ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ
ಈ ಲೇಖನವನ್ನು ಇಂಗ್ಲಿಷ್ನಲ್ಲಿ ಓದಿ
ದಸರೆಯ ಮಹತ್ವ
ಭಾರತೀಯ ಹಬ್ಬಗಳು ತಮ್ಮ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಮುಖ ಸಾಧನಗಳಾಗಿವೆ. ಇಂದಿನ ಯುವಪೀಳಿಗೆಗೆ ಈ ಸಂಪ್ರದಾಯಗಳನ್ನು ಪರಿಚಯಿಸುವುದು ಅತ್ಯಂತ ಮುಖ್ಯ. ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಹೆಮ್ಮೆಪಡುವ ಸುವರ್ಣಾವಕಾಶವನ್ನು ಇದು ಎಲ್ಲ ಭಾರತೀಯರಿಗೆ ಒದಗಿಸುತ್ತದೆ.
‘ನಾಡಹಬ್ಬ ದಸರಾ’ ಭಾರತದ ಪ್ರಮುಖ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದು. ನವರಾತ್ರಿ ಮತ್ತು ವಿಜಯದಶಮಿಯನ್ನು ಒಳಗೊಂಡ ಈ ಹತ್ತು ದಿನಗಳ ಆಚರಣೆಗೆ ಪೌರಾಣಿಕ, ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಇದಲ್ಲದೆ, ‘ಮೈಸೂರು ದಸರಾ’ ಆಚರಣೆಯ ವೈಶಿಷ್ಟ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಯುನೆಸ್ಕೊ, ದಸರಾ ಆಚರಣೆಗೆ ಸಂಬಂಧಿಸಿದ ಕಲಾಪ್ರಕಾರಗಳನ್ನು 2008ರಲ್ಲಿ ‘ಮಾನವತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದು ಮಾನ್ಯತೆ ನೀಡಿತು.
ಪ್ರಾಚೀನ ಕಾಲದ ದಸರಾ ವೈಭವ
ಶರತ್ಕಾಲದಲ್ಲಿ ಆಚರಿಸುವ ನವರಾತ್ರಿಯು ದೇವಿಯ ವಿವಿಧ ರೂಪಗಳ ಆರಾಧನೆಗೆ ಮೀಸಲಾಗಿದ್ದರೆ, ವಿಜಯದಶಮಿಯನ್ನು ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ದುಷ್ಟಶಕ್ತಿಗಳ ಮೇಲೆ ಧರ್ಮ ಮತ್ತು ಸತ್ಕಾರ್ಯಗಳ ಜಯವೇ ಇದರ ಸಂದೇಶ. ದೇಶದ ವಿವಿಧ ಭಾಗಗಳಲ್ಲಿ ದಸರೆಯನ್ನು ಬೇರೆಬೇರೆ ರೀತಿಯಲ್ಲಿ ಆಚರಿಸಿದರೂ, ಮೈಸೂರು ದಸರಾ ತನ್ನ ವಿಶಿಷ್ಟ ಸಂಪ್ರದಾಯಗಳು, ರಾಜವೈಭವ ಮತ್ತು ಸಾಂಸ್ಕೃತಿಕ ಆಚರಣೆಗಳಿಂದ ವಿಶ್ವಪ್ರಸಿದ್ಧವಾಗಿದೆ.
ನವರಾತ್ರಿ ಮತ್ತು ದೇವಿಯ ಆರಾಧನೆ
ಪುರಾಣಗಳಲ್ಲಿ ಮಹಿಷಾಸುರನಂತಹ ರಾಕ್ಷಸಶಕ್ತಿಗಳ ವಿರುದ್ಧ ಚಾಮುಂಡೇಶ್ವರಿ ದೇವಿ ಸಾಧಿಸಿದ ವಿಜಯದ ಕಥೆಗಳು ನವರಾತ್ರಿ ಆಚರಣೆಯೊಂದಿಗೆ ಸಂಬಂಧ ಹೊಂದಿವೆ. ರಾಕ್ಷಸರ ಸಂಹಾರದ ಮೂಲಕ ಧರ್ಮ ಮತ್ತು ಸತ್ಯದ ವಿಜಯವನ್ನು ಆಚರಿಸಲಾಗುತ್ತದೆ. ಮೈಸೂರು ದಸರೆಯಲ್ಲಿ ಚಾಮುಂಡೇಶ್ವರಿ ದೇವಿಯ ಆರಾಧನೆಗೆ ವಿಶೇಷ ಸ್ಥಾನವಿದೆ.


ಮೈಸೂರಿನ ಒಡೆಯರ ಕುಲದೇವತೆ ಹಾಗೂ ರಾಜ್ಯದ ಅಧಿದೇವತೆಯಾದ ಬೆಟ್ಟದ ಮೂಲ ಚಾಮುಂಡಿ.
ಪ್ರತಿ ಶುಕ್ರವಾರ ಚಿನ್ನದ ಕವಚದಲ್ಲಿ ಕಂಗೊಳಿಸುವ ಬೆಟ್ಟದ ಚಾಮುಂಡಿಯ ಕಲಾತ್ಮಕ ಚಿತ್ರ.
ಪ್ರಕೃತಿಯನ್ನು ಮಾತೃದೇವಿಯ ರೂಪದಲ್ಲಿ ನೋಡುವ ಭಾರತೀಯ ಸಂಪ್ರದಾಯದಲ್ಲಿ ಶಕ್ತಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಒಂಬತ್ತು ರೂಪಗಳಲ್ಲಿ ಆರಾಧಿಸಲಾಗುತ್ತದೆ.
ಈ ಅವಧಿಯಲ್ಲಿ ಘಟಸ್ಥಾಪನೆ, ದೇವಿಯ ಆರಾಧನೆ, ಸರಸ್ವತಿ ಪೂಜೆ, ದುರ್ಗಾಷ್ಟಮಿ, ಆಯುಧಪೂಜೆ ಮತ್ತು ಇತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಹತ್ತನೇ ದಿನವಾದ ವಿಜಯದಶಮಿಯಂದು ವಿಜಯಲಕ್ಷ್ಮಿ ಅಥವಾ ಅಪರಾಜಿತಾ ದೇವಿಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳು ದೇವಿಯ ಒಂಬತ್ತು ವಿಭಿನ್ನ ಬಣ್ಣಗಳನ್ನು ಸಂಕೇತಿಸುತ್ತವೆ. ಮೊದಲ ದಿನ – ಕಿತ್ತಳೆ, ಎರಡನೇ ದಿನ – ಬಿಳಿ, ಮೂರನೇ ದಿನ – ಕೆಂಪು, ನಾಲ್ಕನೇ ದಿನ – ಕಡುನೀಲಿ, ಐದನೇ ದಿನ – ಹಳದಿ, ಆರನೇ ದಿನ – ಹಸಿರು, ಏಳನೇ ದಿನ – ಬೂದು, ಎಂಟನೇ ದಿನ – ನೇರಳೆ, ಒಂಬತ್ತನೇ ದಿನ – ನವಿಲುಹಸಿರು. ದೇವಿಯನ್ನು ಈ ಬಣ್ಣಗಳಲ್ಲಿ ಅಲಂಕರಿಸಲಾಗುತ್ತದೆ. ನವರಾತ್ರಿಯ ಪ್ರತಿ ದಿನವೂ ಅದೇ ಬಣ್ಣದ ಉಡುಪುಗಳನ್ನು ಧರಿಸಿ ಬಾಲಕಿಯರೂ ಸಂಭ್ರಮಿಸುತ್ತಾರೆ.
ವಿಜಯದಶಮಿಗೆ ರಾಮಾಯಣದ ನಂಟೂ ಇದೆ. ಶ್ರೀರಾಮನು ರಾವಣನನ್ನು ಸೋಲಿಸಿದ ದಿನವಾಗಿ ಇದನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಹೀಗಾಗಿ ದಸರಾ ದೇವಿಯ ವಿಜಯ ಮತ್ತು ಶ್ರೀರಾಮನ ವಿಜಯ ಎರಡನ್ನೂ ಪ್ರತಿನಿಧಿಸುವ ಮಹತ್ವದ ಹಬ್ಬವಾಗಿದೆ.
ಐತಿಹಾಸಿಕ ಹಿನ್ನೆಲೆ
ಮೈಸೂರು ದಸರೆಯ ಇತಿಹಾಸ ಬಹಳ ಪ್ರಾಚೀನವಾಗಿದೆ. ಭಾರತದ ವಿವಿಧ ರಾಜವಂಶಗಳ ಕಾಲದ ದುರ್ಗಾ ಮತ್ತು ಮಹಿಷಮರ್ದಿನಿಯ ಆರಾಧನೆಯನ್ನು ಬಿಂಬಿಸುವ ಶಿಲ್ಪಗಳು ದೊರೆತಿರುವುದರಿಂದ, ದಸರಾ ಆಚರಣೆ ಪ್ರಾಚೀನ ಕಾಲದಿಂದಲೂ ನಡೆದುಬಂದಿದೆ ಎಂದು ಪರಿಗಣಿಸಲಾಗುತ್ತದೆ. ಶ್ರೀರಂಗಪಟ್ಟಣದ ಪತನದ ನಂತರ ಮೈಸೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಮೂರನೇ ಕೃಷ್ಣರಾಜ ಒಡೆಯರು 1799ರಲ್ಲಿ ಮೈಸೂರಿನ ದಸರಾ ಹಬ್ಬವನ್ನು ಪುನರುಜ್ಜೀವನಗೊಳಿಸಿದರು.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದಸರಾ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿತ್ತು. ಇಂದಿನ ಮೈಸೂರು ದಸರೆಯು ಈ ವಿಜಯನಗರ ಸಂಪ್ರದಾಯದ ಮುಂದುವರಿಕೆಯಾಗಿದೆ.
ಒಡೆಯರ ಕಾಲದ ದಸರಾ ವೈಭವ
ಮೈಸೂರಿನ ಅರಸರಾದ ಶ್ರೀ ರಾಜ ಒಡೆಯರು ಕ್ರಿ.ಶ. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಹತ್ತು ದಿನಗಳ ದಸರಾ ಹಬ್ಬವನ್ನು ಆರಂಭಿಸಿದರು. ನಂತರ ಮೈಸೂರಿನ ಒಡೆಯರ ಆಳ್ವಿಕೆಯಲ್ಲಿ ದಸರಾ ಹಬ್ಬವು ರಾಜವೈಭವದ ಪ್ರಮುಖ ಸಂಕೇತವಾಗಿ ಬೆಳೆಯಿತು. 1648ರಲ್ಲಿ ಕವಿ ಗೋವಿಂದ ವೈದ್ಯರು ತಮ್ಮ ‘ಕಂಠೀರವ ನರಸರಾಜ ವಿಜಯ’ ಕೃತಿಯಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ ಆಳ್ವಿಕೆಯ ದಸರಾ ಆಚರಣೆಗಳ ವಿವರಗಳನ್ನು ದಾಖಲಿಸಿದರು. ಆ ಕಾಲದಲ್ಲಿ ದೇವಿಯ ಆರಾಧನೆ, ಆಯುಧಪೂಜೆ, ರಾಜದರ್ಬಾರ್, ಕುಸ್ತಿ, ನೃತ್ಯ, ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರೆಯ ಪ್ರಮುಖ ಭಾಗಗಳಾಗಿದ್ದವು.

ಕಂಠೀರವ ನರಸರಾಜ ಒಡೆಯರು.
ಒಡೆಯರ ಕಾಲದಲ್ಲಿ ದಸರಾ ರಾಜಮನೆತನದ ಪ್ರಮುಖ ಹಬ್ಬವಾಗಿತ್ತು. ನವರಾತ್ರಿಯಲ್ಲಿ ಅರಸರು ಕುಲದೇವತೆ ಮತ್ತು ಇತರ ದೇವತೆಗಳನ್ನು ಪೂಜಿಸಿ, ಪಟ್ಟದ ಆನೆ ಹಾಗೂ ಕುದುರೆಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ರಾಜದರ್ಬಾರ್, ಆಯುಧಪೂಜೆ ಮತ್ತು ವಿಜಯದಶಮಿ ಮೆರವಣಿಗೆಗಳು ಪ್ರಮುಖ ಕಾರ್ಯಕ್ರಮಗಳಾಗಿದ್ದವು.

ಚತುರಂಗಬಲ ಆಯುಧಪೂಜೆಗಾಗಿ ಜೋಡಿಸಲಾದ ಆಯುಧಗಳು — 32 ಆಯುಧಗಳ ಪೂಜೆ.
ಮಹಾನವಮಿಯಂದು ಪಟ್ಟದ ಕತ್ತಿ ಸೇರಿದಂತೆ ರಾಜಮನೆತನದ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ರಾಜದರ್ಬಾರ್, ಕುಸ್ತಿ, ಸಂಗೀತ, ನೃತ್ಯ, ಪಟಾಕಿ ಪ್ರದರ್ಶನಗಳು ಮತ್ತು ವಿವಿಧ ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ದಸರೆಯ ಭಾಗವಾಗಿದ್ದವು. ಕಾಲಕ್ರಮೇಣ ಇವುಗಳಲ್ಲಿ ಅನೇಕ ಬದಲಾವಣೆಗಳಾಗಿದ್ದರೂ ದಸರೆಯ ಮೂಲ ಸಂಪ್ರದಾಯಗಳು ಇಂದಿಗೂ ಮುಂದುವರಿದಿವೆ.

ಅರಮನೆಯ ಒಳಗೆ ನಡೆದ ಕುಸ್ತಿಯ ಆಕರ್ಷಕ ಚಿತ್ರ.

ಮೂರನೇ ಕೃಷ್ಣರಾಜ ಒಡೆಯರು.
ಮೂರನೇ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ದಸರಾ ಆಚರಣೆಗಳು ವಿಶೇಷ ವೈಭವವನ್ನು ಪಡೆದುಕೊಂಡವು. ಮಹಾನವಮಿಯಂದು ಕತ್ತಿಗಳು ಸೇರಿದಂತೆ ರಾಜಮನೆತನದ ವಿವಿಧ ಆಯುಧಗಳನ್ನು ಪೂಜಿಸಲಾಗುತ್ತಿತ್ತು. ವಿಜಯದಶಮಿಯಂದು ಅರಸರು ರಾಜವೇಷದಲ್ಲಿ ಕತ್ತಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಆ ಕಾಲದಲ್ಲಿ ಇಂದಿನಂತೆ ಅರಸರು ಚಿನ್ನದ ಅಂಬಾರಿಯಲ್ಲಿ ಪ್ರಯಾಣಿಸುತ್ತಿರಲಿಲ್ಲ. ಆನೆಗಳು ಎಳೆಯುವ ಬೆಳ್ಳಿಯ ರಥದಲ್ಲಿ ಮಹಾರಾಜರು ಸಾಗುತ್ತಿದ್ದರು. ನಂತರ ಕುದುರೆಯೇರಿ ಸೇನೆಯನ್ನು ಪರಿಶೀಲಿಸಿ ಬನ್ನಿಮರಕ್ಕೆ ಪೂಜೆ ಸಲ್ಲಿಸುತ್ತಿದ್ದರು.
ಚಾಮುಂಡಿಬೆಟ್ಟದ ವಿಶೇಷ ಮಹತ್ವ
ಚಾಮುಂಡಿಬೆಟ್ಟವು ಮೈಸೂರು ದಸರೆಯ ಧಾರ್ಮಿಕ ಆಯಾಮದ ಪ್ರಮುಖ ಕೇಂದ್ರವಾಗಿದೆ. ನವರಾತ್ರಿಯಲ್ಲಿ ಪ್ರತಿದಿನ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಲಾಗುತ್ತದೆ.
ದೇವಿಯನ್ನು ಶಕ್ತಿಯ ವಿವಿಧ ರೂಪಗಳಲ್ಲಿ ಅಲಂಕರಿಸುವ ಸಂಪ್ರದಾಯವಿದೆ. ನವರಾತ್ರಿಯ ಹತ್ತು ದಿನಗಳಲ್ಲಿ ದೇವಿಯ ವಿವಿಧ ಅಲಂಕಾರಗಳು ಭಕ್ತರನ್ನು ಆಕರ್ಷಿಸುತ್ತವೆ. ವಿಜಯದಶಮಿಯಂದು ದೇವಿಯನ್ನು ಅಪರಾಜಿತೆಯ ರೂಪದಲ್ಲಿ ಪೂಜಿಸಲಾಗುತ್ತದೆ.
ಕುಮಾರಿ ಪೂಜೆ ನವರಾತ್ರಿಯ ಮತ್ತೊಂದು ವಿಶೇಷ ಆಚರಣೆ. ಕೆಲವು ಕಡೆ ಎರಡು ವರ್ಷದಿಂದ ಹತ್ತು ವರ್ಷ ವಯಸ್ಸಿನ ಬಾಲಕಿಯರನ್ನು ದೇವಿಯ ವಿವಿಧ ರೂಪಗಳ ಪ್ರತಿನಿಧಿಗಳಾಗಿ ಪೂಜಿಸಲಾಗುತ್ತದೆ.
ಸಿಂಹಾಸನ – ಅರಮನೆಯ ಪ್ರಮುಖ ಆಕರ್ಷಣೆ
ಮೈಸೂರು ಸಂಸ್ಥಾನದ ಮತ್ತೊಂದು ಪ್ರಮುಖ ಆಕರ್ಷಣೆ ಸಿಂಹಾಸನ. ಇದು ರತ್ನಖಚಿತ ಚಿನ್ನದ ಸಿಂಹಾಸನವಾಗಿದ್ದು, ದಸರೆಯ ಮೊದಲು ಶುಭಮುಹೂರ್ತದಲ್ಲಿ ಖಾಸಗಿ ದರ್ಬಾರ್ ಸಭಾಂಗಣದಲ್ಲಿ ಜೋಡಿಸಲಾಗುತ್ತದೆ. ದಸರಾ ಅವಧಿಯಲ್ಲಿ ಮಾತ್ರ ಸುಮಾರು 30ರಿಂದ 40 ದಿನಗಳವರೆಗೆ ಸಾರ್ವಜನಿಕರು ಇದನ್ನು ವೀಕ್ಷಿಸಬಹುದು. ಸಿಂಹಾಸನವು ಹಲವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಇದಕ್ಕೆ ಬೆಳ್ಳಿಯ ಮೆಟ್ಟಿಲುಗಳಿದ್ದು, ಎರಡೂ ಬದಿಗಳಲ್ಲಿ ಮಹಾರಾಜರನ್ನು ಸ್ವಾಗತಿಸುವ ಭಂಗಿಯಲ್ಲಿ ನಿಂತಂತೆ ವಿನ್ಯಾಸಗೊಳಿಸಿದ ದರ್ಪಣ ಸುಂದರಿಯರಿದ್ದಾರೆ. ಮೇಲ್ಭಾಗದಲ್ಲಿ ನವಿಲಿನೊಂದಿಗೆ ಚಿನ್ನದ ಚಾಮರವಿದೆ. ಸುತ್ತಲೂ ಮುತ್ತುಗಳಿಂದ ಅಲಂಕರಿಸಲಾಗಿದೆ. ಸಿಂಹಾಸನದ ಹಿಂಭಾಗದ ಮೇಲ್ಭಾಗದಲ್ಲಿ ಲಕ್ಷ್ಮಿ, ಚಾಮುಂಡೇಶ್ವರಿ ಮತ್ತು ಸರಸ್ವತಿಯ ಚಿತ್ರಗಳಿವೆ. ವಿಜಯದಶಮಿಯಂದು ರಾಜಮನೆತನದ ಸದಸ್ಯರು ಸಿಂಹಾಸನಕ್ಕೆ ಹೋಮಹವನ ನೆರವೇರಿಸಿ, ಸಿಂಹವನ್ನು ಜೋಡಿಸುತ್ತಾರೆ.

ಮೈಸೂರು ಅರಸರ ಭವ್ಯ ರತ್ನಖಚಿತ ಚಿನ್ನದ ಸಿಂಹಾಸನ.
‘ಸ್ವರ್ಣಕಲಾ ನಿಪುಣ’ ಸಿಂಗಣ್ಣಾಚಾರ್ಯರು ಸಿಂಹಾಸನವನ್ನು ಚಿನ್ನದ ಆಭರಣಗಳು, ಅಮೂಲ್ಯ ರತ್ನಗಳು ಮತ್ತು ಬೆಳ್ಳಿಯ ಆಕೃತಿಗಳಿಂದ ಅಲಂಕರಿಸಿದರು. ಕಾಲಕ್ರಮೇಣ ಚಿನ್ನದ ಹಾಳೆಗಳು, ನವರತ್ನಗಳು ಮತ್ತು ಕಲಾತ್ಮಕ ಅಲಂಕಾರಗಳನ್ನು ಸೇರಿಸಿ ಅದಕ್ಕೆ ಭವ್ಯ ರೂಪ ನೀಡಲಾಯಿತು.
ಮೈಸೂರಿನ ಭವ್ಯ ದೀಪಾಲಂಕಾರ
ನಾಡಹಬ್ಬ ದಸರಾ ಆಚರಣೆಯ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು (ಸೆಸ್ಕ್) ಮೈಸೂರು ನಗರದ ಸುಮಾರು 130ರಿಂದ 136 ಕಿಲೋಮೀಟರ್ ರಸ್ತೆಗಳ ಉದ್ದಕ್ಕೂ ವೈವಿಧ್ಯಮಯ ಮತ್ತು ಆಕರ್ಷಕ ವಿದ್ಯುದ್ದೀಪಗಳಿಂದ ಅಲಂಕರಿಸುತ್ತದೆ.
ಇಡೀ ಮೈಸೂರು ನಗರವನ್ನು ಕಂಗೊಳಿಸುವ ಈ ದೀಪಾಲಂಕಾರವು ನಗರದ ಸುಮಾರು 118 ಪ್ರಮುಖ ವೃತ್ತಗಳು ಮತ್ತು ಜಂಕ್ಷನ್ಗಳನ್ನು ಒಳಗೊಳ್ಳುತ್ತದೆ. ಇದರ ಜೊತೆಗೆ ಕರ್ನಾಟಕದ ಸಂಸ್ಕೃತಿ ಮತ್ತು ಸಾಧಕರನ್ನು ಬಿಂಬಿಸುವ 75ಕ್ಕೂ ಹೆಚ್ಚು ಕಲಾಕೃತಿಗಳನ್ನು ಎಲ್ಇಡಿ ದೀಪಗಳ ಮೂಲಕ ಪ್ರದರ್ಶಿಸಲಾಗುತ್ತದೆ. ದೇಶ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರಿಗಾಗಿ ಈ ಭವ್ಯ ಬೆಳಕಿನ ಉತ್ಸವ ಒಟ್ಟು 21 ದಿನಗಳವರೆಗೆ ಮುಂದುವರಿಯುತ್ತದೆ.
ಅರಮನೆ ದಸರಾ ಮತ್ತು ನಾಡಹಬ್ಬ ದಸರಾ
1969ರಲ್ಲಿ ಮೈಸೂರು ರಾಜಮನೆತನದ ಆಳ್ವಿಕೆ ಕೊನೆಗೊಂಡ ನಂತರ ದಸರಾ ಆಚರಣೆಯಲ್ಲಿ ಮಹತ್ವದ ಬದಲಾವಣೆಯಾಯಿತು. ಪ್ರಸ್ತುತ ಮೈಸೂರಿನಲ್ಲಿ ದಸರೆಯು ಎರಡು ಪ್ರಮುಖ ರೂಪಗಳಲ್ಲಿ ನಡೆಯುತ್ತದೆ.
ಒಂದು ಕಡೆ ರಾಜಮನೆತನದ ಪರಂಪರೆಯ ಭಾಗವಾಗಿ ಅರಮನೆಯೊಳಗೆ ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧಪೂಜೆ, ವಿಜಯದಶಮಿ, ಶಮೀಪೂಜೆ ಮತ್ತು ಇತರ ಸಾಂಪ್ರದಾಯಿಕ ಆಚರಣೆಗಳು ಇದರ ಭಾಗವಾಗಿವೆ.
ಮತ್ತೊಂದು ಕಡೆ ಕರ್ನಾಟಕ ಸರ್ಕಾರವು ಸಾರ್ವಜನಿಕರಿಗಾಗಿ ‘ನಾಡಹಬ್ಬ ದಸರಾ’ವನ್ನು ಆಯೋಜಿಸುತ್ತದೆ. ಜಂಬೂಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳು ಇದರ ಪ್ರಮುಖ ಆಕರ್ಷಣೆಗಳಾಗಿವೆ.
ಹೀಗಾಗಿ ಇಂದಿನ ಮೈಸೂರು ದಸರೆಯು ರಾಜಮನೆತನದ ಸಂಪ್ರದಾಯ ಮತ್ತು ಆಧುನಿಕ ಸಾರ್ವಜನಿಕ ಹಬ್ಬದ ಸಂಯೋಜನೆಯಾಗಿ ರೂಪುಗೊಂಡಿದೆ.
ಚಾಮುಂಡೇಶ್ವರಿ ಉತ್ಸವ ಮತ್ತು ಜಂಬೂಸವಾರಿ
ಮೈಸೂರು ದಸರಾ ಮತ್ತು ಆನೆಗಳ ನಡುವಿನ ಸಂಬಂಧ ಬಹಳ ಹಳೆಯದು. ಒಡೆಯರ ಕಾಲದ ರಾಜಮೆರವಣಿಗೆಗಳೊಂದಿಗೆ ಆರಂಭವಾದ ಈ ಸಂಪ್ರದಾಯವು ಇಂದು ಸರ್ಕಾರದ ನೇತೃತ್ವದಲ್ಲಿ ನಡೆಯುವ ಜಂಬೂಸವಾರಿಯ ರೂಪದಲ್ಲಿ ಮುಂದುವರಿದಿದೆ.
ಜಂಬೂಸವಾರಿ ಆರಂಭವಾಗುವ ಮೊದಲು ಶುಭಮುಹೂರ್ತದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ಭವ್ಯವಾಗಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಾಗುತ್ತದೆ. ನಂತರ 24 ಕುಶಾಲತೋಪುಗಳ ಗೌರವ ಸಲ್ಲಿಸಲಾಗುತ್ತದೆ. ಅಲ್ಲಿಂದ ಅರಮನೆಯ ಆವರಣದಲ್ಲಿ ಭವ್ಯ ವಿಜಯದಶಮಿ ಮೆರವಣಿಗೆ ಆರಂಭವಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಜಂಬೂಸವಾರಿಯು 14 ಅಲಂಕೃತ ಆನೆಗಳೊಂದಿಗೆ ಅರಮನೆಯ ಆವರಣದಿಂದ ಬನ್ನಿಮಂಟಪದವರೆಗೆ ಸಾಗುತ್ತದೆ. ಜನಸಾಗರದ ನಡುವೆ ಮೆರವಣಿಗೆಯಲ್ಲಿ ಸಾಗುವ ರಾಜಗಜಗಳ ಗಾಂಭೀರ್ಯದ ನಡಿಗೆ ಅನುಪಮ. ಭಾರತದ ಬೇರೆಲ್ಲಿಯೂ ದಸರೆಯಲ್ಲಿ ಇಷ್ಟೊಂದು ಆನೆಗಳು ಭಾಗವಹಿಸುವುದಿಲ್ಲ.

80 ಕೆಜಿ ಚಿನ್ನದಿಂದ ಅಲಂಕಾರಕ್ಕಾಗಿ ಸಿದ್ಧಪಡಿಸಲಾದ 750 ಕೆಜಿ ಅಂಬಾರಿ.
ಅಂಬಾರಿ ಹೊರುವ ಬಲರಾಮನ ಜೊತೆಗೆ ಪೊಲೀಸ್ ವಾದ್ಯವೃಂದದ ಲಯಬದ್ಧ ಪ್ರದರ್ಶನವು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಂಸ್ಕೃತಿಕ ತಂಡಗಳ ಕಂಸಾಳೆ ನೃತ್ಯ ಪ್ರದರ್ಶನಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಇದನ್ನು ವೀಕ್ಷಿಸಲು ಲಕ್ಷಾಂತರ ಜನರು ಸೇರುತ್ತಾರೆ.

ಜಂಬೂಸವಾರಿಯ ಅಲಂಕೃತ ಆನೆಗಳು.
ದಸರೆಯ ವಿಶೇಷ ಕಾರ್ಯಕ್ರಮಗಳು
ಯುವಸಂಭ್ರಮ, ಯುವದಸರಾ
ಯುವಜನರನ್ನು ದಸರೆಯತ್ತ ಆಕರ್ಷಿಸಲು ಮಹಾರಾಜ ಕಾಲೇಜು ಮೈದಾನದಲ್ಲಿ ಯುವಸಂಭ್ರಮ ಮತ್ತು ಯುವದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಯುವಸಂಭ್ರಮವು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆಯುತ್ತದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ. ಜಾನಪದ ನೃತ್ಯ ಸೇರಿದಂತೆ ವಿವಿಧ ಪ್ರಕಾರಗಳ ನೃತ್ಯಕಲಾವಿದರ ಪ್ರದರ್ಶನಗಳು ಗಮನ ಸೆಳೆಯುತ್ತವೆ. ವಿವಿಧ ಜಿಲ್ಲೆಗಳ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಯುವದಸರೆಯಲ್ಲಿ ಚಿತ್ರತಾರೆಯರು ಮತ್ತು ಖ್ಯಾತ ಗಾಯಕರು ಒಂದೆಡೆ ಸೇರುತ್ತಾರೆ. ತಮ್ಮ ನೆಚ್ಚಿನ ನಟರು, ನಟಿಯರು ಮತ್ತು ಗಾಯಕರನ್ನು ನೋಡಲು ಅಪಾರ ಸಂಖ್ಯೆಯ ಜನರು ಯುವದಸರೆಯಲ್ಲಿ ಸೇರುತ್ತಾರೆ.
ಕಂಬಳ
ಕರಾವಳಿ ಪ್ರದೇಶದ ಕೃಷಿ, ಸಂಸ್ಕೃತಿ ಮತ್ತು ಜಾನಪದ ಸಂಪ್ರದಾಯಗಳ ಸಂಕೇತವಾದ ‘ಕಂಬಳ’ವನ್ನು ಇದೇ ಮೊದಲ ಬಾರಿಗೆ ಮೈಸೂರು ದಸರೆಯಲ್ಲಿ ಆಯೋಜಿಸಲಾಗುತ್ತಿದೆ. ಚೆನ್ನಾಗಿ ಸಿದ್ಧಪಡಿಸಿದ ಕೆಸರುಗದ್ದೆಯಲ್ಲಿ ಉತ್ತಮ ತಳಿಯ ಕೋಣಗಳನ್ನು ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಾನಪದ ಸಂಪ್ರದಾಯಗಳೊಂದಿಗೆ ಆಳವಾದ ಸಂಬಂಧ ಹೊಂದಿದೆ.
ಮೇಳಗಳು
ದಸರಾ ಸಂದರ್ಭದಲ್ಲಿ ಕೃಷಿ ಮತ್ತು ಆಹಾರ ಮೇಳಗಳನ್ನು ನಡೆಸಲಾಗುತ್ತದೆ. ರಾಜ್ಯದ ವಿವಿಧ ಭಾಗಗಳ ಸ್ಥಳೀಯ ಮತ್ತು ವಿಶೇಷ ಖಾದ್ಯಗಳು ಮಳಿಗೆಗಳಲ್ಲಿ ಲಭ್ಯವಿರುತ್ತವೆ. ಆಹಾರಪ್ರಿಯರಿಗೆ ಈ ಮೇಳಗಳು ಆನಂದ ನೀಡುತ್ತವೆ. ಇಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುತ್ತದೆ. ಕೃಷಿಮೇಳವು ರೈತರಿಗೆ ಉಪಯುಕ್ತವಾಗಿದೆ. ವಿವಿಧ ತಳಿಗಳ ಬೆಳೆಗಳು ಮತ್ತು ಹಣ್ಣುಗಳನ್ನು ಪ್ರದರ್ಶಿಸಿ ಮಾರಾಟಕ್ಕೆ ಒದಗಿಸಲಾಗುತ್ತದೆ. ರೈತರಿಗೆ ಕೃಷಿ ಸಂಬಂಧಿತ ಸಲಹೆಗಳನ್ನು ನೀಡಲು ವಿಚಾರಗೋಷ್ಠಿಗಳನ್ನೂ ಆಯೋಜಿಸಲಾಗುತ್ತದೆ.
ಫಲಪುಷ್ಪ ಮತ್ತು ವಸ್ತುಪ್ರದರ್ಶನ
ಫಲಪುಷ್ಪ ಮತ್ತು ವಸ್ತುಪ್ರದರ್ಶನಗಳು ದಸರೆಯ ಪ್ರಮುಖ ಆಕರ್ಷಣೆಗಳು. ವಿವಿಧ ಬಗೆಯ ಹೂವುಗಳನ್ನು ಬಳಸಿ ಹಲವು ಮಾದರಿಗಳನ್ನು ರಚಿಸಿ ಪ್ರದರ್ಶಿಸಲಾಗುತ್ತದೆ. ಆಕರ್ಷಕ ಪುಷ್ಪಮಾದರಿಗಳು ಜನರ ಗಮನ ಸೆಳೆದು ಅನೇಕರಿಗೆ ಸೆಲ್ಫಿ ತಾಣಗಳಾಗುತ್ತವೆ. ವಸ್ತುಪ್ರದರ್ಶನದ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಸಾಧನೆಗಳನ್ನು ವಿವರಿಸಲಾಗುತ್ತದೆ. ರಾಜ್ಯ ಹಾಗೂ ದೇಶದ ಇತಿಹಾಸ ಮತ್ತು ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸಲು ಮಾದರಿಗಳನ್ನೂ ಪ್ರದರ್ಶಿಸಲಾಗುತ್ತದೆ.
ಗೊಂಬೆ ಪ್ರದರ್ಶನ
ಸ್ಥಳೀಯವಾಗಿ ‘ಗೊಂಬೆಹಬ್ಬ’ ಅಥವಾ ‘ಬೊಂಬೆಮನೆ’ ಎಂದು ಕರೆಯಲ್ಪಡುವ ಮೈಸೂರು ದಸರೆಯ ಗೊಂಬೆ ಪ್ರದರ್ಶನವು ಹಲವು ಶತಮಾನಗಳ ಸಂಪ್ರದಾಯವಾಗಿದೆ. ನವರಾತ್ರಿಯಲ್ಲಿ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸುಂದರವಾಗಿ ಹಾಗೂ ವ್ಯವಸ್ಥಿತವಾಗಿ ಜೋಡಿಸಿದ ಗೊಂಬೆಗಳು ಮತ್ತು ಪ್ರತಿಮೆಗಳನ್ನು ಪ್ರದರ್ಶಿಸಲಾಗುತ್ತದೆ. ಇವುಗಳಲ್ಲಿ ರಾಮಾಯಣದಂತಹ ಪೌರಾಣಿಕ ಮಹಾಕಾವ್ಯಗಳು, ದಸರಾ ಮೆರವಣಿಗೆಯ (ಜಂಬೂಸವಾರಿ) ದೃಶ್ಯಗಳು, ನವದುರ್ಗೆಯರು ಮತ್ತು ಅಷ್ಟಲಕ್ಷ್ಮಿಯರ ಜೊತೆಗೆ ಸಮಕಾಲೀನ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಬಿಂಬಿಸಲಾಗುತ್ತದೆ.
ಮಕ್ಕಳ ದಸರಾ
ಮಕ್ಕಳ ದಸರೆಯು ದಸರೆಯ ವಿಶೇಷ ಆಕರ್ಷಣೆ. ಮಕ್ಕಳ ದಸರೆಯ ಅಂಗವಾಗಿ ಮಕ್ಕಳಿಗಾಗಿ ವಿಶೇಷವಾಗಿ ರೂಪಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಶೇಷ ಸಾಧನೆ ತೋರಿದ ಮಕ್ಕಳು ಮಕ್ಕಳ ದಸರೆಯನ್ನು ಉದ್ಘಾಟಿಸುತ್ತಾರೆ.
ವಿಚಾರಗೋಷ್ಠಿಗಳು ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು
ಮೈಸೂರು ಖ್ಯಾತ ವಿದ್ವಾಂಸರು, ಸಾಹಿತಿಗಳು ಮತ್ತು ಕವಿಗಳ ನೆಲೆಯಾಗಿದೆ. ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಮೈಸೂರು ತನ್ನದೇ ಕೊಡುಗೆ ನೀಡಿದೆ. ಆದ್ದರಿಂದ ದಸರಾ ಸಂದರ್ಭದಲ್ಲಿ ಕವಿಗೋಷ್ಠಿಗಳು, ವಿಚಾರಗೋಷ್ಠಿಗಳು ಮತ್ತು ಸಂಗೀತ ಕಚೇರಿಗಳನ್ನು ಆಯೋಜಿಸಲಾಗುತ್ತದೆ. ದಸರಾ ಹಾಗೂ ಯುವಕವಿಗೋಷ್ಠಿ ಕಾರ್ಯಕ್ರಮಗಳ ಮೂಲಕ ಸಾಹಿತ್ಯಾಸಕ್ತರನ್ನು ಆಕರ್ಷಿಸಲಾಗುತ್ತದೆ. ಓದುಗರಿಗಾಗಿ ಪುಸ್ತಕಮೇಳವನ್ನೂ ನಡೆಸಲಾಗುತ್ತದೆ. ಸಂಗೀತಪ್ರಿಯರಿಗಾಗಿ ಅರಮನೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಖ್ಯಾತ ವಿದ್ವಾಂಸರು ಮತ್ತು ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಕಲಾಸಕ್ತರಿಗಾಗಿ ಚಲನಚಿತ್ರೋತ್ಸವಗಳು ಮತ್ತು ನಾಟಕ ಪ್ರದರ್ಶನಗಳನ್ನೂ ನಡೆಸಲಾಗುತ್ತದೆ.
ಪಂಜಿನ ಕವಾಯತು
ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆಯ ನಂತರ ಸಂಜೆ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ಅತ್ಯಂತ ಆಕರ್ಷಕ ಮತ್ತು ರೋಮಾಂಚಕಾರಿ ಸಮಾರೋಪ ಕಾರ್ಯಕ್ರಮವಾಗಿದೆ. ಪೊಲೀಸ್ ಪಥಸಂಚಲನ, ಸಾಹಸ ಪ್ರದರ್ಶನಗಳು ಮತ್ತು ಬಣ್ಣಬಣ್ಣದ ಮಿನುಗುವ ಪಂಜುಗಳ ದೃಶ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತವೆ. ಇದರಲ್ಲಿ ಆಕರ್ಷಕ ಅಶ್ವಾರೋಹಿ ಸಾಹಸಗಳು, ರೋಮಾಂಚಕ ಮೋಟಾರ್ಸೈಕಲ್ ಸಾಹಸ ಪ್ರದರ್ಶನಗಳು, ಪೊಲೀಸ್ ವಾದ್ಯವೃಂದದ ಸಂಗೀತ ಮತ್ತು ಪಂಜುಗಳೊಂದಿಗೆ ಸಾಮೂಹಿಕ ಪಥಸಂಚಲನ ಸೇರಿವೆ.
ರಾತ್ರಿಯ ಆಕಾಶದಲ್ಲಿ ಬಣ್ಣಬಣ್ಣದ ಸುಂದರ ಪಟಾಕಿ ಪ್ರದರ್ಶನದ ಜೊತೆಗೆ ಲೇಸರ್ ಅಥವಾ ಡ್ರೋನ್ ಪ್ರದರ್ಶನವೂ ಗಮನ ಸೆಳೆಯುತ್ತದೆ. ಈ ಕಾರ್ಯಕ್ರಮವು ದಸರೆಗೆ ಅಂತಿಮ ಮೆರಗು ನೀಡುತ್ತದೆ. ಅರಸರ ಕಾಲದಿಂದ ಮುಂದುವರಿದು ಬಂದ ಈ ಸಂಪ್ರದಾಯವು ದಸರಾ ಉತ್ಸವದ ಸಮಾರೋಪವನ್ನು ಸೂಚಿಸುತ್ತದೆ.
ಅರಮನೆಯೊಳಗಿನ ಸಾಂಪ್ರದಾಯಿಕ ಆಚರಣೆಗಳು ಮೈಸೂರಿನ ಒಡೆಯರ ಇತಿಹಾಸವನ್ನು ನೆನಪಿಸಿದರೆ, ಸಾರ್ವಜನಿಕ ದಸರಾ ಕಾರ್ಯಕ್ರಮಗಳು ಆ ಪರಂಪರೆಯನ್ನು ಜನಸಾಮಾನ್ಯರೊಂದಿಗೆ ಬೆಸೆಯುತ್ತವೆ.
ಮೈಸೂರು ದಸರಾ ಕೇವಲ ಧಾರ್ಮಿಕ ಹಬ್ಬವಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಕಲೆ, ಸಂಗೀತ, ನೃತ್ಯ, ಜಾನಪದ ಸಂಪ್ರದಾಯಗಳು ಮತ್ತು ಐತಿಹಾಸಿಕ ನೆನಪುಗಳನ್ನು ಒಂದೆಡೆ ಸೇರಿಸುವ ಸಂಭ್ರಮವಾಗಿದೆ.
ಸಮಾರೋಪ
ಮೈಸೂರು ದಸರಾ ಹಲವು ಶತಮಾನಗಳ ಇತಿಹಾಸ, ಧಾರ್ಮಿಕ ನಂಬಿಕೆಗಳು, ರಾಜಪರಂಪರೆ, ಕಲೆ, ಸಂಸ್ಕೃತಿ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ವಿಶಿಷ್ಟ ಸಂಗಮವಾಗಿದೆ. ವಿಜಯನಗರದ ಸಂಪ್ರದಾಯದಿಂದ ಮೈಸೂರು ಒಡೆಯರ ರಾಜವೈಭವಕ್ಕೆ ಮತ್ತು ಅಲ್ಲಿಂದ ಇಂದಿನ ನಾಡಹಬ್ಬದ ರೂಪದವರೆಗೆ ದಸರಾ ಹಲವು ಹಂತಗಳಲ್ಲಿ ವಿಕಸನಗೊಂಡಿದೆ.
ಬನ್ನಿ, ಈ ವರ್ಷದ ನಾಡಹಬ್ಬ ದಸರೆಯಲ್ಲಿ ನಾವೆಲ್ಲರೂ ಭಾಗವಹಿಸಿ ಅದರ ವೈವಿಧ್ಯಮಯ ಸಂಭ್ರಮಗಳನ್ನು ಆನಂದಿಸೋಣ!
(ಡಾ. ಶಾಲಿನಿ ರಜನೀಶ್)
ಸರ್ಕಾರದ ಮುಖ್ಯ ಕಾರ್ಯದರ್ಶಿ
ಈ ಲೇಖನವನ್ನು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಒದಗಿಸಿದೆ.

