ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ; ಲಾರಿ, ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಸಿದ ಸಾವಿರಾರು ಪ್ರಯಾಣಿಕರು
ಬೆಂಗಳೂರು, ಜೂನ್ 23: ನೇರಳೆ ಮಾರ್ಗದಲ್ಲಿ (Purple Line) ಸಂಭವಿಸಿದ ತಾಂತ್ರಿಕ ದೋಷದಿಂದ ಮೆಟ್ರೋ ಸಂಚಾರ ಸ್ಥಗಿತಗೊಂಡ ಪರಿಣಾಮ ಸಾವಿರಾರು ಪ್ರಯಾಣಿಕರು ಭಾರೀ ಸಂಕಷ್ಟ ಅನುಭವಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಮೆಟ್ರೋ ಸೇವೆ ಸ್ಥಗಿತಗೊಂಡ ಹಿನ್ನೆಲೆ ಹಲವರು ಲಾರಿ, ಗೂಡ್ಸ್ ವಾಹನ, ಬಸ್ ಹಾಗೂ ಆಟೋಗಳಲ್ಲಿ ಪ್ರಯಾಣಿಸಿ ತಮ್ಮ ಗಮ್ಯಸ್ಥಾನ ತಲುಪುವ ಪರಿಸ್ಥಿತಿ ಎದುರಾಯಿತು.
ಪೀಕ್ ಅವರ್ಸ್ನಲ್ಲಿ ತಾಂತ್ರಿಕ ದೋಷ
ಸಂಜೆ ಸುಮಾರು 6.30 ಗಂಟೆ ವೇಳೆಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಚೇರಿಗಳಿಂದ ಮನೆಗೆ ತೆರಳುವ ಪೀಕ್ ಅವರ್ಸ್ ಸಮಯದಲ್ಲೇ ಸಮಸ್ಯೆ ಎದುರಾದ ಕಾರಣ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಮೆಟ್ರೋ ಸೇವೆ ಸ್ಥಗಿತಗೊಂಡ ಬಳಿಕ ನಿಲ್ದಾಣಗಳಿಂದ ಹೊರಬಂದ ಪ್ರಯಾಣಿಕರು ರಸ್ತೆ ಬದಿಯಲ್ಲಿ ಸಿಕ್ಕ ವಾಹನಗಳಲ್ಲಿ ಪ್ರಯಾಣಿಸುವ ದೃಶ್ಯಗಳು ಕಂಡುಬಂದವು. ಕೆಲವರು ಗೂಡ್ಸ್ ವಾಹನಗಳು ಹಾಗೂ ಲಾರಿಗಳಲ್ಲಿಯೇ ಪ್ರಯಾಣಿಸಿ ಮನೆ ತಲುಪಿದರು.
ರೈಲಿನೊಳಗೆ ಸಿಲುಕಿದ್ದ ಪ್ರಯಾಣಿಕರು
ತಾಂತ್ರಿಕ ದೋಷದಿಂದಾಗಿ ಕೆಲ ಪ್ರಯಾಣಿಕರು ಸುಮಾರು 30 ನಿಮಿಷಗಳ ಕಾಲ ಮೆಟ್ರೋ ರೈಲಿನೊಳಗೆ ಸಿಲುಕಿಕೊಂಡಿದ್ದರು ಎಂದು ವರದಿಯಾಗಿದೆ.
ರೈಲು ಚಲಿಸದೇ ನಿಂತಿದ್ದರೆ, ಬಾಗಿಲುಗಳು ಕೂಡ ತೆರೆಯದೇ ಇದ್ದವು. ಬಳಿಕ ಲೋಕೋಪೈಲಟ್ ಬಾಗಿಲುಗಳನ್ನು ತೆರೆಯುವ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.
ಐದು ಪ್ರಮುಖ ನಿಲ್ದಾಣಗಳ ಮೇಲೆ ಪರಿಣಾಮ
ಕಬ್ಬನ್ ಪಾರ್ಕ್ ನಿಲ್ದಾಣದ ಬಳಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ (ವಿಧಾನಸೌಧ), ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಮೆಜೆಸ್ಟಿಕ್ ಭಾಗದ ಮೆಟ್ರೋ ಸಂಚಾರದ ಮೇಲೆ ಪರಿಣಾಮ ಬೀರಿತು.
ಇನ್ನೊಂದೆಡೆ ಎಂಜಿ ರಸ್ತೆಯಿಂದ ವೈಟ್ಫೀಲ್ಡ್ (ಕಾಡುಗೋಡಿ) ಹಾಗೂ ಮೆಜೆಸ್ಟಿಕ್ನಿಂದ ಚಲ್ಲಘಟ್ಟ ಮಾರ್ಗಗಳಲ್ಲಿ ಭಾಗಶಃ ಸಂಚಾರ ಮುಂದುವರಿದಿತ್ತು.
ತಾಂತ್ರಿಕ ದೋಷ ಸರಿಪಡಿಸುವ ಕಾಮಗಾರಿ ನಡೆಯುತ್ತಿದ್ದ ಕಾರಣ ಕೆಲವು ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ಭಾಗಶಃ ಮುಚ್ಚಲಾಗಿತ್ತು. ತಾಂತ್ರಿಕ ಸಿಬ್ಬಂದಿ ಹಾಗೂ ನಿರ್ವಹಣಾ ಸಿಬ್ಬಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು.
ಟಿಕೆಟ್ ಪಡೆದ ಪ್ರಯಾಣಿಕರಲ್ಲಿ ಗೊಂದಲ
ಟಿಕೆಟ್ ಖರೀದಿಸಿದ್ದ ಪ್ರಯಾಣಿಕರಿಗೆ ಮರುಪಾವತಿ (Refund) ಸಿಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಈ ಕುರಿತು ಬಿಎಂಆರ್ಸಿಎಲ್ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಲ್ಲಿದ್ದರು.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಬಿಎಂಆರ್ಸಿಎಲ್, ಮೊದಲಿಗೆ ರೈಲಿನೊಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದು ನಂತರ ದುರಸ್ತಿ ಕಾರ್ಯವನ್ನು ಮುಂದುವರಿಸಿತು.
ರಾತ್ರಿ ಪೂರ್ತಿ ದುರಸ್ತಿ ಕಾರ್ಯ
ತಾಂತ್ರಿಕ ದೋಷ ಸರಿಪಡಿಸಲು ಬಿಎಂಆರ್ಸಿಎಲ್ ಸಿಬ್ಬಂದಿ ಹಾಗೂ ಎಲೆಕ್ಟ್ರಿಕಲ್ ತಜ್ಞರು ರಾತ್ರಿ ಪೂರ್ತಿ ಕಾರ್ಯನಿರ್ವಹಿಸಿದರು. ನಿರಂತರವಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಆಹಾರ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮೆಟ್ರೋ ಸಂಚಾರ ಯಾವಾಗ ಸಂಪೂರ್ಣವಾಗಿ ಪುನರಾರಂಭವಾಗಲಿದೆ ಹಾಗೂ ಮಂಗಳವಾರ ಬೆಳಗ್ಗೆ ಸೇವೆ ಯಥಾಸ್ಥಿತಿಗೆ ಮರಳುತ್ತದೆಯೇ ಎಂಬ ಬಗ್ಗೆ ಪ್ರಯಾಣಿಕರು ಕಾದು ನೋಡುತ್ತಿದ್ದರು.
ಈ ಘಟನೆ ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಮೆಟ್ರೋ ಸೇವೆಯ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.