ತಡರಾತ್ರಿವರೆಗೆ ನಗರ ಸುತ್ತಿದ ಸಚಿವ ಕೃಷ್ಣ ಬೈರೇಗೌಡ; ಪಾದಚಾರಿ ಮಾರ್ಗ ಒತ್ತುವರಿ, ರಸ್ತೆ ಮರುಸ್ಥಾಪನೆ ವಿಳಂಬಕ್ಕೆ ಅಧಿಕಾರಿಗಳಿಗೆ ಕ್ಲಾಸ್
ಬೆಂಗಳೂರು, ಜುಲೈ 3: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ತಡರಾತ್ರಿವರೆಗೂ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ, ರಸ್ತೆ ಮರುಸ್ಥಾಪನೆ ಹಾಗೂ ಚರಂಡಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಲಾಖೆಗಳಿಂದ ಸಮನ್ವಯದ ಕೊರತೆ ಹಾಗೂ ರಸ್ತೆಗಳನ್ನು ಸಮಯಕ್ಕೆ ಸರಿಯಾಗಿ ಮರುಸ್ಥಾಪಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ಹೊರ ವರ್ತುಲ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪರಿಶೀಲಿಸಿದ ಸಚಿವರು, ರಸ್ತೆ ಅಗೆದು ಬಿಟ್ಟಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಆದರೆ ಯಾವ ಇಲಾಖೆ ಕಾಮಗಾರಿ ನಡೆಸಿದೆ ಎಂಬ ಪ್ರಶ್ನೆಗೆ ಬಿಡಬ್ಲ್ಯುಎಸ್ಎಸ್ಬಿ, ಕೆಪಿಟಿಸಿಎಲ್, ಬೆಸ್ಕಾಂ ಹಾಗೂ ಒಎಫ್ಸಿ ಕೇಬಲ್ ಸಂಸ್ಥೆಗಳ ಹೆಸರುಗಳನ್ನು ಅಧಿಕಾರಿಗಳು ಪರಸ್ಪರ ಉಲ್ಲೇಖಿಸುತ್ತಿರುವುದನ್ನು ಕಂಡು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಇಲಾಖೆ ಮತ್ತೊಂದು ಇಲಾಖೆಯ ಮೇಲೆ ಹೊಣೆ ಹಾಕುತ್ತಿರುವುದನ್ನು ಪ್ರಶ್ನಿಸಿದ ಅವರು, “ಯಾವ ಇಲಾಖೆ ಅನುಮತಿ ನೀಡಿದೆ? ರಸ್ತೆ ಮರುಸ್ಥಾಪನೆ ಯಾಕೆ ಆಗಿಲ್ಲ? ಪರಿಶೀಲಿಸಿ ಸ್ಪಷ್ಟ ಉತ್ತರ ನೀಡಬೇಕಲ್ಲವೇ?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಾದಚಾರಿ ಮಾರ್ಗ ಒತ್ತುವರಿ ತೆರವು ಅಭಿಯಾನ ಕುರಿತು ಮಾತನಾಡಿದ ಸಚಿವರು, ಸರ್ಕಾರದ ಉದ್ದೇಶ ಬೀದಿ ವ್ಯಾಪಾರಿಗಳ ಜೀವನೋಪಾಯ ಕಸಿದುಕೊಳ್ಳುವುದು ಅಲ್ಲ ಎಂದು ಸ್ಪಷ್ಟಪಡಿಸಿದರು.
“ನಾವು ಬೀದಿ ವ್ಯಾಪಾರ ಮಾಡಬೇಡಿ ಎಂದು ಹೇಳಿಲ್ಲ. ಮುಖ್ಯ ರಸ್ತೆಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಡಿ ಎಂದಿದ್ದೇವೆ. ಪಕ್ಕದ ರಸ್ತೆಗಳಲ್ಲಿ ವ್ಯಾಪಾರ ನಡೆಸಬಹುದು. ಮುಖ್ಯ ರಸ್ತೆಯಲ್ಲೇ ವ್ಯಾಪಾರ ಮಾಡುವುದು ಮೂಲಭೂತ ಹಕ್ಕಲ್ಲ. ಸಾರ್ವಜನಿಕರಿಗೆ ಸುರಕ್ಷಿತವಾಗಿ ಓಡಾಡಲು ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ,” ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಪ್ರತಿವರ್ಷ ಸುಮಾರು 300 ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಉಲ್ಲೇಖಿಸಿದ ಸಚಿವರು, ಇದಕ್ಕೆ ಪ್ರಮುಖ ಕಾರಣ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ಎಂದು ಹೇಳಿದರು.
“ಫುಟ್ಪಾತ್ನಲ್ಲಿ ನಡೆಯಲು ಜಾಗ ಇಲ್ಲದ ಕಾರಣ ಜನರು ರಸ್ತೆಗೆ ಇಳಿಯಬೇಕಾಗುತ್ತದೆ. ಆಗ ವಾಹನ ಡಿಕ್ಕಿಯಾಗಿ ಸಾವನ್ನಪ್ಪುವ ಘಟನೆಗಳು ನಡೆಯುತ್ತಿವೆ. ವರ್ಷಕ್ಕೆ ಸುಮಾರು 300 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ ಕುಟುಂಬದವರಲ್ಲಿ ಯಾರಾದರೂ ಹೀಗೆ ಸಾವನ್ನಪ್ಪಿದರೆ ನೀವು ಏನು ಉತ್ತರ ಕೊಡುತ್ತೀರಿ?” ಎಂದು ಪ್ರಶ್ನಿಸಿದರು.
ಫುಟ್ಪಾತ್ಗಳು ಪಾದಚಾರಿಗಳಿಗಾಗಿ ನಿರ್ಮಿಸಲ್ಪಟ್ಟಿದ್ದು, ಯಾವುದೇ ಕಾರಣಕ್ಕೂ ಅವುಗಳ ಮೇಲೆ ಶಾಶ್ವತ ಅಥವಾ ತಾತ್ಕಾಲಿಕ ಅತಿಕ್ರಮಣ ಇರಬಾರದು ಎಂದು ಸಚಿವರು ತಿಳಿಸಿದರು.
ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ರಸ್ತೆ, ರಾಜಕಾಲುವೆ, ಚರಂಡಿ ಹಾಗೂ ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವಂತೆ ನಿರ್ದೇಶನ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಸಂಪೂರ್ಣ ಒತ್ತುವರಿರಹಿತಗೊಳಿಸುವ ವಿಶೇಷ ಅಭಿಯಾನ ಮುಂದುವರಿಯಲಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.