ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆಗಸ್ಟ್ 7ರೊಳಗೆ ಗಣತಿ ನಮೂನೆ ಸಲ್ಲಿಸಿ: ಜಿಬಿಎ ಮುಖ್ಯ ಆಯುಕ್ತರ ಮನವಿ
ಬೆಂಗಳೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ–2026 (SSR-2026) ಪ್ರಕ್ರಿಯೆಯ ಅಂಗವಾಗಿ, ಇನ್ನೂ ಗಣತಿ (Enumeration) ನಮೂನೆಯನ್ನು ಸಲ್ಲಿಸದಿರುವ ಮತದಾರರು ಆಗಸ್ಟ್ 7, 2026ರೊಳಗೆ ತಮ್ಮ ಬೂತ್ ಮಟ್ಟದ ಅಧಿಕಾರಿ (BLO) ಅವರಿಗೆ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ (ಬೆಂಗಳೂರು) ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಭರ್ತಿ ಮಾಡಿದ ಗಣತಿ ನಮೂನೆಯನ್ನು ಇನ್ನೂ ಸಲ್ಲಿಸದಿರುವ ನಾಗರಿಕರು ತಮ್ಮ ವಿವರಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲು ಇದು ಕೊನೆಯ ಅವಕಾಶ ಎಂದು ಅವರು ಹೇಳಿದ್ದಾರೆ.
ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಬೇಕಿರುವುದರಿಂದ, ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ನಮೂನೆಗಳನ್ನು ಸಲ್ಲಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ.
