ನೀಟ್-ಯುಜಿ ವಿವಾದದ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ; ಯುವಜನರ ಹಿತಾಸಕ್ತಿಯನ್ನು ಉಲ್ಲೇಖಿಸಿದ ಪತ್ರ
ನವದೆಹಲಿ: ನೀಟ್-ಯುಜಿ 2026 ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಗಳು ಹಾಗೂ ಕಳೆದ ಕೆಲವು ದಿನಗಳ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ದೇಶದ ಯುವಜನತೆ ಹಾಗೂ ಪ್ರಧಾನಮಂತ್ರಿಗೆ ಉದ್ದೇಶಿಸಿ ಬರೆದಿರುವ ಎರಡು ಪುಟಗಳ ಪತ್ರದಲ್ಲಿ, ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸುಧಾರಣೆಗೆ ತಾವು ಸಮರ್ಪಿತರಾಗಿದ್ದೇನೆ ಎಂದು ಹೇಳಿದ್ದಾರೆ. ಬಲಿಷ್ಠ, ಸಮಗ್ರ ಹಾಗೂ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯೇ ಬಲಿಷ್ಠ ರಾಷ್ಟ್ರದ ಅಡಿಪಾಯ ಎಂಬ ನಂಬಿಕೆಯನ್ನು ಪುನರುಚ್ಚರಿಸಿದ್ದಾರೆ.
2026ರ ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರ ತಕ್ಷಣವೇ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಿ, ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ಘೋಷಿಸಿತು ಎಂದು ಅವರು ಹೇಳಿದ್ದಾರೆ. ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯಲ್ಲಿ ನಡೆಸುವ ನಿರ್ಧಾರವನ್ನೂ ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯನ್ನು ಸುಗಮವಾಗಿ ನಡೆಸುವುದು ಸರ್ಕಾರದ ಮೊದಲ ಆದ್ಯತೆಯಾಗಿತ್ತು ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾ ಆಡಳಿತ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಬಂಧಿತ ಎಲ್ಲರ ಸಹಕಾರದೊಂದಿಗೆ ‘ಹೋಲ್ ಆಫ್ ಗವರ್ನ್ಮೆಂಟ್’ ವಿಧಾನವನ್ನು ಅನುಸರಿಸಿ 2026ರ ಜೂನ್ 21ರಂದು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ತಿಳಿಸಿದ್ದಾರೆ.


ಈ ಬೆಳವಣಿಗೆಗಳ ಮೊದಲ ದಿನದಿಂದಲೇ ತಾವು ಜವಾಬ್ದಾರಿಯನ್ನು ಸ್ವೀಕರಿಸಿದ್ದು, ಪರೀಕ್ಷಾ ಅಕ್ರಮಗಳಿಂದ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯಕ್ಕೆ ಧಕ್ಕೆಯಾಗದಂತೆ ಹಾಗೂ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಿದ್ದಾಗಿ ಅವರು ಹೇಳಿದ್ದಾರೆ.
2026ರ ಜುಲೈ 16ರಂದು ಪ್ರಕಟವಾದ ನೀಟ್-ಯುಜಿ ಫಲಿತಾಂಶಗಳು ತೃಪ್ತಿಕರವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಯಶಸ್ಸು ದೊರೆತಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಈ ಅವಧಿಯಲ್ಲಿಯೂ ಕೆಲವು ಜವಾಬ್ದಾರಿಯುತ ಹುದ್ದೆಗಳಲ್ಲಿ ಇರುವವರು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಹಾಗೂ ಅಡ್ಡಿಪಡಿಸಲು ಪ್ರಯತ್ನಿಸಿರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಕಳೆದ ಹತ್ತು ದಿನಗಳ ಬೆಳವಣಿಗೆಗಳು ತಮ್ಮ ಮನಸ್ಸಿಗೆ ನೋವುಂಟು ಮಾಡಿವೆ ಎಂದು ಹೇಳಿರುವ ಅವರು, ಇದು ತಮ್ಮ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ ಎಂದಿದ್ದಾರೆ. ಭಾರತದ ಯುವಶಕ್ತಿಯೇ ದೇಶದ ನಿಜವಾದ ಶಕ್ತಿ ಎಂದು ಹೇಳಿರುವ ಅವರು, ಅವರನ್ನು ಯಾವುದೇ ರೀತಿಯ ಗೊಂದಲ ಅಥವಾ ತಪ್ಪು ಮಾಹಿತಿಯ ಬಲೆಗೆ ಬೀಳದಂತೆ ನೋಡಿಕೊಳ್ಳುವುದು ತಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದ್ದಾರೆ.
ಜಂತರ್-ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಅವರು, ರಾಷ್ಟ್ರವಿರೋಧಿ ಶಕ್ತಿಗಳು ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದಿದ್ದಾರೆ. ದೇಶದ ಏಕತೆ ಅಚಲವಾಗಿರಬೇಕು ಹಾಗೂ ಯಾವುದೇ ವಿದ್ಯಾರ್ಥಿಯ ಭವಿಷ್ಯ ದೀರ್ಘಕಾಲದ ಕಾನೂನು ವಿವಾದಗಳಲ್ಲಿ ಸಿಲುಕಬಾರದು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಮಯವನ್ನು ಓದು ಹಾಗೂ ಭವಿಷ್ಯದ ನಿರ್ಮಾಣಕ್ಕೆ ಮೀಸಲಿಡುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲ ವಿಚಾರಗಳನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ, ವಿಶ್ವಾಸ ಮತ್ತು ನಿರಂತರ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿರುವ ಅವರು, ಸಚಿವ ಸಂಪುಟದ ಸಹೋದ್ಯೋಗಿಗಳು, ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ತಮ್ಮೊಂದಿಗೆ ಕಾರ್ಯನಿರ್ವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ರಾಷ್ಟ್ರಸೇವೆಯೇ ತಮ್ಮ ಜೀವನದ ಅತ್ಯುನ್ನತ ಆದ್ಯತೆಯಾಗಿದ್ದು, ಭಗವಾನ್ ಜಗನ್ನಾಥರ ಆಶೀರ್ವಾದದಿಂದ ಭಾರತ ಮಾತೆ, ಒಡಿಶಾದ ಜನತೆ ಹಾಗೂ ದೇಶದ ಯುವಜನರ ಆಶಯಗಳ ಈಡೇರಿಕೆಗೆ ಮುಂದೆಯೂ ತಮ್ಮನ್ನು ಸಮರ್ಪಿಸಿಕೊಳ್ಳುವುದಾಗಿ ಧರ್ಮೇಂದ್ರ ಪ್ರಧಾನ ತಿಳಿಸಿದ್ದಾರೆ.
