ಪೇಜಾವರ ಶ್ರೀ ವಿಶ್ವೇಶ ತೀರ್ಥರ ಜನ್ಮಶತಮಾನೋತ್ಸವದ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ
ಬೆಂಗಳೂರು: ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಪದ್ಮವಿಭೂಷಣ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಆಚರಣೆಯ ಲಾಂಛನವನ್ನು ಅನಾವರಣಗೊಳಿಸಿದರು.
ನರೇಂದ್ರ ಮೋದಿ ಅವರ X ಪೋಸ್ಟ್ — ಸೆಪ್ಟೆಂಬರ್ 22, 2026
ಮಂಗಳವಾರ ಕನ್ನಡದಲ್ಲಿ X ಪೋಸ್ಟ್ ಮಾಡಿರುವ ಮೋದಿ, ಭಕ್ತಿ, ಜ್ಞಾನ ಮತ್ತು ಸೇವೆಯಿಂದ ಕೂಡಿದ ದಿವಂಗತ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜೀವನವು ಅಸಂಖ್ಯಾತ ಜನರಿಗೆ ನಿರಂತರ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಜನ್ಮಶತಮಾನೋತ್ಸವದ ಅಂಗವಾಗಿ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳು ಅವರ ಉದಾತ್ತ ಆದರ್ಶಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಿವೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ದೆಹಲಿಯಲ್ಲಿ 39ನೇ ಚಾತುರ್ಮಾಸ್ಯ ವ್ರತದಲ್ಲಿದ್ದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಧ್ಯಾನ, ಸಂಯಮ ಮತ್ತು ಆಂತರಿಕ ಜಾಗೃತಿಯ ಮೂಲಕ ವೈರಾಗ್ಯದ ಉನ್ನತ ಗುಣವನ್ನು ಚಾತುರ್ಮಾಸ್ಯ ವ್ರತ ಪರಿಚಯಿಸುತ್ತದೆ ಎಂದು ಶಾ ಹೇಳಿದ್ದಾರೆ.
ಅಮಿತ್ ಶಾ ಅವರ X ಪೋಸ್ಟ್ — ಸೆಪ್ಟೆಂಬರ್ 21, 2026
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ನವದೆಹಲಿಯ ವಸಂತ್ ಕುಂಜ್ನ ಶ್ರೀ ವೇದವ್ಯಾಸ ಗುರುಕುಲದಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದ ಪೇಜಾವರ ಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಎಚ್.ಡಿ. ಕುಮಾರಸ್ವಾಮಿ ಅವರ X ಪೋಸ್ಟ್ — ಸೆಪ್ಟೆಂಬರ್ 22, 2026
ಮೂವರು ನಾಯಕರು ಸ್ವಾಮೀಜಿಯವರೊಂದಿಗಿನ ಭೇಟಿಯ ಛಾಯಾಚಿತ್ರಗಳನ್ನು Xನಲ್ಲಿ ಹಂಚಿಕೊಂಡಿದ್ದಾರೆ.
