ಬೆಂಗಳೂರು:
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬೆಂಗಳೂರಿನಲ್ಲಿ ಅಕ್ರಮವಾಗಿ ತಂಗಿದ್ದ ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ಶೋಧ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ, ಬೆಳ್ಳಂದೂರು ಪ್ರದೇಶದ ವಸತಿ ಪ್ರದೇಶದಲ್ಲಿ ಮೂವರು ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಭಯೋತ್ಪಾದಕ ಕೃತ್ಯಕ್ಕೆ ಸಂಚು: ಬೆಂಗಳೂರಿನಲ್ಲಿ ಎನ್ಐಎ ತಂಡ; ಬಂಧಿತ ಐವರು ಶಂಕಿತ ಉಗ್ರರ ವಿಚಾರಣೆ
ಅಕ್ರಮ ವಲಸಿಗರನ್ನು ಖಲೀಲ್ ಚಪರಾಸಿ, ಅಬ್ದುಲ್ ಖದೀರ್ ಮತ್ತು ಮೊಹಮ್ಮದ್ ಜಹೀದ್ ಎಂದು ಗುರುತಿಸಲಾಗಿದೆ. ಇವರೆಲ್ಲರನ್ನೂ ಎನ್‌ಐಎ ವಶಕ್ಕೆ ಪಡೆದು ಬೆಳ್ಳಂದೂರು ಠಾಣೆ ಪೊಲೀಸರಿಗೆ ಹಸ್ತಾಂತರಿಸಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.