ನಾಗರಿಕರ ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ: ‘ನಾಗರಿಕ ಸಹಾಯ ಕೇಂದ್ರ’ ಸ್ಥಾಪನೆಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಚಿಂತನೆ
ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು ತಮ್ಮ ಸಮಸ್ಯೆಗಳು, ಅರ್ಜಿಗಳು ಹಾಗೂ ದೂರುಗಳಿಗಾಗಿ ವಿವಿಧ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಒಂದೇ ಸ್ಥಳದಲ್ಲಿ ಅವುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ರವಾನಿಸುವುದರ ಜೊತೆಗೆ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವವರೆಗೆ ನಿರಂತರ ಮೇಲ್ವಿಚಾರಣೆ ನಡೆಸುವ ತಂತ್ರಜ್ಞಾನ ಆಧಾರಿತ ‘ನಾಗರಿಕ ಸಹಾಯ ಕೇಂದ್ರ’ ಸ್ಥಾಪಿಸುವ ಕುರಿತು ಪಾಲಿಕೆ ಚಿಂತನೆ ನಡೆಸಿದೆ ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಮಹದೇವಪುರ ವಲಯ ಕಚೇರಿಯಲ್ಲಿ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆ ಕುರಿತು ವಿಸ್ತೃತ ಚರ್ಚೆ ನಡೆಯಿತು. ನಾಗರಿಕರಿಗೆ ಸರಳ, ವೇಗದ, ಪಾರದರ್ಶಕ ಹಾಗೂ ಜವಾಬ್ದಾರಿಯುತ ಸಾರ್ವಜನಿಕ ಸೇವೆ ಒದಗಿಸುವ ಉದ್ದೇಶದಿಂದ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ರೂಪಿಸುವ ಕುರಿತು ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಲಾಯಿತು.
ಪ್ರಸ್ತಾವಿತ ವ್ಯವಸ್ಥೆಯಡಿ ಆಸ್ತಿ ತೆರಿಗೆ, ನಗರ ಯೋಜನೆ, ರಸ್ತೆ ಮತ್ತು ಮೂಲಸೌಕರ್ಯ, ಘನ ತ್ಯಾಜ್ಯ ನಿರ್ವಹಣೆ, ಆರೋಗ್ಯ, ತೋಟಗಾರಿಕೆ, ವಿದ್ಯುತ್, ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್), ಮಳೆನೀರು ಕಾಲುವೆ ಸೇರಿದಂತೆ ಪಾಲಿಕೆಯ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಅರ್ಜಿಗಳು, ಮನವಿಗಳು ಹಾಗೂ ದೂರುಗಳನ್ನು ಒಂದೇ ಸ್ಥಳದಲ್ಲಿ ಸ್ವೀಕರಿಸಲು ಉದ್ದೇಶಿಸಲಾಗಿದೆ.
ನಾಗರಿಕರು ಸಹಾಯ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸುವುದರ ಜೊತೆಗೆ ಅಂಚೆ, ಇ-ಮೇಲ್, ದೂರವಾಣಿ, ವಾಟ್ಸ್ಆಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಲ್ಲಿಸುವ ದೂರುಗಳನ್ನೂ ದಾಖಲಿಸಿಕೊಳ್ಳಲಾಗುತ್ತದೆ. ನಂತರ ಅವುಗಳನ್ನು ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ರವಾನಿಸುವ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ರಮೇಶ್ ತಿಳಿಸಿದರು.
ನಾಗರಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿ ಹಾಗೂ ದೂರಿಗೂ ವಿಶಿಷ್ಟ ಸ್ವೀಕೃತಿ ಸಂಖ್ಯೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಅರ್ಜಿಯೊಂದಿಗೆ ಸಲ್ಲಿಸುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಸ್ವೀಕೃತಿ ಸಂಖ್ಯೆಯನ್ನು ಬಳಸಿಕೊಂಡು ನಾಗರಿಕರು ತಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ, ಅದು ಯಾವ ವಿಭಾಗಕ್ಕೆ ರವಾನೆಯಾಗಿದೆ ಹಾಗೂ ಯಾವ ಅಧಿಕಾರಿಯ ಬಳಿ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.
ನಾಗರಿಕ ಸಹಾಯ ಕೇಂದ್ರದ ಕಾರ್ಯನಿರ್ವಹಣೆಗೆ 24×7 ನಿಯಂತ್ರಣ ಕೊಠಡಿ ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳು ಮತ್ತು ದೂರುಗಳನ್ನು ನಿಯಂತ್ರಣ ಕೊಠಡಿಯ ಮೂಲಕ ತಕ್ಷಣ ಸಂಬಂಧಪಟ್ಟ ವಿಭಾಗಗಳಿಗೆ ಕಳುಹಿಸುವುದರ ಜೊತೆಗೆ ಅವುಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ. ನಿಗದಿತ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಯದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಲಾಗಿದೆ.
ನಾಗರಿಕ ಸಹಾಯ ಕೇಂದ್ರದ ಜವಾಬ್ದಾರಿಯನ್ನು ಕೇವಲ ದೂರು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸುವುದಕ್ಕೆ ಸೀಮಿತಗೊಳಿಸದೆ, ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ಪ್ರತಿಯೊಂದು ಪ್ರಕರಣದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸಲಾಗುತ್ತದೆ.
ಸಮಸ್ಯೆ ಪರಿಹಾರವಾದ ನಂತರ ನಾಗರಿಕರಿಂದ ಪ್ರತಿಕ್ರಿಯೆ ಪಡೆಯುವ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ನಾಗರಿಕರು ತಿಳಿಸಿದರೆ, ಅಂತಹ ಪ್ರಕರಣಗಳನ್ನು ಮೇಲ್ಮಟ್ಟದ ಪರಿಶೀಲನೆಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಲು ಉದ್ದೇಶಿಸಲಾಗಿದೆ.
ಸಾಮಾನ್ಯ ಆಡಳಿತಾತ್ಮಕ ಹಂತದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ವಲಯವಾರು ಸಾರ್ವಜನಿಕ ಅಹವಾಲು ಸಭೆಗಳಲ್ಲಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ವಿವಿಧ ಇಲಾಖೆಗಳ ಸಮನ್ವಯ ಅಗತ್ಯವಿರುವ, ತಾಂತ್ರಿಕ ಪರಿಶೀಲನೆ ಬೇಕಿರುವ ಅಥವಾ ಹಿರಿಯ ಅಧಿಕಾರಿಗಳ ನಿರ್ಧಾರ ಅಗತ್ಯವಿರುವ ಪ್ರಕರಣಗಳನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಉದ್ದೇಶಿಸಲಾಗಿದೆ.
ನಾಗರಿಕರು ಸಲ್ಲಿಸುವ ಅರ್ಜಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸುರಕ್ಷಿತ ಡಿಜಿಟಲ್ ವ್ಯವಸ್ಥೆಯಲ್ಲಿ ಸಂರಕ್ಷಿಸುವುದು ಪ್ರಸ್ತಾವನೆಯ ಮತ್ತೊಂದು ಪ್ರಮುಖ ಭಾಗವಾಗಿದೆ. ಇದರಿಂದ ಹಳೆಯ ಅರ್ಜಿಗಳು ಹಾಗೂ ದಾಖಲೆಗಳನ್ನು ಅಗತ್ಯವಿದ್ದಾಗ ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ. ದಾಖಲೆಗಳ ನಿರ್ವಹಣೆ, ಹುಡುಕಾಟ, ಸಂಬಂಧಪಟ್ಟ ವಿಭಾಗಗಳಿಗೆ ರವಾನೆ ಹಾಗೂ ಅರ್ಜಿಯ ಪ್ರಗತಿ ಪರಿಶೀಲನೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಜ್ಞಾನದ ಮೂಲಕ ಸರಳಗೊಳಿಸಲು ಉದ್ದೇಶಿಸಲಾಗಿದೆ.
ನಾಗರಿಕರ ದೂರುಗಳನ್ನು ಸ್ವೀಕರಿಸಿ ಮತ್ತೊಂದು ಇಲಾಖೆಗೆ ರವಾನಿಸುವುದಕ್ಕೆ ಮಾತ್ರ ವ್ಯವಸ್ಥೆ ಸೀಮಿತವಾಗದೆ, ಪ್ರತಿಯೊಂದು ಅರ್ಜಿಯ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯನ್ನೂ ನಿಗದಿಪಡಿಸಲಾಗುತ್ತದೆ. ಪ್ರತಿಯೊಂದು ಅರ್ಜಿಗೆ ಸಂಬಂಧಿಸಿದ ವಿಭಾಗ, ಜವಾಬ್ದಾರಿಯುತ ಅಧಿಕಾರಿ ಹಾಗೂ ಪರಿಹಾರಕ್ಕೆ ನಿಗದಿತ ಕಾಲಮಿತಿಯನ್ನು ದಾಖಲಿಸಿ, ಆ ಅವಧಿಯೊಳಗೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ಯೋಜಿಸಲಾಗಿದೆ.
ನಾಗರಿಕ ಸಹಾಯ ಕೇಂದ್ರಕ್ಕೆ ಬಂದಿರುವ ಒಟ್ಟು ಅರ್ಜಿಗಳು, ಪರಿಹಾರಗೊಂಡ ಪ್ರಕರಣಗಳು, ಪ್ರಗತಿಯಲ್ಲಿರುವ ಅರ್ಜಿಗಳು ಹಾಗೂ ಬಾಕಿ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಒಂದೇ ಡ್ಯಾಶ್ಬೋರ್ಡ್ ಅಥವಾ ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ಹಿರಿಯ ಅಧಿಕಾರಿಗಳು ವೀಕ್ಷಿಸಲು ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗಿದೆ.
ಈ ವ್ಯವಸ್ಥೆಯಿಂದ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ನಾಗರಿಕರ ಸಮಸ್ಯೆಗಳ ಪರಿಹಾರದ ಸ್ಥಿತಿಯನ್ನು ಹಿರಿಯ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಲು, ಬಾಕಿ ಪ್ರಕರಣಗಳನ್ನು ಗುರುತಿಸಲು ಹಾಗೂ ಅವುಗಳ ತ್ವರಿತ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ, ವೇಗ ಹಾಗೂ ಅಧಿಕಾರಿಗಳ ಜವಾಬ್ದಾರಿತನವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ನಾಗರಿಕರ ಸಮಸ್ಯೆಯನ್ನು ಕೇವಲ ದಾಖಲಿಸಿ ಮತ್ತೊಂದು ವಿಭಾಗಕ್ಕೆ ರವಾನಿಸಿದ ಮಾತ್ರಕ್ಕೆ ಆಡಳಿತದ ಜವಾಬ್ದಾರಿ ಮುಗಿಯುವುದಿಲ್ಲ ಎಂದು ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು. ಸಮಸ್ಯೆ ಪರಿಹಾರವಾಗುವವರೆಗೆ ಅದರ ಪ್ರಗತಿಯನ್ನು ಪರಿಶೀಲಿಸಬೇಕು, ಅಗತ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಹಾಗೂ ಅಂತಿಮವಾಗಿ ನಾಗರಿಕರಿಗೆ ಪರಿಹಾರ ದೊರೆತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕರು ತಮ್ಮ ಅರ್ಜಿಯ ಸ್ಥಿತಿ ತಿಳಿದುಕೊಳ್ಳಲು ಅನಗತ್ಯವಾಗಿ ಅಲೆದಾಡುವ ಅಥವಾ ಪದೇ ಪದೇ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲದಂತೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಅವರು ನಿರ್ದೇಶಿಸಿದರು.
‘ಒಂದೇ ಕಡೆ ಅರ್ಜಿ – ನಿಗದಿತ ಅಧಿಕಾರಿಗೆ ರವಾನೆ – ಕಾಲಮಿತಿಯಲ್ಲಿ ಪರಿಹಾರ – ನಿರಂತರ ಮೇಲ್ವಿಚಾರಣೆ – ನಾಗರಿಕರ ಪ್ರತಿಕ್ರಿಯೆ’ ಎಂಬ ಸಮಗ್ರ ವ್ಯವಸ್ಥೆಯ ರೂಪದಲ್ಲಿ ನಾಗರಿಕ ಸಹಾಯ ಕೇಂದ್ರವನ್ನು ಅಭಿವೃದ್ಧಿಪಡಿಸಲು ಪಾಲಿಕೆ ಉದ್ದೇಶಿಸಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು, ಅರ್ಜಿಗಳ ವಿಲೇವಾರಿಯಲ್ಲಿನ ವಿಳಂಬ ಕಡಿಮೆ ಮಾಡುವುದು ಹಾಗೂ ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿ ನಿಗದಿಪಡಿಸುವ ಮೂಲಕ ನಾಗರಿಕ ಸ್ನೇಹಿ ಆಡಳಿತವನ್ನು ಮತ್ತಷ್ಟು ಬಲಪಡಿಸುವುದು ಇದರ ಗುರಿಯಾಗಿದೆ.
ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಾಗರಿಕರಿಗೆ ಸರಳ, ವೇಗದ ಹಾಗೂ ಪಾರದರ್ಶಕ ಸೇವೆ ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ನಾಗರಿಕರ ಸಮಸ್ಯೆ ಪರಿಹಾರವಾಗುವವರೆಗೆ ಅಧಿಕಾರಿಗಳು ಅದರ ಬಗ್ಗೆ ಗಮನಹರಿಸಬೇಕು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕು ಎಂದು ರಮೇಶ್ ಸೂಚಿಸಿದರು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಕೆ., ವಿವಿಧ ವಿಭಾಗಗಳ ಇಲಾಖಾ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
