ಕಡತ ಚಿತ್ರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ. ಚಿತ್ರ: ಕೆಇಎ.
ಬೆಂಗಳೂರು: ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಡಿಪ್ಲೊಮಾ ಮಟ್ಟದ ವಿದ್ಯಾರ್ಹತೆಯ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಇದ್ದ ಕೊನೆ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನವೆಂಬರ್ 25ರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಸ್ತರಣೆ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅನ್ವಯಿಸುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

2026ರ ಅಕ್ಟೋಬರ್ 31ರಂದು ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ಹಾಗೂ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಕಲ್ಯಾಣ ಕರ್ನಾಟಕ ವೃಂದದ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇವು ಡಿಪ್ಲೊಮಾ ಅಥವಾ ತತ್ಸಮಾನ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಹಾಗೂ ಒಂದೇ ಪಠ್ಯಕ್ರಮ ಇರುವ ಗ್ರೂಪ್-ಸಿ ಹುದ್ದೆಗಳಾಗಿದ್ದು, ಆನ್‌ಲೈನ್ ಅರ್ಜಿಗಳ ಆಧಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುವುದು. ಈ ಮೊದಲು ಅರ್ಜಿ ಸಲ್ಲಿಸಲು ನವೆಂಬರ್ 26 ಮತ್ತು ಶುಲ್ಕ ಪಾವತಿಸಲು ನವೆಂಬರ್ 27 ಕೊನೆ ದಿನಾಂಕವಾಗಿತ್ತು.
ಅಕ್ಟೋಬರ್ 31ರ ಅಧಿಸೂಚನೆಯಲ್ಲಿ ಬೇರೆ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.
