ಗಣೇಶ ಚತುರ್ಥಿ 2026: ಜಿಬಿಎ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ವಿಸರ್ಜನೆ ನಿಷೇಧ
ಬೆಂಗಳೂರು: ಗಣೇಶ ಚತುರ್ಥಿ 2026ರ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳಿಂದ ತಯಾರಿಸಲಾದ ಗಣೇಶ ಮೂರ್ತಿಗಳ ಉತ್ಪಾದನೆ, ಸಂಗ್ರಹ, ಮಾರಾಟ ಮತ್ತು ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ.
ಎಫ್ಇಸಿಸಿ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್, ಕೃತಕ ಅಥವಾ ಸಹಜವಾಗಿ ಜೈವಿಕವಾಗಿ ವಿಘಟನೆಯಾಗದ ಪದಾರ್ಥಗಳಿಂದ ತಯಾರಿಸಲಾದ ಹಾಗೂ ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳಿಂದ ಅಲಂಕರಿಸಲಾದ ಗಣೇಶ ಮೂರ್ತಿಗಳು ಮತ್ತು ಇತರ ಮೂರ್ತಿಗಳ ಮೇಲಿನ ನಿರ್ಬಂಧವನ್ನು ಪುನರುಚ್ಚರಿಸಿದ್ದಾರೆ.
ರಾಜ್ಯಾದ್ಯಂತ ಯಾವುದೇ ಜಲಮೂಲಗಳು ಮಾಲಿನ್ಯಗೊಳ್ಳದಂತೆ ಸಂರಕ್ಷಿಸುವ ಉದ್ದೇಶದಿಂದ ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳಿಂದ ಅಲಂಕರಿಸಲಾದ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಹಾಗೂ ಅವುಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ಸರ್ಕಾರ 2023ರ ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿತ್ತು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಪ್ರತ್ಯಾಯೋಜಿಸಲಾದ ಅಧಿಕಾರದಡಿ ಪರಿಸರ (ಸಂರಕ್ಷಣಾ) ಕಾಯ್ದೆ, 1986ರ ಸೆಕ್ಷನ್ 5ರ ಅನ್ವಯ ಈ ಆದೇಶ ಹೊರಡಿಸಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಿಗೂ ಇದು ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.
ಪರಿಸರಕ್ಕೆ, ಮುಖ್ಯವಾಗಿ ಜಲಮೂಲಗಳಿಗೆ ಉಂಟಾಗುವ ಹಾನಿಯನ್ನು ತಡೆಯುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ತಯಾರಿಸದಂತೆ ಹಾಗೂ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರು ಸಲ್ಲಿಸಿದ್ದ ಮನವಿಯನ್ನೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಹಬ್ಬಗಳ ಸಂದರ್ಭದಲ್ಲಿ ಪೂಜಿಸಲಾದ ಮೂರ್ತಿಗಳನ್ನು ಕೆರೆ, ಬಾವಿ ಹಾಗೂ ಇತರ ಜಲಮೂಲಗಳಲ್ಲಿ ವ್ಯಾಪಕವಾಗಿ ವಿಸರ್ಜಿಸಲಾಗುತ್ತಿದೆ. ಈ ಮೂರ್ತಿಗಳಿಗೆ ಭಾರಲೋಹಗಳನ್ನು ಒಳಗೊಂಡ ರಾಸಾಯನಿಕ ಬಣ್ಣಗಳನ್ನು ಬಳಸಿ, ಕೃತಕ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗುತ್ತದೆ ಎಂದು ಸುತ್ತೋಲೆ ತಿಳಿಸಿದೆ.
ಅಗತ್ಯ ಜಾಗರೂಕತೆ ಮತ್ತು ಕಾಳಜಿ ವಹಿಸದೆ ಇಂತಹ ಮೂರ್ತಿಗಳನ್ನು ವಿಸರ್ಜಿಸುವುದರಿಂದ ಜಲ ಹಾಗೂ ಭೂಮಿ ಕಲುಷಿತಗೊಂಡು ಪರಿಸರಕ್ಕೆ ಹಾನಿಯಾಗುವುದಲ್ಲದೆ, ಜಲಮೂಲಗಳಲ್ಲಿರುವ ಜೀವಸಂಕುಲಕ್ಕೂ ಅಪಾಯ ಉಂಟಾಗುತ್ತದೆ ಎಂದು ತಿಳಿಸಲಾಗಿದೆ. ಪರಿಸರ ಹಾನಿಯನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯವಾಗಿದೆ ಎಂದು ಸುತ್ತೋಲೆ ಹೇಳಿದೆ.
2026ರ ಗಣೇಶ ಚತುರ್ಥಿ ಸಂದರ್ಭದಲ್ಲಿ ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳಿಂದ ಅಲಂಕರಿಸಲಾದ ಪ್ಲಾಸ್ಟರ್ ಆಫ್ ಪ್ಯಾರಿಸ್, ಇತರ ಕೃತಕ ಅಥವಾ ಸಹಜವಾಗಿ ಜೈವಿಕವಾಗಿ ವಿಘಟನೆಯಾಗದ ಪದಾರ್ಥಗಳಿಂದ ತಯಾರಿಸಲಾದ ಗಣೇಶ ಮೂರ್ತಿಗಳು ಹಾಗೂ ಇತರ ಯಾವುದೇ ಮೂರ್ತಿಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಇಂತಹ ಮೂರ್ತಿಗಳನ್ನು ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಪರಿಸರ (ಸಂರಕ್ಷಣಾ) ಕಾಯ್ದೆ, 1986ರ ಉಲ್ಲಂಘನೆ ದಂಡನೀಯ ಅಪರಾಧವಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಜಾರಿಗೊಳಿಸುವುದರ ಜೊತೆಗೆ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ.
