ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಹೀಲಲಿಗೆ–ರಾಜಾನುಕುಂಟೆ ಕನಕ ಮಾರ್ಗದಲ್ಲಿ ನಾಲ್ಕು ರಸ್ತೆ ಮೇಲ್ಸೇತುವೆಗಳು ಹಾಗೂ ಒಂದು ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ಜಿಎಸ್ಟಿ ಹೊರತುಪಡಿಸಿ ಒಟ್ಟು ₹105.66 ಕೋಟಿ ಮೊತ್ತದ ಗುತ್ತಿಗೆಗಳನ್ನು ನೀಡಲಾಗಿದೆ.
ಕಾರಿಡಾರ್-4ರ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳ ಎರಡು ಪ್ಯಾಕೇಜ್ಗಳಿಗೆ ಬೆಂಗಳೂರು ಇಂಟಿಗ್ರೇಟೆಡ್ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸ್ ಲಿಮಿಟೆಡ್ (ಬಿ-ರೈಡ್), ಎಂ/ಎಸ್ ಇಎಸ್ಎಸ್ವಿವೈ–ಎಸ್ಎಲ್ಎನ್ಎಸ್ ಜಂಟಿ ಉದ್ಯಮಕ್ಕೆ ಅಕ್ಟೋಬರ್ 30ರಂದು ಸ್ವೀಕೃತಿ ಪತ್ರಗಳನ್ನು ನೀಡಿದೆ ಎಂದು ಕೆ-ರೈಡ್ ತಿಳಿಸಿದೆ. ಪ್ರತಿ ಪ್ಯಾಕೇಜ್ ಪೂರ್ಣಗೊಳಿಸಲು 18 ತಿಂಗಳ ಅವಧಿ ನಿಗದಿಪಡಿಸಲಾಗಿದೆ.

ಮೊದಲ ಪ್ಯಾಕೇಜ್ನ ಗುತ್ತಿಗೆ ಮೊತ್ತ ಜಿಎಸ್ಟಿ ಹೊರತುಪಡಿಸಿ ₹54.83 ಕೋಟಿ. ಇದರಡಿ ಎರಡು ರಸ್ತೆ ಮೇಲ್ಸೇತುವೆಗಳು ಮತ್ತು ಒಂದು ರಸ್ತೆ ಕೆಳಸೇತುವೆ ನಿರ್ಮಾಣವಾಗಲಿವೆ. ಸರ್ವೀಸ್ ರಸ್ತೆಗಳು ಹಾಗೂ ನೀರು ಹರಿದುಹೋಗುವ ಸೌಲಭ್ಯಗಳೂ ಕಾಮಗಾರಿಯಲ್ಲಿ ಸೇರಿವೆ.
ಎರಡನೇ ಪ್ಯಾಕೇಜ್ಗೆ ಜಿಎಸ್ಟಿ ಹೊರತುಪಡಿಸಿ ₹50.83 ಕೋಟಿ ನಿಗದಿಯಾಗಿದೆ. ಇದರಲ್ಲಿ ಎರಡು ರಸ್ತೆ ಮೇಲ್ಸೇತುವೆಗಳು, ಸರ್ವೀಸ್ ರಸ್ತೆಗಳು ಹಾಗೂ ನೀರು ಹರಿದುಹೋಗುವ ಸೌಲಭ್ಯಗಳು ಸೇರಿವೆ. ಎರಡೂ ಗುತ್ತಿಗೆಗಳನ್ನು ಒಂದೇ ಜಂಟಿ ಉದ್ಯಮಕ್ಕೆ ನೀಡಲಾಗಿದೆ.
ಕಾರಿಡಾರ್-4ರ ಲೆವೆಲ್ ಕ್ರಾಸಿಂಗ್ಗಳನ್ನು ನಿವಾರಿಸುವುದು ಈ ಕಾಮಗಾರಿಗಳ ಉದ್ದೇಶ. ರಸ್ತೆ ಮತ್ತು ರೈಲು ಸಂಚಾರದ ಸುರಕ್ಷತೆ ಸುಧಾರಿಸುವುದು, ವಾಹನ ದಟ್ಟಣೆ ಕಡಿಮೆ ಮಾಡುವುದು ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಕೆ-ರೈಡ್ ತಿಳಿಸಿದೆ.
ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.
