ಬೆಂಗಳೂರು, ಮೇ 26, 2026: ಟೈಪ್-2 ಮಧುಮೇಹ ರೋಗಿಗಳು ಫಿನೆರಿನೋನ್ ಮಾತ್ರೆಗಳ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಸಾರ್ವಜನಿಕರು ವಯಸ್ಕರ ಲಸಿಕಾ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.
ಬೆಂಗಳೂರು ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹೊಸದಾಗಿ ನಿರ್ಮಿಸಲಾದ ಸ್ಪೆಷಲ್ ಹಾಗೂ ಸೆಮಿ ಸ್ಪೆಷಲ್ ವಾರ್ಡ್ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯತೆ ಎಂದು ಹೇಳಿದರು.
ಸಾರ್ವಜನಿಕರ ಬೇಡಿಕೆಯಂತೆ ಆಸ್ಪತ್ರೆಯಲ್ಲಿ 5 ಸ್ಪೆಷಲ್ ವಾರ್ಡ್ ಹಾಗೂ 7 ಸೆಮಿ ಸ್ಪೆಷಲ್ ವಾರ್ಡ್ಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಟೈಪ್-2 ಮಧುಮೇಹ ಇರುವವರಿಗೆ ಹೃದಯ, ಕಿಡ್ನಿ ಹಾಗೂ ರೆಟಿನಾ ಸಂಬಂಧಿತ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಇದರ ಬಗ್ಗೆ ಅನೇಕ ಜನರಿಗೆ ಅರಿವು ಇರುವುದಿಲ್ಲ ಎಂದು ಹೇಳಿದರು.
ಫಿನೆರಿನೋನ್ ಮಾತ್ರೆ ಸೇವನೆಯಿಂದ ಹೃದಯ ಸಂಬಂಧಿತ ಸಾವುಗಳನ್ನು ಹಾಗೂ ಕಿಡ್ನಿ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಈ ಮಾತ್ರೆಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದು ತಿಳಿಸಿದರು.
“ಟೈಪ್-2 ಮಧುಮೇಹ ಇರುವ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು,” ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಸಿಎಸ್ಆರ್ ಸಹಯೋಗದೊಂದಿಗೆ ವಯಸ್ಕರ ಲಸಿಕಾ ಕಾರ್ಯಕ್ರಮಕ್ಕೂ ಚಾಲನೆ ನೀಡಿದ ಸಚಿವರು, 65 ವರ್ಷ ಮೇಲ್ಪಟ್ಟವರು Pneumococcal ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಲಸಿಕೆ ಸೋಂಕುಜನ್ಯ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದ್ದು, ಹೃದಯ ಸಂಬಂಧಿತ ಕಾಯಿಲೆ ಹೊಂದಿರುವವರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದರು.
ಪ್ಲೂ ಲಸಿಕೆಯನ್ನು 6 ತಿಂಗಳಿನಿಂದ 65 ವರ್ಷದೊಳಗಿನವರು ಪಡೆದುಕೊಳ್ಳಬಹುದು. ಇದು 18 ವಿಧದ ವೈರಸ್ಗಳಿಂದ ರಕ್ಷಣೆ ನೀಡುತ್ತದೆ ಎಂದು ತಿಳಿಸಿದರು.
“ಮುಂಗಾರು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಪ್ಲೂ ಲಸಿಕೆ ಪಡೆದುಕೊಂಡರೆ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದು. ಇದರಿಂದ ಆಸ್ಪತ್ರೆ ದಾಖಲಾಗುವ ಸಮಸ್ಯೆಯೂ ಕಡಿಮೆಯಾಗುತ್ತದೆ,” ಎಂದು ಹೇಳಿದರು.
ಶ್ವಾಸಕೋಶ ಸಂಬಂಧಿತ ಸಮಸ್ಯೆ ಇರುವವರಿಗೆ ಈ ಲಸಿಕೆ ವಿಶೇಷವಾಗಿ ಸಹಾಯಕವಾಗಲಿದೆ ಎಂದು ಸಚಿವರು ಹೇಳಿದರು.
ಈ ವೇಳೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಸಚಿವರು, ರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಚಿಕಿತ್ಸೆ ಹಾಗೂ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸಿದರು.
ಶೀಘ್ರದಲ್ಲೇ ಆಸ್ಪತ್ರೆಯಲ್ಲಿ ಎಂಆರ್ಐ ಸೇರಿದಂತೆ ಇನ್ನಷ್ಟು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು ಹಾಗೂ ಸಿಬ್ಬಂದಿ ನೇಮಕಾತಿಯೂ ನಡೆಯಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
