ಚಾಯ್ಸ್-4 ಅಭ್ಯರ್ಥಿಗಳಿಗೆ 3ನೇ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್ಗೆ ಷರತ್ತುಬದ್ಧ ಅವಕಾಶ: ಕೆಇಎ
ಬೆಂಗಳೂರು: ಪದವಿಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಖಾಲಿ ಸೀಟುಗಳನ್ನು ಭರ್ತಿ ಮಾಡಲು ವಿಶೇಷ ಸ್ಟ್ರೇ ವ್ಯಾಕೆನ್ಸಿ ಸುತ್ತಿನ ಕೌನ್ಸೆಲಿಂಗ್ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಈ ಹಿಂದೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೂ ಹೊಸ ನೋಂದಣಿಗೆ ಅವಕಾಶ ನೀಡಲಾಗಿದೆ.
ಇದುವರೆಗೆ ಯಾವುದೇ ವೈದ್ಯಕೀಯ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಈಗಾಗಲೇ ದಂತ ವೈದ್ಯಕೀಯ ಸೀಟು ಪಡೆದವರು ವೈದ್ಯಕೀಯ ಸೀಟುಗಳಿಗಾಗಿ ಮಾತ್ರ ಭಾಗವಹಿಸಬಹುದು ಎಂದು ಅವರು ಹೇಳಿದ್ದಾರೆ.
ಹೊಸ ನೋಂದಣಿ ನವೆಂಬರ್ 2ರಿಂದ 4ರವರೆಗೆ ನಡೆಯಲಿದೆ. ಮುಂಗಡ ಶುಲ್ಕ ಪಾವತಿಗೆ ನವೆಂಬರ್ 4ರಿಂದ 6ರವರೆಗೆ ಮತ್ತು ಹೊಸ ಆಯ್ಕೆಗಳನ್ನು ದಾಖಲಿಸಲು ನವೆಂಬರ್ 6ರಿಂದ 9ರವರೆಗೆ ಅವಕಾಶವಿದೆ.
ಕೆಇಎ ವಿಶೇಷ ಸ್ಟ್ರೇ ವ್ಯಾಕೆನ್ಸಿ ಸುತ್ತಿನ ವೇಳಾಪಟ್ಟಿ
ಸೀಟು ಹಂಚಿಕೆ ಫಲಿತಾಂಶವನ್ನು ನವೆಂಬರ್ 11ರಂದು ಮಧ್ಯಾಹ್ನ 1 ಗಂಟೆಗೆ ಪ್ರಕಟಿಸಲಾಗುತ್ತದೆ. ಸೀಟು ಪಡೆದ ಅಭ್ಯರ್ಥಿಗಳು ಉಳಿದ ಶುಲ್ಕ ಪಾವತಿಸಿ, ತಮಗೆ ಸೀಟು ಹಂಚಿಕೆಯಾದ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಯನ್ನು ನವೆಂಬರ್ 13ರೊಳಗೆ ಪೂರ್ಣಗೊಳಿಸಬೇಕು.
ವೈದ್ಯಕೀಯ ಸೀಟುಗಳಿಗೆ ₹25 ಲಕ್ಷ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ₹1 ಲಕ್ಷ ಮುಂಗಡ ಶುಲ್ಕವಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ. ಅರ್ಹ ಅಭ್ಯರ್ಥಿಗಳು ಪ್ರಕಟಿತ ಗಡುವಿನೊಳಗೆ ನೋಂದಣಿ, ಶುಲ್ಕ ಪಾವತಿ ಮತ್ತು ಆಯ್ಕೆ ದಾಖಲಿಸುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
