ಬೆಂಗಳೂರು, ಜುಲೈ 2: ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಅಡಿಯಲ್ಲಿ ಸೀಟು ಕೋರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಒಳಮೀಸಲಾತಿ ನಮೂದಿತ ಜಾತಿ ಪ್ರಮಾಣಪತ್ರಗಳನ್ನು ತ್ವರಿತವಾಗಿ ವಿತರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಂದಾಯ ಇಲಾಖೆಯನ್ನು ಕೋರಿದೆ.
ಈ ಸಂಬಂಧ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಪತ್ರ ಬರೆದು, ಅರ್ಹ ಅಭ್ಯರ್ಥಿಗಳಿಗೆ ವಿಳಂಬವಾಗದಂತೆ ಪ್ರಮಾಣಪತ್ರಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ತಿಳಿಸಿರುವಂತೆ, ಪರಿಶಿಷ್ಟ ಜಾತಿಯ ಒಳಮೀಸಲಾತಿ ಅಡಿಯಲ್ಲಿ ಸೀಟು ಕೋರುವ ಅಭ್ಯರ್ಥಿಗಳು ಒಳಮೀಸಲಾತಿ ನಮೂದಿತ ಜಾತಿ ಪ್ರಮಾಣಪತ್ರವನ್ನು ಆರ್ಡಿ (RD) ಸಂಖ್ಯೆಯೊಂದಿಗೆ ಜುಲೈ 8ರೊಳಗೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿ, ಪರಿಶೀಲನಾ (Verification) ಸ್ಲಿಪ್ ಡೌನ್ಲೋಡ್ ಮಾಡಿಕೊಂಡ ಬಳಿಕವೇ ಆಯ್ಕೆ (Option Entry) ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿದೆ.
ಆದರೆ, ಅಗತ್ಯ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬವಾಗುತ್ತಿರುವುದಾಗಿ ಅನೇಕ ಅಭ್ಯರ್ಥಿಗಳು ಕೆಇಎ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮಾಣಪತ್ರಗಳ ವಿತರಣೆಗೆ ವೇಗ ನೀಡಿದರೆ ಮೊದಲ ಹಂತದ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸುಗಮವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಅನುಕೂಲವಾಗುತ್ತದೆ ಎಂದು ಕೆಇಎ ತಿಳಿಸಿದೆ.
ಒಳಮೀಸಲಾತಿ ನಮೂದಿತ ಜಾತಿ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರ ತಹಶೀಲ್ದಾರ್ಗಳಿಗೆ ಇರುವುದರಿಂದ, ಇಂತಹ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಿ ತ್ವರಿತವಾಗಿ ಪ್ರಮಾಣಪತ್ರಗಳನ್ನು ವಿತರಿಸುವಂತೆ ಕಂದಾಯ ಇಲಾಖೆ ನಿರ್ದೇಶನ ನೀಡಬೇಕೆಂದು ಕೆಇಎ ಮನವಿ ಮಾಡಿದೆ.
ಈ ಪತ್ರದ ಪ್ರತಿಯನ್ನು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೂ ರವಾನಿಸಲಾಗಿದ್ದು, ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಒಳಮೀಸಲಾತಿ ಪ್ರಮಾಣಪತ್ರಗಳನ್ನು ಶೀಘ್ರದಲ್ಲಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.