ಶಿವಾಜಿನಗರ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆ ಹಲ್ಲೆಗೊಳಗಾದ ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ
ಬೆಂಗಳೂರು: ಶಿವಾಜಿನಗರದಲ್ಲಿ ಇತ್ತೀಚೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಿಡಿಗೇಡಿಗಳಿಂದ ಹಲ್ಲೆಗೊಳಗಾದರೂ ಕರ್ತವ್ಯ ನಿರ್ವಹಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು.
ಸನ್ಮಾನಿತ ಅಧಿಕಾರಿಗಳಲ್ಲಿ ಕಾರ್ಯಪಾಲಕ ಅಭಿಯಂತರ ಆತಿಫ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಾಧವರಾವ್ ಮತ್ತು ಸಾವಿತ್ರಿ, ಸಹಾಯಕ ಅಭಿಯಂತರ ರುಚಿತಾ, ಇಂಜಿನಿಯರ್ ಗೌತಮ್ ಹಾಗೂ ಕಾರ್ಯಾಚರಣೆಯಲ್ಲಿ ಬಳಸಲಾದ ಜೆಸಿಬಿಯ ಮಾಲೀಕರು ಸೇರಿದ್ದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ ಅವರು, ಸರ್ಕಾರ ಎಷ್ಟೇ ಯೋಜನೆಗಳನ್ನು ರೂಪಿಸಿದರೂ ಅವುಗಳನ್ನು ಜನರಿಗೆ ತಲುಪಿಸುವಲ್ಲಿ ನಿಷ್ಠಾವಂತ ಅಧಿಕಾರಿಗಳ ಪಾತ್ರವೇ ಪ್ರಮುಖವಾಗಿದೆ ಎಂದು ಹೇಳಿದರು. ಸಮಾಜಘಾತಕ ಶಕ್ತಿಗಳ ಬೆದರಿಕೆ ಹಾಗೂ ಹಲ್ಲೆಗೂ ಹೆದರದೆ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿದ ಜಿಬಿಎ ಸಿಬ್ಬಂದಿಯನ್ನು ಅಭಿನಂದಿಸಿದ ಅವರು, ಇಂತಹ ಅಧಿಕಾರಿಗಳೇ ಇಲಾಖೆ ಹಾಗೂ ಸರ್ಕಾರದ ನಿಜವಾದ ಶಕ್ತಿ ಎಂದು ಹೇಳಿದರು.
