ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಮರುಜೀವ; ಸಿಂಧುಶ್ರೀ ಗಣೇಶ್ಗೆ 3 ಪೋಲ್ಗಳು, ₹5 ಲಕ್ಷ ನೆರವು: ಡಾ. ಜಿ. ಪರಮೇಶ್ವರ
ಬೆಂಗಳೂರು, ಜುಲೈ 24: ದೇಶದ ಅತ್ಯಂತ ಹಳೆಯ ರಾಜ್ಯ ಸರ್ಕಾರದ ವೈಮಾನಿಕ ತರಬೇತಿ ಸಂಸ್ಥೆಗಳಲ್ಲೊಂದಾದ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ (GFTS) ಮರುಜೀವ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲೇ ಪುನರಾರಂಭ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕೈಗೆಟಕುವ ವೆಚ್ಚದಲ್ಲಿ ಪೈಲಟ್ ತರಬೇತಿ ನೀಡುವ ಉದ್ದೇಶದಿಂದ 1940ರಲ್ಲಿ ಆರಂಭಗೊಂಡ ಈ ಸಂಸ್ಥೆಯ ಪರವಾನಗಿ ಡಿಸೆಂಬರ್ 2023ರಲ್ಲಿ ರದ್ದಾಗಿತ್ತು. ಇದೀಗ ಡಿಜಿಸಿಎ 2026ರ ಜುಲೈ 16ರಿಂದ 2031ರ ಜುಲೈ 15ರವರೆಗೆ ಐದು ವರ್ಷಗಳ ಅವಧಿಗೆ ಹೊಸ ಪರವಾನಗಿ ನೀಡಿದ್ದು, ಅಗತ್ಯ ಮೂಲಸೌಕರ್ಯಗಳೊಂದಿಗೆ ಶಾಲೆಯನ್ನು ನವೀಕರಿಸಲಾಗಿದೆ ಎಂದರು.
ಶಾಲೆಗೆ ಒಬ್ಬ ಮುಖ್ಯ ವಿಮಾನ ಬೋಧಕ ಹಾಗೂ ಇಬ್ಬರು ವಿಮಾನ ಬೋಧಕರನ್ನು ನೇಮಕ ಮಾಡಲಾಗಿದೆ. ಒಟ್ಟು ಐದು ವಿಮಾನಗಳಲ್ಲಿ ಸೆಸ್ನಾ 172ಪಿ, ಸೆಸ್ನಾ 172ಎಸ್ ಹಾಗೂ ಟೆಕ್ನಾಮ್ ಪಿ2006ಟಿ ಸೇರಿ ಮೂರು ವಿಮಾನಗಳು ಹಾರಾಟಕ್ಕೆ ಸಜ್ಜಾಗಿದ್ದು, ಉಳಿದ ಎರಡು ವಿಮಾನಗಳನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಪೈಲಟ್ ಪರವಾನಗಿ (PPL), ವಾಣಿಜ್ಯ ಪೈಲಟ್ ಪರವಾನಗಿ (CPL) ಹಾಗೂ ಮಲ್ಟಿ ಎಂಜಿನ್ ಎಂಡೋರ್ಸ್ಮೆಂಟ್ ತರಬೇತಿ ಮುಂದುವರಿಯಲಿದ್ದು, 30 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯವಿದೆ. ಹೊಸ ವಿದ್ಯಾರ್ಥಿಗಳ ಪ್ರವೇಶಾತಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ದೇಶದಲ್ಲಿ ವಿಮಾನಯಾನ ಕ್ಷೇತ್ರದ ವಿಸ್ತರಣೆಯಿಂದ ಭವಿಷ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ಪೈಲಟ್ಗಳ ಬೇಡಿಕೆ ಉಂಟಾಗಲಿದೆ. ಖಾಸಗಿ ತರಬೇತಿ ಸಂಸ್ಥೆಗಳ ಹೆಚ್ಚಿನ ವೆಚ್ಚ ಭರಿಸಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತರಬೇತಿ ಒದಗಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಡಿಜಿಸಿಎ ಅಧಿಕಾರಿಗಳು ರನ್ವೇ ಸುರಕ್ಷತೆ ಹಾಗೂ ಹಾರಾಟದ ಮಾನದಂಡಗಳನ್ನು ಪರಿಶೀಲಿಸಿ ಅನುಮೋದನೆ ನೀಡಿರುವುದರಿಂದ ತರಬೇತಿ ಸುರಕ್ಷಿತವಾಗಿ ನಡೆಯಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನ ಸೌಲಭ್ಯವೂ ಲಭ್ಯವಾಗಲಿದೆ ಎಂದು ತಿಳಿಸಿದರು.
ಶಾಲೆಯ ಸುತ್ತ 2.7 ಕಿ.ಮೀ ವ್ಯಾಪ್ತಿಯಲ್ಲಿ 45 ಮೀಟರ್ಗಿಂತ ಎತ್ತರದ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಪಕ್ಕದ 10 ಎಕರೆ ಭೂಮಿಯನ್ನು ಪಡೆದು ಶಾಲೆಯನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದ್ದು, ಮೈಸೂರು ಹಾಗೂ ಹಾಸನ ವಿಮಾನ ನಿಲ್ದಾಣಗಳನ್ನು ತರಬೇತಿಗೆ ಬಳಸುವ ಪ್ರಸ್ತಾವನೆಯೂ ಇದೆ. ಸಂಸ್ಥೆಯನ್ನು ಮುಚ್ಚುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ‘ಯುವ ಸಬಲೀಕರಣ, ಕ್ರೀಡೆ ಮತ್ತು ನಾಗರಿಕ ವಿಮಾನಯಾನ ಇಲಾಖೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದಿರುವ ಶಿವಮೊಗ್ಗದ ಪೋಲ್ ವಾಲ್ಟ್ ಅಥ್ಲೀಟ್ ಸಿಂಧುಶ್ರೀ ಗಣೇಶ್ ಅವರಿಗೆ ತಲಾ ₹2.5 ಲಕ್ಷ ಮೌಲ್ಯದ ಮೂರು ಅಂತರರಾಷ್ಟ್ರೀಯ ಗುಣಮಟ್ಟದ ಪೋಲ್ಗಳನ್ನು ವಿತರಿಸಿ, ಅವರ ತರಬೇತಿಗಾಗಿ ₹5 ಲಕ್ಷ ಆರ್ಥಿಕ ನೆರವನ್ನು ಘೋಷಿಸಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಎಂ.ಎನ್. ಅನುಚೇತ್ ಹಾಗೂ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಪ್ರಾಂಶುಪಾಲ ಬಸವರಾಜ್ ಉಪಸ್ಥಿತರಿದ್ದರು.
