ಎಲಿವೇಟೆಡ್ ಕಾರಿಡಾರ್ ಬರುತ್ತದೆ ಅಂತ ಗೊತ್ತಿದ್ದೂ ವೈಟ್ ಟಾಪಿಂಗ್ ಯಾಕೆ? ಮತ್ತೆ ಕಿತ್ತುಹಾಕಿ ಯಾರಿಗೆ ಬಿಲ್ ಮಾಡೋಕೆ?: ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಪ್ರಶ್ನೆ
ಬೆಂಗಳೂರು, ಜೂನ್ 22: ಎಲಿವೇಟೆಡ್ ಕಾರಿಡಾರ್ ಅಥವಾ ಫ್ಲೈಓವರ್ ನಿರ್ಮಾಣವಾಗಲಿರುವ ರಸ್ತೆಗಳಲ್ಲೇ ಮುಂಚಿತವಾಗಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವುದರ ಬಗ್ಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಎಲಿವೇಟೆಡ್ ಕಾರಿಡಾರ್ ಅಥವಾ ಫ್ಲೈಓವರ್ ಬರುತ್ತದೆ ಎಂದು ಮೊದಲೇ ಗೊತ್ತಿದ್ದರೂ ವೈಟ್ ಟಾಪಿಂಗ್ ಮಾಡುವುದು ಯಾಕೆ? ನಂತರ ಫ್ಲೈಓವರ್ ಕಾಮಗಾರಿ ಆರಂಭವಾದಾಗ ಅದನ್ನೇ ಮತ್ತೆ ಕಿತ್ತುಹಾಕಬೇಕು. ಹಾಗಾದರೆ ಈ ಬಿಲ್ ಯಾರಿಗೆ ಮಾಡೋಕೆ?” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಮಗ್ರ ಯೋಜನೆಯೊಂದಿಗೆ ಕಾಮಗಾರಿ ಅನುಷ್ಠಾನಕ್ಕೆ ಸೂಚನೆ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸಮನ್ವಯದಿಂದ ಜಾರಿಗೆ ತರುವುದು ಅಗತ್ಯ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ನಗರದ ಸಂಚಾರ ಸಮಸ್ಯೆಗಳ ಪರಿಹಾರಕ್ಕೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಿದ್ದು, ಅನೇಕ ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ಹೊಸ ಯೋಜನೆಗಳನ್ನು ಪ್ರಸ್ತಾಪಿಸುವ ಬದಲು ಈಗಾಗಲೇ ರೂಪಿಸಿರುವ ಯೋಜನೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.
ವೈಟ್ ಟಾಪಿಂಗ್ ಕಾಮಗಾರಿಗೆ ವೇಗ
ನಗರದ ಪ್ರಮುಖ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು 2016ರಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ 196 ಕಿ.ಮೀ. ರಸ್ತೆಗಳ ವೈಟ್ ಟಾಪಿಂಗ್ ಪೂರ್ಣಗೊಂಡಿದ್ದು, ಹೊಸದಾಗಿ 126 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಅದರಲ್ಲಿ 58 ಕಿ.ಮೀ. ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಒಂದು ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿಗೆ ಸರಾಸರಿ ₹10 ಕೋಟಿ ವೆಚ್ಚವಾಗುತ್ತದೆ. ಆದರೆ ಈ ರಸ್ತೆಗಳು 20 ರಿಂದ 30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಪದೇ ಪದೇ ಡಾಂಬರೀಕರಣ ಮಾಡುವುದಕ್ಕಿಂತ ಇದು ಆರ್ಥಿಕವಾಗಿ ಲಾಭದಾಯಕ ಎಂದು ಸಚಿವರು ಹೇಳಿದರು.
₹3,000 ಕೋಟಿಯಲ್ಲಿ 450 ಕಿ.ಮೀ. ವೈಟ್ ಟಾಪಿಂಗ್
2026-27ನೇ ಸಾಲಿನಲ್ಲಿ ₹3,000 ಕೋಟಿ ವೆಚ್ಚದಲ್ಲಿ 450 ಕಿ.ಮೀ. ಉದ್ದದ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಡಿಪಿಆರ್ ಸಿದ್ಧಪಡಿಸಿದೆ. ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಸುರಕ್ಷತಾ ಕ್ರಮ ಕಡ್ಡಾಯ
ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಸೂಚಿಸಿದರು.
ರಸ್ತೆ ಬದಿಯಲ್ಲಿ ಕಾಮಗಾರಿ ಸಾಮಗ್ರಿಗಳನ್ನು ರಾಶಿ ಹಾಕುವುದು, ಜೆಲ್ಲಿ ಕಲ್ಲುಗಳನ್ನು ಹಾಗೆಯೇ ಬಿಡುವುದು ಹಾಗೂ ರಸ್ತೆ ಅಗೆದು ನಿರ್ಲಕ್ಷ್ಯ ತೋರುವುದು ಸಂಚಾರ ದಟ್ಟಣೆಯನ್ನು ಹೆಚ್ಚಿಸುತ್ತದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಸುರಂಗ ಮಾರ್ಗ
ನಗರದ 16.7 ಕಿ.ಮೀ. ಉದ್ದದ ಉತ್ತರ-ದಕ್ಷಿಣ ಸುರಂಗ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ. ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭವಾಗಲಿದೆ.
ಇದರ ಜೊತೆಗೆ ಹಳೆ ಮದ್ರಾಸ್ ರಸ್ತೆಯಿಂದ ಮೈಸೂರು ರಸ್ತೆಯವರೆಗೆ 22 ಕಿ.ಮೀ. ಉದ್ದದ ಪೂರ್ವ-ಪಶ್ಚಿಮ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಿನ ಹಂತದಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಹೇಳಿದರು.
150 ಕಿ.ಮೀ. ಎಲಿವೇಟೆಡ್ ಕಾರಿಡಾರ್ ಗುರಿ
ನಗರದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ 150 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 75 ಕಿ.ಮೀ. ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ.
ಸಮಗ್ರ ಸಂಚಾರ ಪರಿಹಾರ ಯೋಜನೆ
ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಒಂದೇ ಯೋಜನೆ ಪರಿಹಾರವಾಗುವುದಿಲ್ಲ. ವೈಟ್ ಟಾಪಿಂಗ್ ರಸ್ತೆ, ಸುರಂಗ ಮಾರ್ಗ, ಎಲಿವೇಟೆಡ್ ಕಾರಿಡಾರ್, ಮೆಟ್ರೋ ಮತ್ತು ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆಗಳನ್ನು ಸಮನ್ವಯಗೊಳಿಸಿ ಕಾರ್ಯಗತಗೊಳಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ನಗರದಲ್ಲಿ 275 ಕಿ.ಮೀ. ಮೆಟ್ರೋ ಜಾಲ ನಿರ್ಮಿಸುವ ಗುರಿ ಹೊಂದಲಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹೊರ ವರ್ತುಲ ರಸ್ತೆ ಮರುವಿನ್ಯಾಸ
ಹೊರ ವರ್ತುಲ ರಸ್ತೆ (ORR) ಮರುವಿನ್ಯಾಸಕ್ಕಾಗಿ ₹450 ಕೋಟಿ ವೆಚ್ಚದ ಸಮಗ್ರ ಯೋಜನೆ ರೂಪಿಸಲಾಗಿದೆ. ಆದರೆ ಮೆಟ್ರೋ ಕಾಮಗಾರಿಯೊಂದಿಗೆ ಒಂದೇ ಸಮಯದಲ್ಲಿ ಕಾಮಗಾರಿ ಆರಂಭಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸಂಚಾರಿ ಪೊಲೀಸರೊಂದಿಗೆ ಸಮಾಲೋಚಿಸಿ ಸೂಕ್ತ ಸಮಯದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಬಿ-ಸ್ಮೈಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಆಯುಕ್ತ ಮಹೇಶ್ವರ ರಾವ್, ತಾಂತ್ರಿಕ ನಿರ್ದೇಶಕ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಮಾಲತಿ, ಮಾದೇಶ್, ವಿಶ್ವನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.