Mysuru Dasara’s Golden Howdah Carrier, Arjuna, Loses Life in Wild Tusker Encounter | 8 ಬಾರಿ ಅಂಬಾರಿ ಹೊತ್ತು ಸಾಗಿದ್ದ ಅರ್ಜುನ ಆನೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಬಲಿ
ಮೈಸೂರು/ಹಾಸನ:
ಹಾಸನ ಜಿಲ್ಲೆಯ ಸಕಲೇಶಪುರದ ಎಳಸೂರು ಬಳಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆವೊಂದು ಕೊಂಬಿನಿಂದ ತಿವಿದಿದ್ದರಿಂದ ಅರ್ಜುನ ಆನೆ ಮೃತಪಟ್ಟಿದೆ.
ಅರ್ಜುನ ಆನೆ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು ನಾಯಕನಾಗಿ ಮುನ್ನಡೆಸುತ್ತಿದ್ದ. ಅರ್ಜುನ ಆನೆಗೆ 63 ವರ್ಷ ವಯಸ್ಸಾದ ಕಾರಣ ಕಳೆದ ವರ್ಷದಿಂದ ಚಿನ್ನದ ಅಂಬಾರಿಯನ್ನು ಹೊರಿಸುತ್ತಿರಲಿಲ್ಲ. ಆದರೆ ಜಂಬೂ ಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಇದನ್ನು ಬಳಸಿಕೊಳ್ಳಲಾಗುತ್ತಿತ್ತು.
ನಾಗರಹೊಳೆ ಪ್ರದೇಶದ ಬಳ್ಳೆ ಆನೆ ಶಿಬಿರದಲ್ಲಿದ್ದ ಅರ್ಜುನ ಆನೆಯನ್ನು ಕಾಡು ಪ್ರಾಣಿಗಳ ಕೂಂಬಿಂಗ್ ಕಾರ್ಯಚರಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಹುಲಿಗಳನ್ನು ಹಿಡಿಯುವಲ್ಲಿಯೂ ಬಹಳ ನೈಪುಣ್ಯತೆಯನ್ನು ಆನೆ ಹೊಂದಿತ್ತು.

ನಾಲ್ಕು ಸಾಕಾನೆಗಳೊಂದಿಗೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿದೆ.
ಸಾಕಾನೆ ಅರ್ಜುನ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದೆ. ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ಮಾವುತರು ಅರ್ಜುನನ ಮೇಲಿನಿಂದ ಇಳಿದು ಓಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
