ಕರ್ನಾಟಕದ ಎಲ್ಲಾ ಎಸ್ಟಿಪಿ ಘಟಕಗಳ ಸಮೀಕ್ಷೆಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ
ಬೆಂಗಳೂರು: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶುಕ್ರವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಯೋಜನೆಗಳ ಅನುಷ್ಠಾನ, ತ್ಯಾಜ್ಯ ನೀರು ನಿರ್ವಹಣೆ ಹಾಗೂ ಆಡಳಿತಾತ್ಮಕ ಸುಧಾರಣೆ ಕುರಿತು ಹಲವು ನಿರ್ದೇಶನಗಳನ್ನು ನೀಡಿದರು.
ರಾಜ್ಯದ ಎಲ್ಲಾ ಒಳಚರಂಡಿ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್ಟಿಪಿ) ಸಮಗ್ರ ಸಮೀಕ್ಷೆ ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲಾ ಪ್ರದೇಶಗಳಲ್ಲಿ ಚರಂಡಿ ಜಾಲ ಹಾಗೂ ಎಸ್ಟಿಪಿ ಘಟಕಗಳನ್ನು ಸಮರ್ಪಕವಾಗಿ ಮ್ಯಾಪ್ ಮಾಡಿ, ಆಯಾ ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಸುಧಾರಿತ ತಂತ್ರಜ್ಞಾನ ಬಳಸಬೇಕು ಎಂದರು.
ವಿಳಂಬವಾಗಿರುವ ಕಾಮಗಾರಿಗಳನ್ನು ಗುರುತಿಸಿ ಗುತ್ತಿಗೆದಾರರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಬೇಕು. ಸಕಾರಣವಿಲ್ಲದೆ ಅನಗತ್ಯವಾಗಿ ಹಣ ಬಿಡುಗಡೆ ಮಾಡುವುದನ್ನು ತಡೆಯಬೇಕು. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಗೆ ವಿಶ್ವಬ್ಯಾಂಕ್ ಮಾದರಿಯ ನೀತಿ ಚೌಕಟ್ಟು ರೂಪಿಸಬೇಕು ಎಂದು ಸೂಚಿಸಿದರು.
ಸ್ಥಳೀಯ ಸಂಸ್ಥೆಗಳು ಯೋಜನೆಗಳ ನಿರ್ವಹಣೆ ಹಾಗೂ ಬಾಕಿ ಹಣ ಪಾವತಿಯಲ್ಲಿ ವಿಫಲವಾಗುತ್ತಿರುವುದನ್ನು ಉಲ್ಲೇಖಿಸಿದ ಸಚಿವರು, ಮಂಡಳಿಯೇ ಪ್ರತ್ಯೇಕ ಆದಾಯ ತರುವ ನೀತಿ ರೂಪಿಸಬೇಕು ಎಂದು ಹೇಳಿದರು.
ನೀರು ಪೋಲಾಗುವುದು ಹಾಗೂ ದುರುಪಯೋಗ ತಡೆಯಲು ಸ್ಮಾರ್ಟ್ ಮೀಟರ್ಗಳನ್ನು ಆರಂಭದಲ್ಲಿ ಪೈಲಟ್ ಯೋಜನೆಯಾಗಿ ಅಳವಡಿಸಿ, ಮಂಡಳಿಯೇ ನಿರ್ವಹಿಸುವ ಮಾದರಿಯನ್ನು ಪರಿಶೀಲಿಸುವಂತೆ ಸೂಚಿಸಿದರು.
ಯೋಜನಾ ವರದಿ ಸಿದ್ಧಪಡಿಸುವಾಗ ಹಾಗೂ ಎಸ್ಟಿಪಿ ನಿರ್ಮಾಣಕ್ಕೆ ಜಾಗ ಕಾಯ್ದಿರಿಸುವಾಗ ಸ್ಥಳೀಯ ಸಂಸ್ಥೆಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಮಾಲೋಚನೆ ನಡೆಸಬೇಕು. ಜಾಗ ಅಂತಿಮಗೊಂಡ ಬಳಿಕ ಪದೇ ಪದೇ ಬದಲಾವಣೆ ಮಾಡಬಾರದು ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಯನ್ನು ಹೊರತುಪಡಿಸಿ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಮಂಡಳಿಯದ್ದಾಗಿದೆ. ಇದುವರೆಗೆ 256 ನಗರ ಪ್ರದೇಶಗಳಿಗೆ ಶಾಶ್ವತ ಮೇಲ್ಮೈ ಮೂಲಗಳಿಂದ ಸುರಕ್ಷಿತ ಕುಡಿಯುವ ನೀರು ಒದಗಿಸಲಾಗಿದ್ದು, ಉಳಿದ 60 ಪಟ್ಟಣಗಳಿಗೆ ಅಂತರ್ಜಲ ಮೂಲಗಳಿಂದ ನೀರು ಪೂರೈಸಲಾಗುತ್ತಿದೆ.
ಮಾರ್ಚ್ 2026ರವರೆಗೆ ಮಂಡಳಿಯು 649 ನೀರು ಸರಬರಾಜು ಯೋಜನೆಗಳು ಹಾಗೂ 181 ಯುಜಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಒಟ್ಟು ₹16,887.84 ಕೋಟಿ ವೆಚ್ಚದಲ್ಲಿ ₹11,531.91 ಕೋಟಿ ಕುಡಿಯುವ ನೀರು ಯೋಜನೆಗಳಿಗೆ ಹಾಗೂ ₹5,355.93 ಕೋಟಿ ಒಳಚರಂಡಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ.
2026-27ನೇ ಸಾಲಿನ ರಾಜ್ಯ ಯೋಜನೆಯಡಿ ₹700 ಕೋಟಿ ಅನುದಾನ ಮೀಸಲಿಡಲಾಗಿದೆ. ಕಲಬುರಗಿಯಲ್ಲಿ ₹1,863 ಕೋಟಿ ವೆಚ್ಚದ 24×7 ಕುಡಿಯುವ ನೀರು ಯೋಜನೆಯ ಡಿಪಿಆರ್ಗೆ ತಾತ್ವಿಕ ಅನುಮೋದನೆ ದೊರೆತಿದೆ. ಮೈಸೂರಿಗೆ ಕಾವೇರಿ (ಉಂಡವಾಡಿ) ಮೂಲದಿಂದ ₹595 ಕೋಟಿ ಅಂದಾಜು ವೆಚ್ಚದ ಸಗಟು ನೀರು ಸರಬರಾಜು ಯೋಜನೆ ಸೇರಿದಂತೆ ಹಲವು ಬೃಹತ್ ಕಾಮಗಾರಿಗಳು ಪ್ರಗತಿಯಲ್ಲಿವೆ.
ಅಮೃತ್ 2.0 ಯೋಜನೆಯಡಿ ₹9,590 ಕೋಟಿ ಮೊತ್ತದ 227 ನೀರು ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 215 ಯೋಜನೆಗಳಿಗೆ ಗುತ್ತಿಗೆ ನೀಡಲಾಗಿದ್ದು ಕಾಮಗಾರಿಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ.
ಸಭೆಯಲ್ಲಿ ಮಂಡಳಿಯ ಅಧ್ಯಕ್ಷೆ ಶಿವಲೀಲಾ ವಿನಯ್ ಕುಲಕರ್ಣಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
