ಸೆಲ್ಫ್ ಎಕ್ಸಿಕ್ಯೂಷನ್ ಯೋಜನೆಗಳಲ್ಲಿ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ: ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು, ಜುಲೈ 24: ಸೆಲ್ಫ್ ಎಕ್ಸಿಕ್ಯೂಷನ್ ಯೋಜನೆಗಳಡಿ ಕಡ್ಡಾಯವಾಗಿ ನಿರ್ಮಿಸಬೇಕಾದ ವಿದ್ಯುತ್ ಮೂಲಸೌಕರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸದ ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್ಸಿ) ನಿಯಮಗಳನ್ನು ಉಲ್ಲಂಘಿಸಿರುವ ಯೋಜನೆಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು, 2006ರ ಜನವರಿ 12ರ ಕೆಇಆರ್ಸಿ ನಿಯಮಾವಳಿಯಂತೆ 7.5 ಎಂವಿಎಗಿಂತ ಹೆಚ್ಚಿನ ಮಂಜೂರಾತಿ ವಿದ್ಯುತ್ ಭಾರ ಹೊಂದಿರುವ ವಸತಿ ಸಮುಚ್ಚಯಗಳು, ಟೌನ್ಶಿಪ್ಗಳು, ಬೃಹತ್ ಲೇಔಟ್ಗಳು ಹಾಗೂ ಇತರ ಅಭಿವೃದ್ಧಿ ಯೋಜನೆಗಳು ತಮ್ಮ ವೆಚ್ಚದಲ್ಲಿಯೇ ವಿದ್ಯುತ್ ಉಪಕೇಂದ್ರ ಮತ್ತು ಸಂಬಂಧಿತ ಮೂಲಸೌಕರ್ಯವನ್ನು ನಿರ್ಮಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಅಗತ್ಯ ವಿದ್ಯುತ್ ಮೂಲಸೌಕರ್ಯವನ್ನು ಯೋಜನೆಗಳ ಜೊತೆಯಲ್ಲೇ ಅಭಿವೃದ್ಧಿಪಡಿಸುವುದು, ಸಾರ್ವಜನಿಕ ವಿದ್ಯುತ್ ಜಾಲದ ಮೇಲಿನ ಒತ್ತಡ ಕಡಿಮೆ ಮಾಡುವುದು ಹಾಗೂ ಖಾಸಗಿ ಯೋಜನೆಗಳಿಗೆ ಸಾರ್ವಜನಿಕ ಹಣ ವೆಚ್ಚವಾಗುವುದನ್ನು ತಪ್ಪಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಈಗಾಗಲೇ ಇಂತಹ 45 ಪ್ರಕರಣಗಳನ್ನು ಗುರುತಿಸಲಾಗಿದ್ದು, ಸಂಬಂಧಿತ ಯೋಜನಾ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಕೆಇಆರ್ಸಿ ನಿಯಮಗಳಂತೆ ಶೇಕಡಾ 10ರಷ್ಟು ದಂಡ ವಿಧಿಸಲಾಗುವುದು. ನಿಗದಿತ ಅವಧಿಯಲ್ಲಿ ಕಡ್ಡಾಯ ಮೂಲಸೌಕರ್ಯ ಪೂರ್ಣಗೊಳಿಸದಿದ್ದರೆ ಹಾಗೂ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ವಿದ್ಯುತ್ ಪ್ರಸರಣ ಸಾಮರ್ಥ್ಯದ ಮೇಲೆ ಒತ್ತಡ ಉಂಟಾದರೆ, ಸಾರ್ವಜನಿಕರಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸಂಬಂಧಿತ ಯೋಜನೆಗಳ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
7.5 ಎಂವಿಎಗಿಂತ ಕಡಿಮೆ ಮಂಜೂರಾತಿ ವಿದ್ಯುತ್ ಭಾರಕ್ಕೆ ಅನುಮತಿ ಪಡೆದು ನಂತರ ಅನುಮೋದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿರುವ ಕೆಲವು ಯೋಜನೆಗಳೂ ಪತ್ತೆಯಾಗಿವೆ. ಅಗತ್ಯ ವಿದ್ಯುತ್ ಮೂಲಸೌಕರ್ಯವನ್ನು ವಿಸ್ತರಿಸದೆ ಹೆಚ್ಚುವರಿ ವಿದ್ಯುತ್ ಬಳಕೆ ಮಾಡುವುದರಿಂದ ಸಾರ್ವಜನಿಕ ವಿದ್ಯುತ್ ಜಾಲದ ಮೇಲೆ ಒತ್ತಡ ಹೆಚ್ಚಾಗಿ ಅಕ್ಕಪಕ್ಕದ ನಿವಾಸಿಗಳು ಹಾಗೂ ಇತರ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ. ಅದರಂತೆ ರಾಜ್ಯಾದ್ಯಂತ ಅನುಮೋದಿತ ವಿದ್ಯುತ್ ಭಾರವನ್ನು ಮೀರಿದರೂ ಅಗತ್ಯ ಮೂಲಸೌಕರ್ಯ ನಿರ್ಮಿಸದ ಯೋಜನೆಗಳನ್ನು ಗುರುತಿಸಿ ಸಮಗ್ರ ವರದಿ ಸಲ್ಲಿಸುವಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರಿಗೆ ಸೂಚನೆ ನೀಡಲಾಗಿದೆ.
ಸಾರ್ವಜನಿಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಖಚಿತಪಡಿಸುವುದು, ಸಾರ್ವಜನಿಕ ವಿದ್ಯುತ್ ಮೂಲಸೌಕರ್ಯದ ಮೇಲಿನ ಅನಗತ್ಯ ಒತ್ತಡ ತಪ್ಪಿಸುವುದು ಹಾಗೂ ಸರ್ಕಾರದ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆ ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಪಾಲನೆಗೆ ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಲಾಗಿದ್ದು, ಇನ್ನೂ ಉಲ್ಲಂಘನೆ ಮುಂದುವರಿದರೆ ಮುಖ್ಯಮಂತ್ರಿಗಳ ನಿರ್ದೇಶನದಂತೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
