ಸೆಮಿಕಂಡಕ್ಟರ್ ವಿದ್ಯಾರ್ಥಿ ವಿನಿಮಯಕ್ಕೆ ಒತ್ತು: ಸಿಂಗಾಪುರ ಉದ್ಯಮ ಸಂಘಟನೆಯೊಂದಿಗೆ ಎಂ ಬಿ ಪಾಟೀಲ ಚರ್ಚೆ
ಬೆಂಗಳೂರು: ಬೆಂಗಳೂರಿನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ಕ್ಷೇತ್ರದ ವಿದ್ಯಾರ್ಥಿ ವಿನಿಮಯ ಹಾಗೂ ಉದ್ಯಮ–ಶಿಕ್ಷಣ ಸಂಸ್ಥೆಗಳ ಸಹಯೋಗದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು, ಸಿಂಗಾಪುರ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ (ಎಸ್ಎಸ್ಐಎ) ಜೊತೆ ಸಚಿವ ಎಂ ಬಿ ಪಾಟೀಲ ನಡೆಸಿದ ಚರ್ಚೆಯ ಪ್ರಮುಖ ವಿಷಯವಾಗಿತ್ತು.
ಕರ್ನಾಟಕದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಉನ್ನತ ಮಟ್ಟದ ನಿಯೋಗದೊಂದಿಗೆ ಸಿಂಗಾಪುರಕ್ಕೆ ತೆರಳಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು, ಬುಧವಾರ ಎಸ್ಎಸ್ಐಎ ಹಾಗೂ ಸಿಂಗಾಪುರ ಬಿಸಿನೆಸ್ ಫೆಡರೇಷನ್ (ಎಸ್ಬಿಎಫ್) ಹಿರಿಯ ಪ್ರತಿನಿಧಿಗಳನ್ನು ಭೇಟಿಯಾದರು ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.
ಸೆಮಿಕಂಡಕ್ಟರ್ ಪ್ರತಿಭೆಗಳ ಅಭಿವೃದ್ಧಿಗೆ ಸಹಯೋಗ
ಕರ್ನಾಟಕದ ಸೆಮಿಕಂಡಕ್ಟರ್ ವಲಯದಲ್ಲಿನ ಹೂಡಿಕೆ ಅವಕಾಶಗಳ ಜೊತೆಗೆ, ಪ್ರತಿಭೆಗಳ ಅಭಿವೃದ್ಧಿಗೆ ಸಹಕಾರ ಬಲಪಡಿಸುವುದು ಹಾಗೂ ವಿದ್ಯಾರ್ಥಿ ವಿನಿಮಯ ಮತ್ತು ಉದ್ಯಮ–ಶಿಕ್ಷಣ ಸಂಸ್ಥೆಗಳ ಸಹಯೋಗದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕುರಿತು ಎಸ್ಎಸ್ಐಎ ಜೊತೆ ಚರ್ಚಿಸಲಾಗಿದೆ ಎಂದು ಪಾಟೀಲ ತಿಳಿಸಿದರು.
ಬೆಂಗಳೂರಿನಲ್ಲಿ ಲ್ಯಾಮ್ ರಿಸರ್ಚ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಸೇರಿದಂತೆ ಸೆಮಿಕಂಡಕ್ಟರ್ ಕಂಪನಿಗಳ ಮುಂಬರುವ ಹೂಡಿಕೆಗಳನ್ನೂ ನಿಯೋಗ ಪ್ರಸ್ತಾಪಿಸಿತು. ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶ 2027ರಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ಪಾಟೀಲ ಹೇಳಿದರು.
ಸಿಂಗಾಪುರ ಕಂಪನಿಗಳಿಗೆ ನೆರವಾಗಲಿರುವ ಬೆಂಗಳೂರಿನ ಎಸ್ಬಿಎಫ್ ಕೇಂದ್ರ
34,000ಕ್ಕೂ ಹೆಚ್ಚು ಕಂಪನಿಗಳನ್ನು ಪ್ರತಿನಿಧಿಸುವ ಸಿಂಗಾಪುರದ ಪ್ರಮುಖ ಉದ್ಯಮ ಸಂಘಟನೆಯಾದ ಎಸ್ಬಿಎಫ್, ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ ಆಗ್ನೇಯ ಏಷ್ಯಾದ ಹೊರಗಿನ ತನ್ನ ಮೊದಲ ಸಿಂಗಾಪುರ ಎಂಟರ್ಪ್ರೈಸ್ ಸೆಂಟರ್ ಅನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಸ್ಥಾಪಿಸಿದೆ ಎಂದು ಪಾಟೀಲ ತಿಳಿಸಿದರು.
ಭಾರತದಲ್ಲಿ ಪ್ರವೇಶಿಸಲು ಮತ್ತು ವ್ಯವಹಾರ ವಿಸ್ತರಿಸಲು ಬಯಸುವ ಸಿಂಗಾಪುರ ಕಂಪನಿಗಳಿಗೆ ಮಾರುಕಟ್ಟೆ ಸಲಹೆ, ಸಂಪರ್ಕ ಜಾಲ, ಸೂಕ್ತ ವ್ಯವಹಾರ ಪಾಲುದಾರರ ಸಂಪರ್ಕ ಹಾಗೂ ಸ್ಥಳೀಯ ಮಟ್ಟದ ನೆರವನ್ನು ಈ ಕೇಂದ್ರ ಒದಗಿಸಲಿದೆ ಎಂದು ಅವರು ಹೇಳಿದರು.
ಸಿಂಗಾಪುರ ಮತ್ತು ಕರ್ನಾಟಕದ ನಡುವೆ ಉದ್ಯಮ ಸಂಪರ್ಕ ಹಾಗೂ ಹೂಡಿಕೆಗೆ ಅನುಕೂಲವಾಗುವಂತೆ ಎಸ್ಬಿಎಫ್ ಮತ್ತು ರಾಜ್ಯ ಸರ್ಕಾರದ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆಯೂ ಚರ್ಚಿಸಲಾಯಿತು.
ಎಸ್ಬಿಎಫ್–ಇಂಡಿಯಾ ಬಿಸಿನೆಸ್ ಕೌನ್ಸಿಲ್ ಅಧ್ಯಕ್ಷ ಪ್ರಸೂನ್ ಮುಖರ್ಜಿ, ಎಸ್ಬಿಎಫ್ನ ಎಸ್ಎಎಂಇಎ ವಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಸಮಂತಾ ಟಿಯೊ ಚರ್ಚೆಯಲ್ಲಿ ಪಾಲ್ಗೊಂಡರು. ಎಸ್ಎಸ್ಐಎ ಕಾರ್ಯನಿರ್ವಾಹಕ ನಿರ್ದೇಶಕ ಆಂಗ್ ವೀ ಸೆಂಗ್ ಕೂಡ ಭಾಗವಹಿಸಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಕರ್ನಾಟಕದ ನಿಯೋಗದಲ್ಲಿದ್ದಾರೆ. ಗುರುವಾರ ಮತ್ತು ಶುಕ್ರವಾರ ಪ್ರಮುಖ ಕಂಪನಿಗಳೊಂದಿಗೆ ಮುಂದಿನ ಸಭೆಗಳನ್ನು ನಡೆಸಲು ಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
