ರಾಜ್ಯದಲ್ಲಿ ಹೊಸ ಪ್ರಜಾಸೇವಾ ಆಯುಕ್ತಾಲಯ ಸ್ಥಾಪನೆಗೆ ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶದ ಮೊದಲ ಪುಟ. ಚಿತ್ರ: ಕರ್ನಾಟಕ ಸರ್ಕಾರ
ಬೆಂಗಳೂರು: ಸಾರ್ವಜನಿಕ ಸೇವೆಗಳ ತ್ವರಿತ ವಿತರಣೆ ಮತ್ತು ಕುಂದುಕೊರತೆ ನಿವಾರಣೆಗಾಗಿ ರಾಜ್ಯ ಸರ್ಕಾರ ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ ಪ್ರಜಾಸೇವಾ ಆಯುಕ್ತಾಲಯ ಸ್ಥಾಪಿಸಿ ಆದೇಶ ಹೊರಡಿಸಿದೆ ಎಂದು ಗುರುವಾರ ಹೊರಡಿಸಿದ ಅಧಿಕೃತ ಪ್ರಕಟಣೆ ತಿಳಿಸಿದೆ.
ಆದೇಶದ ಪ್ರಕಾರ, ‘ಅಪರ ನಿರ್ದೇಶಕರು, ಸಕಾಲ ಮಿಷನ್’ ಹುದ್ದೆಯನ್ನು ಇನ್ನು ಮುಂದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ ಎಂದು ಮರುಪದನಾಮೀಕರಿಸಲಾಗಿದೆ. ಇವರು ನೂತನ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಆಯುಕ್ತಾಲಯದ ಕಾರ್ಯಭಾರ ಸುಗಮಗೊಳಿಸಲು ‘ವಿಶೇಷ ಆಯುಕ್ತರು, ಪ್ರಜಾಸೇವಾ ಆಯುಕ್ತಾಲಯ’ ಎಂಬ ಹೊಸ ಹುದ್ದೆ ಸೃಜಿಸಲಾಗಿದೆ. ಈ ಹುದ್ದೆಗೆ ಕಿರಿಯ ಶ್ರೇಣಿಯ ಐಎಎಸ್ ಅಥವಾ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರಸ್ತುತ ಇರುವ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ, ಯೋಜನಾ ನಿರ್ದೇಶಕರು (ಇ-ಕಚೇರಿ, ಐಪಿಜಿಆರ್‌ಎಸ್, ಸಿಸಿಎಂಎಸ್) ಮತ್ತು ಆಡಳಿತಾಧಿಕಾರಿ (ಸಕಾಲ) ಹುದ್ದೆಗಳು ಪ್ರಜಾಸೇವಾ ಇಲಾಖೆಯಲ್ಲೇ ಉಳಿಯಲಿವೆ. ಉಳಿದ ಎರಡು ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ವರ್ಗಾಯಿಸಲಾಗಿದೆ. ಇಲಾಖೆಯ ಆಡಳಿತ ಬಲವರ್ಧನೆಗೆ ಹೆಚ್ಚುವರಿಯಾಗಿ ಎರಡು ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗಳನ್ನು ಹೊಸದಾಗಿ ಸೃಜಿಸಲಾಗಿದೆ.
ಜೂನ್ 24, 2026ರಂದು ಸ್ಥಾಪನೆಯಾದ ಪ್ರಜಾಸೇವಾ ಇಲಾಖೆ ಸಕಾಲ ಸೇವೆಗಳ ಖಾತರಿ ವಿತರಣೆ, ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್), ಆರ್‌ಟಿಐ ಆನ್‌ಲೈನ್ ವ್ಯವಸ್ಥೆ, ಸರ್ಕಾರಿ ಪ್ರಕ್ರಿಯೆಗಳ ಮರು-ವಿನ್ಯಾಸ ಹಾಗೂ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನ, ಸಚಿವಾಲಯ ಕಚೇರಿ ಕೈಪಿಡಿ, ಇ-ಕಚೇರಿ, ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್), ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ (ಇಡಿಸಿಎಸ್), ತರಬೇತಿ ಹಾಗೂ ಪ್ರಜಾಸೇವಾ ಅಭಿಯಾನವನ್ನು ನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನೂತನ ಆಯುಕ್ತಾಲಯದಿಂದ ಸರ್ಕಾರಿ ಸೇವೆಗಳು ಜನರಿಗೆ ಮತ್ತಷ್ಟು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಲಭ್ಯವಾಗಲಿವೆ ಎಂದು ಪ್ರಕಟಣೆ ಹೇಳಿದೆ.
ಮುಖ್ಯಮಂತ್ರಿಯವರ ಅನುಮೋದನೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದಕ್ಕೂ ಮುನ್ನ, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳನ್ನು ಪ್ರಜಾ ಸೇವಾ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿತ್ತು.
