಿ ಸೌಲಭ್ಯ ಮತ್ತು ಮೆಟ್ರೋ ಸಮನ್ವಯಕ್ಕೆ ಒತ್ತು ಎಂದ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಜುಲೈ 25: ಕೆ.ಆರ್.ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗಿನ ಹೊರವರ್ತುಲ ರಸ್ತೆ (ಒಆರ್ಆರ್) ಕಾರಿಡಾರ್ ಅನ್ನು ಸಮಗ್ರವಾಗಿ ಮೇಲ್ದರ್ಜೆಗೇರಿಸಿ, ಮೂಲಸೌಕರ್ಯ ಸುಧಾರಣೆ ಹಾಗೂ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ₹450 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕಡುಬೀಸನಹಳ್ಳಿಯ ಹೆಲಿಯೊಸ್ ಬಿಸಿನೆಸ್ ಪಾರ್ಕ್ನಲ್ಲಿ ಹೊರವರ್ತುಲ ರಸ್ತೆ ಕಂಪನಿಗಳ ಸಂಘ (ORRCA), ಐಟಿ ಪಾರ್ಕ್ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಮುಖ ಜಂಕ್ಷನ್ಗಳು, ಸರ್ವಿಸ್ ರಸ್ತೆಗಳು, ಪಾದಚಾರಿ ಮಾರ್ಗಗಳು, ಮೆಟ್ರೋ ಕಾಮಗಾರಿಗಳು, ಮಳೆನೀರು ಚರಂಡಿಗಳು, ಸಾರ್ವಜನಿಕ ಸಾರಿಗೆ ಸಂಪರ್ಕ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ನಾಗರಿಕರ ಸುರಕ್ಷತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು.
ಹೊರವರ್ತುಲ ರಸ್ತೆ ದೇಶದ ಆರ್ಥಿಕತೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕಾರಿಡಾರ್ ಆಗಿದ್ದರೂ, ಕಳೆದ ಮೂರು-ನಾಲ್ಕು ದಶಕಗಳಲ್ಲಿ ನಡೆದ ಅನಿಯೋಜಿತ ಹಾಗೂ ಅನಧಿಕೃತ ಅಭಿವೃದ್ಧಿಯಿಂದ ರಸ್ತೆ ಅಗಲ, ಚರಂಡಿ ವ್ಯವಸ್ಥೆ ಮತ್ತು ಪಾದಚಾರಿ ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ ಎಂದು ಸಚಿವರು ಹೇಳಿದರು. ಪೂರ್ವ ವಲಯದಲ್ಲಿ ರಸ್ತೆಗಳಿಗೆ ಲಭ್ಯವಿರುವ ಭೂಮಿ ಕೇವಲ ಶೇ.8ರಷ್ಟಿದ್ದು, ಅನಧಿಕೃತ ಕಟ್ಟಡಗಳು, ರಸ್ತೆ ಬದಿಯ ವಾಹನ ನಿಲುಗಡೆ ಹಾಗೂ ನಿಯಮಬಾಹಿರ ರಸ್ತೆ ದಾಟುವಿಕೆಯಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಕೇವಲ ರಸ್ತೆ ಮೇಲ್ಮೈ ಸುಧಾರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮೂಲಸೌಕರ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ಯೋಜನೆಯ ಉದ್ದೇಶವಾಗಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಪ್ರಮುಖ ಜಂಕ್ಷನ್ಗಳಲ್ಲಿ ವೈಜ್ಞಾನಿಕ ಮಾದರಿಯ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗುವುದು. ನೇರ ಬಲ ತಿರುವುಗಳನ್ನು ನಿಯಂತ್ರಿಸಿ, ವಾಹನಗಳನ್ನು ಸರ್ವಿಸ್ ರಸ್ತೆಗಳ ಮೂಲಕ ಫ್ರೀ ಲೆಫ್ಟ್ ಹಾಗೂ ಯು-ಟರ್ನ್ ವ್ಯವಸ್ಥೆಗೆ ಮಾರ್ಗದರ್ಶನ ಮಾಡಲಾಗುವುದು. ಪ್ರತಿ ಜಂಕ್ಷನ್ಗೆ ಪ್ರತ್ಯೇಕ ವಿನ್ಯಾಸ ಸಿದ್ಧಪಡಿಸಲಾಗಿದ್ದು, ಶಾಶ್ವತ ಕಾಮಗಾರಿ ಕೈಗೊಳ್ಳುವ ಮೊದಲು ಮೂರು ತಿಂಗಳ ಕಾಲ ಆರ್ಸಿಸಿ ಬ್ಯಾರಿಕೇಡ್ಗಳ ಮೂಲಕ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.
ಜಂಕ್ಷನ್ಗಳ ಬಳಿಯ ಬಳಕೆಯಾಗದ ಸ್ಥಳಗಳನ್ನು ಸಾರ್ವಜನಿಕ ಉಪಯೋಗಕ್ಕೆ ಅಭಿವೃದ್ಧಿಪಡಿಸಿ, ದೀಪಾಲಂಕಾರ ಹಾಗೂ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮೇಲ್ಮೈ ಆರ್ಸಿಸಿ ಚರಂಡಿಗಳನ್ನು ತೆರವುಗೊಳಿಸಿ ಭೂಗತ ಪೈಪ್ ಡ್ರೈನೇಜ್ ವ್ಯವಸ್ಥೆ ನಿರ್ಮಿಸುವ ಮೂಲಕ ಕನಿಷ್ಠ 10 ಅಡಿ ಅಗಲದ ಗ್ರಾನೈಟ್ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುವುದು. ಅಗತ್ಯವಿರುವ ಸ್ಥಳಗಳಲ್ಲಿ ಸೈಕಲ್ ಟ್ರ್ಯಾಕ್, ಹೈ-ರೈಸ್ ಪಾದಚಾರಿ ಕ್ರಾಸಿಂಗ್ ಹಾಗೂ ಪಾದಚಾರಿ ಮೇಲ್ಸೇತುವೆಗಳನ್ನು ನಿರ್ಮಿಸುವ ಯೋಜನೆಯೂ ಇದೆ ಎಂದು ಹೇಳಿದರು.
ಮುಖ್ಯ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಅಥವಾ ಆಸ್ಫಾಲ್ಟ್ ರಸ್ತೆ ನಿರ್ಮಾಣದ ಕುರಿತು ಪರಿಶೀಲನೆ ನಡೆಯುತ್ತಿದ್ದು, ವೈಟ್ ಟಾಪಿಂಗ್ ಮಾಡಿದ ರಸ್ತೆ ಸುಮಾರು 25 ವರ್ಷಗಳ ಬಾಳಿಕೆ ಹೊಂದಿರಲಿದೆ. ಭೂಗತ ಯುಟಿಲಿಟಿ ಲೈನ್ಗಳಿರುವ ಸರ್ವಿಸ್ ರಸ್ತೆಗಳನ್ನು ಆಸ್ಫಾಲ್ಟ್ ಮೂಲಕ ಮರುನಿರ್ಮಿಸಲಾಗುವುದು ಎಂದು ಹೇಳಿದರು.
ಮೂಲ ಭೂಸ್ವಾಧೀನ ದಾಖಲೆಗಳ ಆಧಾರದ ಮೇಲೆ ಸರ್ವೇ ನಡೆಸಿ ರಸ್ತೆ ಅತಿಕ್ರಮಣ ತೆರವುಗೊಳಿಸಿ ಪೂರ್ಣ ರಸ್ತೆ ಅಗಲವನ್ನು ಮರುಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ, ಪಾದಚಾರಿ ಮಾರ್ಗ ಹಾಗೂ ಬೀದಿ ದೀಪಗಳ ನಿರ್ವಹಣೆಯನ್ನು 10 ರಿಂದ 12 ವರ್ಷಗಳ ಕಾಲ ಗುತ್ತಿಗೆದಾರರ ಹೊಣೆಯಾಗಿಸುವ ‘ಆ್ಯನ್ಯುಟಿ ಪೇಮೆಂಟ್’ ಮಾದರಿಯನ್ನು ಜಾರಿಗೆ ತರುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಿದರು.
ಮೆಟ್ರೋ ಕಾರ್ಯಾಚರಣೆ ಆರಂಭವಾದ ಬಳಿಕ ಹೊರವರ್ತುಲ ರಸ್ತೆಯಲ್ಲಿ ಶೇ.30ರಷ್ಟು ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಈ ವರ್ಷದ ಅಕ್ಟೋಬರ್ನಿಂದ ಮೆಟ್ರೋ ಟ್ರಯಲ್ ರನ್ ಆರಂಭಿಸಿ, ಮುಂದಿನ ವರ್ಷ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸುವಂತೆ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಸ್ತೆ ಹಾಗೂ ಮೆಟ್ರೋ ಕಾಮಗಾರಿಗಳನ್ನು ಪರಸ್ಪರ ಸಮನ್ವಯದೊಂದಿಗೆ ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು.
ಮೆಟ್ರೋ ಮಾರ್ಗದುದ್ದಕ್ಕೂ ಸ್ಕೈವಾಕ್, ಲಾಸ್ಟ್ ಮೈಲ್ ಕನೆಕ್ಟಿವಿಟಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಕರಡು ವಿನ್ಯಾಸಗಳನ್ನು ಸಾರ್ವಜನಿಕರು ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಹಂಚಿಕೊಂಡು ಅಂತಿಮ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಸಂಚಾರ ದಟ್ಟಣೆ ಹೆಚ್ಚಿರುವ ಜಂಕ್ಷನ್ಗಳಿಗೆ ವೈಜ್ಞಾನಿಕ ಸಂಚಾರ ನಿರ್ವಹಣಾ ಯೋಜನೆ ರೂಪಿಸುವುದು, ಸಿಗ್ನಲ್ ಸಮನ್ವಯ, ಯು-ಟರ್ನ್ ವ್ಯವಸ್ಥೆ ಹಾಗೂ ಸರ್ವಿಸ್ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಮೊದಲು ಪ್ರಾಯೋಗಿಕ ಯೋಜನೆಗಳನ್ನು ಜಾರಿಗೊಳಿಸಿ, ಯಶಸ್ವಿಯಾದ ಬಳಿಕ ಶಾಶ್ವತವಾಗಿ ಅನುಷ್ಠಾನಗೊಳಿಸಲು ಸೂಚಿಸಿದರು.
ಮೆಟ್ರೋ ನಿಲ್ದಾಣಗಳು, ಐಟಿ ಪಾರ್ಕ್ಗಳು ಹಾಗೂ ವಾಣಿಜ್ಯ ಪ್ರದೇಶಗಳ ಸುತ್ತ ಸುರಕ್ಷಿತ, ನಿರಂತರ ಹಾಗೂ ಅಡೆತಡೆ ರಹಿತ ಪಾದಚಾರಿ ಮಾರ್ಗಗಳಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕ ಸ್ಥಳಗಳನ್ನು ಹಸಿರು ಪ್ರದೇಶಗಳು ಹಾಗೂ ನಾಗರಿಕ ಸೌಲಭ್ಯಗಳಾಗಿ ಅಭಿವೃದ್ಧಿಪಡಿಸಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಳೆನೀರು ಚರಂಡಿ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಹಾಗೂ ಅನಿಲ ಪೈಪ್ಲೈನ್ ಕಾಮಗಾರಿಗಳನ್ನು ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕೈಗೊಳ್ಳಬೇಕು. ರಸ್ತೆಗಳನ್ನು ಪುನಃ ಪುನಃ ಅಗೆದ ಪರಿಸ್ಥಿತಿ ಉಂಟಾಗದಂತೆ ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಸಚಿವರು ಸೂಚಿಸಿದರು.
ಹೊರವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳು, ವಾಹನ ನಿಲುಗಡೆ ವ್ಯವಸ್ಥೆ, ಬಸ್ ನಿಲ್ದಾಣಗಳು ಹಾಗೂ ಇತರೆ ನಾಗರಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಐಟಿ ಕಂಪನಿಗಳು, ಟೆಕ್ ಪಾರ್ಕ್ಗಳು ಹಾಗೂ ಒಆರ್ಆರ್ಸಿಎ ಪ್ರತಿನಿಧಿಗಳು ಸರ್ಕಾರದೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಿ ರಸ್ತೆ ಹಾಗೂ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ತಮ್ಮ ಸಲಹೆ ಮತ್ತು ಸಹಕಾರ ನೀಡುವಂತೆ ಸಚಿವರು ಮನವಿ ಮಾಡಿದರು.
ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
