Home ರಾಜಕೀಯ ಆಸಕ್ತರನ್ನು ಕೃಷಿ ಕ್ಷೇತ್ರದತ್ತ ಸೆಳೆಯಲು ಕ್ರಮ: ಸಚಿವ ಅಶೋಕ್

ಆಸಕ್ತರನ್ನು ಕೃಷಿ ಕ್ಷೇತ್ರದತ್ತ ಸೆಳೆಯಲು ಕ್ರಮ: ಸಚಿವ ಅಶೋಕ್

23
0
Karnataka Revenue Minister R Ashoka

ಬೆಂಗಳೂರು:

ಕೃಷಿಯಲ್ಲಿ ಆಸಕ್ತಿ ಉಳ್ಳ ಯುವ ಸಮುದಾಯವನ್ನು ಕೃಷಿ ಕ್ಷೇತ್ರದತ್ತ ಸೆಳೆದು ಕೃಷಿ ವಲಯವನ್ನು ಸುಧಾರಣೆ ಮಾಡುವುದು ಸರ್ಕಾರದ ಪ್ರಧಾನ ಆದ್ಯತೆಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮೇಲಿನ ಚರ್ಚೆ ನಂತರ ಉತ್ತರ ನೀಡಿದ ಅವರು, ಭೂ ಸುಧಾರಣಾ ಕಾನೂನಿನಲ್ಲಿ ಒಂದಿಷ್ಟು ಬದಲಾವಣೆ ಮಾಡಿದ್ದು, ಇದರಿಂದ ದೊಡ್ಡ ವ್ಯತ್ಯಾಸವೇನು ಆಗುವುದಿಲ್ಲ. ಕೃಷಿ ಕ್ಷೇತ್ರದ ಪ್ರಗತಿಗಾಗಿ ನಾವು ಶ್ರಮಿಸುತ್ತೇವೆ. ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೂ ಸಹ ಆದ್ಯತೆ ಕೊಟ್ಟಿದ್ದು, ಹಾಗೆಂದು ಎಲ್ಲಾ ಭೂಮಿ ಕೈಗಾರಿಕೊದ್ಯಮಿಗಳ ಪಾಲಾಗುವುದಿಲ್ಲ. 79 ಎ ಮತ್ತು ಬಿ ತಿದ್ದುಪಡಿ ವಿಚಾರ ವಿಧಾನಸಭೆಯಲ್ಲಿ ಚರ್ಚೆ ಆಗಿದೆ. 18 ವರ್ಷ ಹಿಂದೆಯೇ ಈ ಬಗ್ಗೆ ಚರ್ಚೆ ನಡೆದಿದೆ. ಇದು ಇಂದು ಆಗುತ್ತಿರುವ ಹೊಸ ವಿಚಾರ ಅಲ್ಲ ಎಂದರು.

1957ರಲ್ಲಿ ಬಿ.ಡಿ. ಜತ್ತಿ ಅವರ ಕಾಲಾವಧಿಯಲ್ಲಿ, ಅವರ ನೇತೃತ್ವದಲ್ಲಿ 22 ಸದಸ್ಯರ ಸಮಿತಿ ರಚಿಸಿ ಈ ಒಂದು ಕಾಯ್ದೆ ಜಾರಿಗೆ ತರಲು ಮುಂದಾಯಿತು. 10 ಜನ‌ಸದಸ್ಯರಿದ್ದರೆ 432 ಎಕರೆ ಒಣ ಭೂಮಿ‌ಕೊಳ್ಳುವ ಅಧಿಕಾರ ಇದೆ ಎನ್ನಲಾಗಿತ್ತು. ಅಂದಿನ ಸ್ಥಿತಿಗೆ ಆ ಬದಲಾವಣೆ ಆಗಿತ್ತು. ಕಾಯ್ದೆ ಬಂದ ಮೇಲೆ ದೇವರಾಜ್ ಅರಸು 1972 ರಲ್ಲಿ ಬದಲಾವಣೆ ತರಲಾಯಿತು. 1979 ರಲ್ಲಿ, 1995 ರಲ್ಲಿ ಬದಲಾಯಿತು. 2010 ರಲ್ಲಿ ಮತ್ತೆ ಬದಲಾಯಿತು. ಎಲ್ಲಾ ಸಂದರ್ಭದಲ್ಲೂ ಆದಾಯ ಮಿತಿ ಹೆಚ್ಚಿಸಿ 25 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇಷ್ಟು ವರ್ಷದಲ್ಲಿ ಒಟ್ಟಾರೆ 84 ಸಾವಿರ ಪ್ರಕರಣ ದಾಖಲಾಗಿದೆ ಎಂದು ವಿವರ ನೀಡಿದರು.

Screenshot 914

ಕಾಯ್ದೆ ಜಾರಿಗೆ ಬಂದು 40 ವರ್ಷ ಆಗಿದೆ. ಆದರೆ ಇದರ ಅಡಿ 3-4 ಎಕರೆ ಕೂಡ ಮಾರಾಟ ಆಗಿಲ್ಲ. 190.5 ಲಕ್ಷ ಹೆಕ್ಟೇರ್ ಭೂಮಿ ಇದೆ. 22 ಲಕ್ಷ ಹೆಕ್ಟೇರ್ ಬೀಳು ಬಿಟ್ಟ ಭೂಮಿ, 11 ಲಕ್ಷ ಹೆಕ್ಟೇರ್ ಭೂಮಿ ಕೃಷಿಯೋಗ್ಯ ಭೂಮಿ ಪಾಳು ಬಿಡಲಾಗಿದೆ. 30 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ ಇದೆ. ಇವೆಲ್ಲಾ ಹಸನಾಗಿಸಲು ನಾವು ಯತ್ನಿಸುತ್ತಿದ್ದೇವೆ ಎಂದರು.

ರಫ್ತು ಕ್ಷೇತ್ರದಲ್ಲಿ 9 ನೇ ಸ್ಥಾನದಲ್ಲಿದೆ. ಗುಜರಾತ್ ರಾಜ್ಯ ದೇಶದಲ್ಲೇ ಶೇ.18.8 ರಷ್ಟು ರಫ್ತು ಮಾಡುತ್ತಿದೆ. ರಾಜ್ಯದ ಪಾಲು ಶೇ.5.7 ರಷ್ಟು ಮಾತ್ರ. ನಮ್ಮ ರಾಜ್ಯದವರೂ ರಫ್ತಿನಲ್ಲಿ ಉತ್ತಮ ಸ್ಥಾನ ಹೊಂದಲು ಸಾಧ್ಯ. ಕೈಗಾರಿಕೆಗಳು ಲೂಟಿ ಮಾಡಲಿವೆ ಎಂದು ಸಾಕಷ್ಟು ಜನ ಹೇಳಿದ್ದಾರೆ. ಕೈಗಾರಿಕಾ ಪ್ರಗತಿ, ಉದ್ಯೋಗ ಸೃಷ್ಟಿ ದೃಷ್ಟಿಯಿಂದ ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಮಧ್ಯ ಪ್ರವೇಶಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, 86 ಸಾವಿರ ಎಕರೆ ಭೂಮಿ ಮಾತ್ರ ಕೆಐಎಡಿಬಿ ಅಡಿ ನೀಡಲಾಗಿದೆ. ಒಟ್ಟು 1 ಲಕ್ಷ 56 ಸಾವಿರ ಎಕರೆ ಮಾತ್ರ ಮಾರಾಟ ಆಗಿದೆ. ಇದು ಶೇ.1 ರಷ್ಟೂ ಅಲ್ಲ. ಇದರಿಂದ ಕೈಗಾರಿಕೆಗಳು ಬಂದು‌ ಲೂಟಿ ಮಾಡುವ ಕಾರ್ಯ ಮಾಡಲ್ಲ. ಉಳುವವನೇ ಒಡೆಯ ಆಶಯ ಹೊಂದಿದ್ದ ದೇವರಾಜ್ ಅರಸು ಕನಸು ನನಸಾಗಿಸುವ ಯತ್ನ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಸಚಿವ ಆರ್. ಅಶೋಕ್ ಮಾತನಾಡಿ, 18 ವರ್ಷ ಹಿಂದೆ ಸಾಕಷ್ಟು ಸದಸ್ಯರು ಇದೇ ಕಾಯ್ದೆ ಬಗ್ಗೆ ಚರ್ಚಿಸಿದ್ದಾರೆ. ದೇಶಪಾಂಡೆ ಅವರೇ ಅಂದು 79 ಎ ಮತ್ತು ಬಿ ತೆಗೆದು ಹಾಕಬೇಕು ಎಂದಿದ್ದರು. ಅಲ್ಲದೇ ರೈತ ನಾಯಕ ನಂಜುಂಡಸ್ವಾಮಿ ಅವರೇ 79 ನೇ ವಿಧಿ ತೆಗೆದು ಹಾಕಲು ಒತ್ತಾಯಿಸಿದ್ದರು. ನಿರಂತರವಾಗಿ ಅಂದು ಸದಸ್ಯರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸದನಕ್ಕೆ ವಿವರಿಸಿದಾಗ ಪ್ರತಿಪಕ್ಷ ಸದಸ್ಯರು ಈಗಿನ ಸರ್ಕಾರದ ಅಭಿಪ್ರಾಯ, ನಿರ್ಧಾರ ತಿಳಿಸಿ. ನಾವು ಅದನ್ನು ಕೇಳಲು ಕಾದಿದ್ದೇವೆ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಭೂಮಿ ಕೊಂಡವರು ನಷ್ಟವಾದರೆ 15 ವರ್ಷ ನಂತರ ಬೇರೆ ಉದ್ದೇಶಕ್ಕೆ ಮಾರಬಹುದು ಎಂಬ ನಿಯಮಕ್ಕೆ ಬದಲಾವಣೆ ತಂದು ನಾವು ಕೃಷಿ ಭೂಮಿಯನ್ನು ಕೃಷಿಗೆ ಬಳಸುವವರಿಗೇ ಮಾತ್ರ ಮಾರಬೇಕು ಎಂಬ ನಿಯಮ ತಂದಿದ್ದೇವೆ. ಕೃಷಿ ಇರುವ ಕಡೆಯೇ ಕೃಷಿ ಆಧಾರಿತ ಕೈಗಾರಿಕೆ ಬಂದರೆ ಸಾಗಾಣಿಕೆ ವೆಚ್ಚ ಉಳಿಯಲಿದೆ. ಅಲ್ಲದೇ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಆಗಲಿದೆ. ಇದು ನಮ್ಮ ಆಶಯ. ಕೃಷಿಯಲ್ಲಿ ಆಧುನಿಕತೆ ಬರಬೇಕು. ಅಕ್ಕಪಕ್ಕದ ರಾಜ್ಯಗಳು ನಮಗಿಂತ ಮುಂದಿವೆ. ಆಧುನಿಕ ತಂತ್ರಜ್ಞಾನ ಹಳ್ಳಿಗೆ ಬರಲು ವಿದ್ಯಾವಂತ ಯುವಕರು ಹಳ್ಳಿಗಳತ್ತ ವಾಪಾಸಾಗಬೇಕು. ರಾಜ್ಯದ ಉದ್ಯಮಿಗಳು ಭೂಮಿ ಸಿಗದೇ ಪಕ್ಕದ ರಾಜ್ಯಕ್ಕೆ ತೆರಳುವ ಅನಿವಾರ್ಯ ತೆರವು ಮಾಡಿದ್ದೇವೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಭೂಮಿ ವಿಚಾರ ಹಿಂದಿನಂತೇ ಇರಲಿದೆ. ಅದನ್ನು ಮುಟ್ಟಿಲ್ಲ. ಹಾಗೆಯೇ ಉಳಿದಿದೆ. ನದಿ ಪಾತ್ರದ ಜಮೀನನ್ನು ಕೊಂಡವರು ಬೇರೆ ಕಾರ್ಯಕ್ಕೆ ಬಳಸುವಂತಿಲ್ಲ. ಸದುದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ. ಇಲ್ಲಿ ಮುಚ್ಚಿಡುವ ಅಜೆಂಡಾ ಯಾವುದೂ ಇಲ್ಲ. ಸರ್ಕಾರಿ ಜಮೀನು ಬಿಟ್ಟುಕೊಡುವುದಿಲ್ಲ. ಚಾಲ್ತಿಯಲ್ಲಿರುವ ಕೇಸ್ ಗಳನ್ನು ವಾಪಸ್ ಪಡೆಯುತ್ತೇವೆ. ಪ್ರಭಾವಿಗಳು ಆಗಲೇ ಪ್ರಕರಣ ವಾಪಸ್ ಪಡೆದಿದ್ದಾರೆ. ಇದರಿಂದ ಪ್ರತಿಪಕ್ಷ ನಾಯಕರು, ಸದಸ್ಯರು ಬಿಲ್ ಅನುಮೋದಿಸಬೇಕೆಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here