Home ಆರೋಗ್ಯ ವೈದ್ಯರ ಸುರಕ್ಷತೆಗೆ ಸರ್ಕಾರ ಕಟಿಬದ್ಧ, ಹಲ್ಲೆ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸಿದೆ: ಆರೋಗ್ಯ...

ವೈದ್ಯರ ಸುರಕ್ಷತೆಗೆ ಸರ್ಕಾರ ಕಟಿಬದ್ಧ, ಹಲ್ಲೆ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸಿದೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

12
0
Minister Sudhakar interacts with medicos at BMCRI
bengaluru

ವಿದ್ಯಾರ್ಥಿಗಳೊಂದಿಗೆ ಸಚಿವರ ಮುಕ್ತ ಸಂವಾದ

ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬನ್ನಿ

ಬೆಂಗಳೂರು:

ವೈದ್ಯರಿಗೆ ಭದ್ರತೆ ನೀಡಲು ಹಾಗೂ ಅವರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲು ಸರ್ಕಾರ ಕಟಿಬದ್ಧವಾಗಿದೆ. ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಲ್ಲೆ ಕಡಿಮೆಯಾಗಿದ್ದು, ಜಾಗೃತಿ ಮೂಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ʼಯುವ ಸಂವಾದʼ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಚಿವರು ಸಂವಾದ ನಡೆಸಿ, ವಿದ್ಯಾರ್ಥಿಗಳ ಆಶೋತ್ತರಗಳನ್ನು ತಿಳಿಯುವ ಪ್ರಯತ್ನ ಮಾಡಿದರು. ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಿ ಕ್ರಮ ವಹಿಸುವ ಭರವಸೆ ನೀಡಿದರು.

Also Read: Govt committed to ensure doctor’s safety: Karnataka Health Minister K Sudhakar at BMCRI

bengaluru

ವೈದ್ಯರ ಮೇಲಿನ ಹಲ್ಲೆ ಕುರಿತು ವಿದ್ಯಾರ್ಥಿ ಆಕಾಶ್‌ ಗಂಗಾಧರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರೋಗ್ಯ ಸಚಿವನಾಗಿ ವೈದ್ಯರ ಸುರಕ್ಷತೆಗೆ ಎಚ್ಚರಿಕೆ ಕ್ರಮ ವಹಿಸಿದ್ದೇನೆ. ಕೆಲ ರೋಗಿಗಳು ಮೃತಪಟ್ಟಾಗ ವೈದ್ಯರಿಂದ ತಪ್ಪಾಗಿದೆ ಎಂದೇ ಕುಟುಂಬದವರು ಆಲೋಚಿಸುತ್ತಾರೆ. ಆದರೆ ವಾಸ್ತವವಾಗಿ ಪ್ರತಿ ವೈದ್ಯರು ತಮ್ಮ ಶಕ್ತಿಮೀರಿ ಪ್ರಯತ್ನ ಮಾಡಿ ರೋಗಿಯನ್ನು ಬದುಕಿಸುವ ಯತ್ನ ಮಾಡುತ್ತಾರೆ. ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನ ಅವಕಾಶವಿದೆ. ಈ ರೀತಿ ಹಲ್ಲೆ ಮಾಡಿದ ಘಟನೆಗಳಲ್ಲಿ ಸರ್ಕಾರ ಕಠಿಣ ಕ್ರಮ ವಹಿಸಿದೆ. ವೈದ್ಯರ ಮೇಲೆ ಹಲ್ಲೆ ಮಾಡಿದವರಿಗೆ ಹಲವು ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಬಹುದು. ಈ ಕ್ರಮಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಬೇಕು. ಸರ್ಕಾರ ಸದಾ ವೈದ್ಯರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದರು.

ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್‌ ಸಾಂಕ್ರಾಮಿಕದ ಪರಿಸ್ಥಿತಿಯ ಹೊಸ ಅನುಭವವನ್ನು ಗಳಿಸಿದ್ದಾರೆ. ಕಳೆದ ನೂರು ವರ್ಷದ ಹಿಂದಿನ ಬ್ಯಾಚ್‌ ಕೂಡ ಈ ಸನ್ನಿವೇಶದ ಸವಾಲನ್ನು ಎದುರಿಸಿರಲಿಲ್ಲ. ಆದ್ದರಿಂದ 2020 ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳು ಈ ದೊಡ್ಡ ಸವಾಲನ್ನು ಎದುರಿಸುವ ಉತ್ತಮ ಅನುಭವ ಗಳಿಸಿದ್ದಾರೆ ಎಂದರು.

ಎಂಜಿನಿಯರಿಂಗ್‌ನಂತೆ ಹೆಚ್ಚು ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸುವುದರಿಂದ ಬೇಡಿಕೆ ಇಳಿಕೆಯಾಗಿ ನಿರುದ್ಯೋಗ ಉಂಟಾಗುವುದಿಲ್ಲವೇ ಎಂದು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಿಂದೆ 2,300 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದರು. ಈಗ 900 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದಾರೆ. ಆಯುಷ್‌ ವೈದ್ಯರನ್ನು ಸೇರಿಸಿದರೆ ಈ ಸಂಖ್ಯೆ 700 ಕ್ಕೆ ಇಳಿಯುತ್ತದೆ. 130 ಕೋಟಿ ಜನರು ಇರುವ ದೇಶದಲ್ಲಿ ಹೆಚ್ಚಿನ ಮೆಡಿಕಲ್‌ ಕಾಲೇಜುಗಳು ಬೇಕಾಗುತ್ತದೆ. ಅಲ್ಲದೆ, ಮೆಡಿಕಲ್‌ ಟೂರಿಸಂ ಕೂಡ ಈಗ ಬೆಳೆಯುತ್ತಿದೆ. ಒಂದು ಮೆಡಿಕಲ್‌ ಕಾಲೇಜಿಗೆ 750 ಕೋಟಿ ರೂ. ನಷ್ಟು ಖರ್ಚಾಗುತ್ತದೆ. ಈ ಹೊರೆ ಕಡಿಮೆ ಮಾಡಲು ಪಿಪಿಪಿ ಮಾದರಿಯಲ್ಲಿ ಕಾಲೇಜು ನಿರ್ಮಿಸುವ ಪ್ರಸ್ತಾಪವಿದೆ. ರಾಜ್ಯದಲ್ಲಿ ಇನ್ನೂ 9 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜುಗಳಿಲ್ಲ. ಆದ್ದರಿಂದ ಸರ್ಕಾರದ ಪಾಲು ಇರುವ ಮೆಡಿಕಲ್‌ ಕಾಲೇಜುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ದಾವಣಗೆರೆ, ಉಡುಪಿ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂತಹ ಕಾಲೇಜು ಆರಂಭಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಎಂಜಿನಿಯರಿಂಗ್‌ನಂತೆ ವೈದ್ಯ ಕ್ಷೇತ್ರದಲ್ಲಿ ಉದ್ಯೋಗ ಇಳಿಕೆಯಾಗುವುದಿಲ್ಲ. ವೈದ್ಯರಿಗೆ ಇನ್ನಷ್ಟು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿವೆ. ವೈದ್ಯರಿಗೆ ನಿರುದ್ಯೋಗ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ ಎಂದರು.

ಯುವಜನರು ರಾಜಕೀಯಕ್ಕೆ ಬನ್ನಿ

ಹೆಚ್ಚು ಯುವಜನರನ್ನು ರಾಜಕೀಯಕ್ಕೆ ತರುವುದು ಹೇಗೆ ಎಂದು ವಿದ್ಯಾರ್ಥಿ ಮಣಿಕಂಠನ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನ್ನಂತಹವರನ್ನು ನೋಡಿ ನೀವೆಲ್ಲರೂ ರಾಜಕೀಯ ಪ್ರವೇಶ ಮಾಡಬಹುದು. ಯಾವುದೇ ಕಾನೂನು ಜಾರಿಯಾಗುವುದು ಜನರು ಆರಿಸಿದ ಜನಪ್ರತಿನಿಧಿಯಿಂದ. ಜನರಿಗಾಗಿ ಸೇವೆ ಮಾಡುವ, ಶಿಕ್ಷಣ ಹೊಂದಿರುವ ವ್ಯಕ್ತಿಯನ್ನು ರಾಜಕೀಯಕ್ಕೆ ಆರಿಸದಿದ್ದರೆ ಸಮಸ್ಯೆ ಉಂಟಾಗುತ್ತದೆ. ರಾಜಕೀಯಕ್ಕೆ ಬರುವುದು ಬಹಳ ಶ್ರಮದಾಯಕ ಎಂಬುದು ನಿಜ. ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರುವುದರಿಂದ ಆರಂಭವಾಗಿ ಪ್ರಧಾನಿಯಾಗುವವರೆಗೆ ಬೆಳೆದಿದ್ದಾರೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು ಎಂದು ಸಲಹೆ ನೀಡಿದರು.

ಕಾಲೇಜುಗಳ ಶುಲ್ಕ ಕಡಿಮೆ ಮಾಡಬೇಕು ಹಾಗೂ ವೈದ್ಯರ ಭತ್ಯೆಯಲ್ಲಿ ಏಕರೂಪತೆ ತರಬೇಕು ಎಂದು ವಿದ್ಯಾರ್ಥಿಯೊಬ್ಬರು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಸಚಿವರು, *ಕೋವಿಡ್‌ ಸಮಯದಲ್ಲೂ ವೈದ್ಯರ ಭತ್ಯೆಯನ್ನು 30%-60% ರಷ್ಟು ಹೆಚ್ಚಿಸಲಾಗಿದೆ. ಕಳೆದ ಏಳೆಂಟು ವರ್ಷಗಳಿಂದಲೂ ಭತ್ಯೆ ಹೆಚ್ಚಳ ಆಗಿರಲಿಲ್ಲ ಎಂದರು.

bengaluru

LEAVE A REPLY

Please enter your comment!
Please enter your name here