ಬೆಂಗಳೂರು:
“ಗುತ್ತಿಗೆದಾರರು ರಾಜ್ಯಪಾಲರಿಗೆ ಪತ್ರಬರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ರಾಜ್ಯಪಾಲರಿಗಾದರೂ ಪತ್ರ ಬರೆಯಲಿ, ವಿರೋಧ ಪಕ್ಷ ಅಥವಾ ಆಡಳಿತ ಪಕ್ಷದವರನ್ನು ಕೇಳಲಿ. ಅವರಿಗೆ ನೋವಾಗಿದೆ. ಕೇಳುವುದರಲ್ಲಿ ತಪ್ಪಿಲ್ಲ. ನಮಗೆ ಯಾರಿಗೂ ತೊಂದರೆ ನೀಡುವ ಇಚ್ಛೆ ಇಲ್ಲ. ಸರಿಯಾಗಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಹಣ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಲವು ಗುತ್ತಿಗೆದಾರರು ನಮ್ಮ ಮೇಲೆ ಪ್ರೀತಿ ಅಭಿಮಾನ ತೋರಿಸುತ್ತಿದ್ದಾರೆ. ಅದನ್ನು ಬ್ಲ್ಯಾಕ್ ಮೇಲ್ ಎನ್ನುವುದಿಲ್ಲ. ನಮಗೆ ಅನೇಕ ವರದಿಗಳು ಬಂದಿದ್ದು, ಅವುಗಳ ನೈಜತೆ ಪರಿಶೀಲನೆ ಮಾಡುತ್ತಿದ್ದೇವೆ. ಯಾರು ಸರಿಯಾಗಿ ಕೆಲಸ ಮಾಡಿದ್ದಾರೋ ಅವರಿಗೆ ಹಣ ಕೊಡಲು ನಾವು ಬದ್ಧರಾಗಿದ್ದೇವೆ. ಈ ವಿಚಾರವಾಗಿ ನಾನು ಖಾಲಿ ಮಾತನಾಡುವುದಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಮಾಧ್ಯಮಗಳ ಮುಂದೆ ದಾಖಲೆಗಳ ಸಮೇತ ಮಾತನಾಡುತ್ತೇನೆ ಎಂದರು.
ಗುತ್ತಿಗೆದಾರರು ತಮ್ಮ ಬಿಲ್ ಪಾವತಿಸಬೇಕು ಅಥವಾ ನಮಗೆ ದಯಾಮರಣ ನೀಡಬೇಕು ಎಂದು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಇದು ‘ನನ್ನ ಸ್ನೇಹಿತರ’ ರಾಜಕೀಯ ಪ್ರೇರಿತ ಯೋಜನೆ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ನಮಗೆ ಗೊತ್ತಿದೆ. ಅವರಿಗೆ ನಾನು ಶುಭಕೋರುತ್ತೇನೆ. ಜನ ನಮ್ಮ ಮೇಲೆ ನಂಬಿಕೆ ಇಟ್ಟು ಭಾರಿ ಬಹುಮತ ಕೊಟ್ಟಿದ್ದಾರೆ. ಹೀಗಾಗಿ ನಾವು ಭ್ರಷ್ಟಾಚಾರ ತಡೆಯಬೇಕಿದೆ. ಲೋಕಾಯುಕ್ತ ಸಂಸ್ಥೆ ಅನೇಕ ಪ್ರಕರಣಗಳಲ್ಲಿ ಕಾಮಗಾರಿ ಆಗದೇ ಬಿಲ್ ಪಾವತಿ ಮಾಡಲಾಗಿರುವ ಬಗ್ಗೆ ವರದಿ ನೀಡಿದೆ. ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದರು. ಹೀಗಾಗಿ ನಾವು ಇದನ್ನು ಪರಿಶೀಲನೆ ಮಾಡುತ್ತೇವೆ. ಸರಿಯಾದ ರೀತಿಯಲ್ಲಿ ಕೆಲಸ ಮಾಡಿರುವ ಗುತ್ತಿಗೆದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.